ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಷನಲ್‌ ಹೆರಾಲ್ಡ್‌: ಯಥಾಸ್ಥಿತಿಗೆ ಸೂಚನೆ

ನ್ಯಾಷನಲ್‌ ಹೆರಾಲ್ಡ್‌ ಕಟ್ಟಡ ಭೋಗ್ಯ ಅವಧಿ ವಿವಾದ
Last Updated 15 ನವೆಂಬರ್ 2018, 18:29 IST
ಅಕ್ಷರ ಗಾತ್ರ

ನವದೆಹಲಿ:ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಪ್ರಕಾಶನ ಸಂಸ್ಥೆಯಾಗಿರುವ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌) ಗೆ ನೀಡಿರುವ ಕಟ್ಟಡದ ಭೋಗ್ಯ ಅವಧಿ ಮುಕ್ತಾಯಕ್ಕೆ ಸಂಬಂಧಿಸಿದಂತೆ ನವೆಂಬರ್‌ 22ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.

ಕಳೆದ ಹತ್ತು ವರ್ಷಗಳಿಂದ ಈ ಕಟ್ಟಡದಲ್ಲಿ ಯಾವುದೇ ಪತ್ರಿಕೆ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ, ಕಟ್ಟಡದಲ್ಲಿನ ಕಚೇರಿ ಖಾಲಿ ಮಾಡಿ, ನವೆಂಬರ್‌ 15ರೊಳಗೆ ಕೇಂದ್ರ ಸರ್ಕಾರದ ವಶಕ್ಕೆ ಒಪ್ಪಿಸುವಂತೆ ನಗರಾಭಿವೃದ್ಧಿ ಸಚಿವಾಲಯ ಕಳೆದ ಅಕ್ಟೋಬರ್‌ 30ರಂದು ಎಜೆಎಲ್‌ಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ, ಎಜೆಎಲ್‌ ನವೆಂಬರ್‌ 22ಕ್ಕೆ ಕೋರ್ಟ್‌ ಮೊರೆ ಹೋಗಿತ್ತು. 56 ವರ್ಷಗಳಿಂದ ಈ ಕಟ್ಟಡದಲ್ಲಿ ಎಜೆಎಲ್‌ ಕಾರ್ಯ ನಿರ್ವಹಿಸುತ್ತಿದೆ.

‘ಯಥಾಸ್ಥಿತಿ ಕಾಯ್ದುಕೊಳ್ಳುವುದು ಎಂದರೆ, 22ರವರೆಗೆ ಯಾವುದೇ ಅಧಿಕಾರಿಯು, ಕಟ್ಟಡವನ್ನು ವಶಪಡಿಸಿಕೊಳ್ಳಲು ಮುಂದಾಗಬಾರದು. ಆದರೆ, ನಗರಾಭಿವೃದ್ಧಿ ಸಚಿವಾಲಯದ ಭೂ ಮತ್ತು ಅಭಿವೃದ್ಧಿ ಅಧಿಕಾರಿಗಳು ನ್ಯಾಷನಲ್‌ ಹೆರಾಲ್ಡ್‌ ಕಚೇರಿ ಆವರಣ ಪ್ರವೇಶಿಸಿ ಪರಿಶೀಲನೆ ನಡೆಸಿದ್ದಾರೆ’ ಎಂದು ಎಜೆಎಲ್‌ ಪರ ವಕೀಲ ಅಭಿಷೇಕ್‌ ಎಂ. ಸಿಂಘ್ವಿ ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಇದಕ್ಕೆ ಸಾಕ್ಷ್ಯ ಒದಗಿಸುವಂತೆ ಕೇಳಿದರು. ಈ ಕುರಿತು ಕೆಲವು ಫೋಟೊಗಳನ್ನು ಪ್ರದರ್ಶಿಸಿದ ಸಿಂಘ್ವಿ, ‘ಗೋಪಾಲ್‌ ರಸ್ತೋಗಿ ಮತ್ತು ಕೆ.ಆರ್. ರಾಣಾ ಎಂಬ ಇಬ್ಬರು ಅಧಿಕಾರಿಗಳು ಕಟ್ಟಡವನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು’ ಎಂದು ತಿಳಿಸಿದರು.

‘ಅಧಿಕಾರಿಗಳು ಈ ರೀತಿ ಕಟ್ಟಡವನ್ನು ವಶಕ್ಕೆ ಪಡೆಯಲು ಮುಂದಾಗಬಾರದು’ ಎಂದು ನ್ಯಾಯಾಲಯ ಹೇಳಿತು.

1962ರ ಆಗಸ್ಟ್ 2ರಿಂದ ಈ ಕಟ್ಟಡವನ್ನು ಎಜೆಎಲ್‌ ಭೋಗ್ಯಕ್ಕೆ ಪಡೆದಿದ್ದು, ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ನಡೆಸುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪ್ರಕಟವಾಗುತ್ತಿಲ್ಲವಾದರೂ, ಇದರ ಇಂಗ್ಲಿಷ್‌ ಮತ್ತು ಉರ್ದು ಆವೃತ್ತಿಯು ಡಿಜಿಟಲ್‌ ಮಾಧ್ಯಮ ಪ್ರಕಟವಾಗುತ್ತಿದೆ ಎಂದು ಸಿಂಘ್ವಿ ನ್ಯಾಯಾಲಯದ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT