ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ: ಭಾರತೀಯರಿಗೆ ತೊಂದರೆಯಿಲ್ಲ ಎಂದ ಪ್ರಧಾನಿ ಮೋದಿ

ಲೋಕಸಭೆಯಲ್ಲಿ ಪ್ರಧಾನಿ ಅಭಯ
Last Updated 6 ಫೆಬ್ರುವರಿ 2020, 18:30 IST
ಅಕ್ಷರ ಗಾತ್ರ

ನವದೆಹಲಿ: ‘ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ (ಸಿಎಎ) ದೇಶದ ಯಾವುದೇ ನಾಗರಿಕರ ಮೇಲೆ ಪರಿಣಾಮ ಉಂಟಾಗುವುದಿಲ್ಲ. ಅಲ್ಪಸಂಖ್ಯಾತರ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಗುರುವಾರ ಸ್ಪಷ್ಟಪಡಿಸಿದರು.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣ ಮೇಲಿನ ವಂದನಾ ನಿರ್ಣಯಕ್ಕೆ ಸಂಬಂಧಿಸಿ ನಡೆದ ಚರ್ಚೆಯಲ್ಲಿ ಉತ್ತರಿಸಿದ ಅವರು, ‘ಕಾಂಗ್ರೆಸ್‌ ಹಾಗೂ ಎಡಪಂಥೀಯರು ಪ್ರತಿಭಟನಕಾರರನ್ನು ಪ್ರಚೋದಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ ತನ್ನ ಸ್ವಾರ್ಥಕ್ಕಾಗಿ ರಾಜಕೀಯ ಮಾಡಿದೆ. ಯಾವೊಬ್ಬ ನಾಯಕರು ಸ್ವತಂತ್ರವಾಗಿ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿಯನ್ನು ಕಾಂಗ್ರೆಸ್‌ ನಿರ್ಮಾಣ ಮಾಡಿತ್ತು’ ಎಂದು ಹೇಳಿದರು.

ಸಿಎಎ ಜಾರಿಗೆ ಬರುವುದರಿಂದ ಭಾರತೀಯರಿಗೆ ತೊಂದರೆಯಾಗುವುದಿಲ್ಲ ಎಂದು 90 ನಿಮಿಷಗಳವರೆಗೆ ಮೋದಿ ಮಾತನಾಡಿದರು. ನಂತರ ಧ್ವನಿ ಮತದ ಮೂಲಕ ನಿರ್ಣಯ ಅಂಗೀಕರಿಸಲಾಯಿತು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ‘1984ರಲ್ಲಿ ನಡೆದ ಸಿಖ್‌ ವಿರೋಧಿ ಗಲಭೆಗೆ ಸಹಕಾರ ನೀಡಿದವರನ್ನು ಮುಖ್ಯಮಂತ್ರಿ ಮಾಡಿದೆ. ತಮ್ಮ ಪಕ್ಷ ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ಗೆ ಸಿಖ್‌ ವಿರೋಧಿ ಗಲಭೆ ನೆನಪಿಲ್ಲವೇ? ಆ ಪಕ್ಷಕ್ಕೆ ನಾಚಿಕೆಯಾಗಬೇಕು.ತಪ್ಪಿತಸ್ಥರನ್ನು ಶಿಕ್ಷಿಸಲು ಎಂದೂ ಪ್ರಯತ್ನಿಸಲಿಲ್ಲ’ ಎಂದುಆಪಾದಿಸಿದರು.

ಜಮ್ಮು–ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿ ರದ್ದಾದ ನಂತರ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಹಾಗೂ ಒಮರ್‌ ಅಬ್ದುಲ್ಲಾ ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದ ಅವರು, ‘1990ರ ಜನವರಿ 19 ರಂದೇ ಕಾಶ್ಮೀರದ ಅನನ್ಯತೆಯನ್ನು ಸಮಾಧಿ ಮಾಡಲಾಯಿತು. ಭಯೋತ್ಪಾದನೆಯಿಂದಾಗಿ ಕಾಶ್ಮೀರಿ ಪಂಡಿತರು ಕಣಿವೆಯನ್ನು ಬಿಡಬೇಕಾಯಿತು ಇದನ್ನು ಯಾರಾದರೂ ಮರೆಯಲು ಸಾಧ್ಯವಿದೆಯೇ’ ಎಂದು ಪ್ರಶ್ನಿಸಿದದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT