ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಪಕ್ಷೀಯ ಬಂಧ: ರಾಷ್ಟ್ರ ಹಿತಾಸಕ್ತಿಯೇ ಮುಂದೆ

ರಷ್ಯಾದಿಂದ ಸೇನಾ ಸಲಕರಣೆ ಖರೀದಿ: ಅಮೆರಿಕಕ್ಕೆ ಸ್ಪಷ್ಟ ಸಂದೇಶ ಕೊಟ್ಟ ಭಾರತ
Last Updated 26 ಜೂನ್ 2019, 19:53 IST
ಅಕ್ಷರ ಗಾತ್ರ

ನವದೆಹಲಿ: ಇತರ ದೇಶಗಳ ಜತೆಗಿನ ಸಂಬಂಧದಲ್ಲಿ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ ಎಂದು ಅಮೆರಿಕಕ್ಕೆ ಭಾರತ ಸ್ಪಷ್ಟವಾಗಿ ಹೇಳಿದೆ. ರಷ್ಯಾದಿಂದ ಎಸ್‌400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೂ ಇದು ಅನ್ವಯ ಎಂದು ತಿಳಿಸಿದೆ.

ರಷ್ಯಾದಿಂದ ಸೇನಾ ಸಲಕರಣೆ ಖರೀದಿಸಲು ಭಾರತ ಮಾಡಿಕೊಂಡಿರುವ ಒಪ್ಪಂದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಅಮೆರಿಕದ ಕಾನೂನಿನ ಪ್ರಕಾರ ಭಾರತದ ಮೇಲೆ ನಿರ್ಬಂಧ ಹೇರುವುದಕ್ಕೂ ಅವಕಾಶ ಇದೆ. ಹಾಗಿದ್ದರೂ ಒಪ್ಪಂದದಿಂದ ಹಿಂದೆ ಸರಿಯುವುದಿಲ್ಲ ಎಂದು ಭಾರತ ಹೇಳಿದೆ.

ಎಸ್‌–400 ಖರೀದಿ ಒಪ್ಪಂದದಂತಹ ವಿಚಾರದಲ್ಲಿ ಉಂಟಾಗಿರುವ ಕಿರಿಕಿರಿಯನ್ನು ತಪ್ಪಿಸಲು ಎರಡೂ ದೇಶಗಳು ಶ್ರಮಿಸಬೇಕು ಎಂದು ಭಾರತ ಹೇಳಿದೆ.

‘ಹಲವು ದೇಶಗಳ ಜತೆಗೆ ನಮಗೆ ವಿವಿಧ ನೆಲೆಯ ಸಂಬಂಧ ಇದೆ. ಈ ಸಂಬಂಧಗಳಿಗೆ ಅದರದ್ದೇ ಆದ ಇತಿಹಾಸವೂ ಇದೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಏನು ಮುಖ್ಯವೋ ಅದನ್ನೇ ಮಾಡುತ್ತೇವೆ. ಪರಸ್ಪರರ ರಾಷ್ಟ್ರೀಯ ಹಿತಾಸಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ರಕ್ಷಣಾ ಪಾಲುದಾರಿಕೆಯ ಭಾಗವೂ ಹೌದು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಜತೆಗಿನ ಮಾತುಕತೆಯ ಬಳಿಕ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಜೈಶಂಕರ್‌ ಅವರು ಯಾವುದೇ ದೇಶವನ್ನು ಉಲ್ಲೇಖಿಸಿಲ್ಲ. ಆದರೆ, ಅದು ರಷ್ಯಾ ಜತೆಗಿನ ಎಸ್‌–400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಒಪ್ಪಂದ ಎಂಬುದು ಸ್ಪಷ್ಟ. ಇದು ₹39 ಸಾವಿರ ಕೋಟಿ ಮೊತ್ತದ ಒಪ್ಪ‍ಂದ. ಕಳೆದ ವರ್ಷ ಈ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ನಿರ್ಬಂಧಗಳ ಮೂಲಕ ಅಮೆರಿಕದ ಎದುರಾಳಿಗಳಿಗೆ ತಿರುಗೇಟು ಎಂಬ ಕಾಯ್ದೆ ಅಮೆರಿಕದಲ್ಲಿ ಜಾರಿಯಲ್ಲಿದೆ. ಅದರ ಪ್ರಕಾರ, ರಷ್ಯಾ, ಇರಾನ್‌ ಮತ್ತು ಉತ್ತರ ಕೊರಿಯಾ ಜತೆಗೆ ಸೇನಾ ಸಲಕರಣೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ದೇಶಗಳ ಮೇಲೆ ನಿರ್ಬಂಧ ಹೇರಲು ಅವಕಾಶ ಇದೆ. ಇದನ್ನೇ ಮುಂದಿಟ್ಟುಕೊಂಡು ಒಪ್ಪಂದದಿಂದ ಹೊರಗೆ ಬರುವಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ.

ಜೈಶಂಕರ್‌ ಮತ್ತು ಪಾಂಪಿಯೊ ನಡುವಣ ಮೊದಲ ಭೇಟಿ ಬುಧವಾರ ನಡೆಯಿತು. ರಷ್ಯಾ ಜತೆಗಿನ ಒಪ್ಪಂದ, ಇರಾನ್‌ನಿಂದ ತೈಲ ಖರೀದಿ ಒಪ್ಪಂದದ ಬಿಕ್ಕಟ್ಟು ಮತ್ತು ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿ ಹಲವು ಸಮಸ್ಯೆಗಳು ಈ ಸಂದರ್ಭದಲ್ಲಿ ಮುಖ್ಯವಾಗಿವೆ.

ಭಾರತವು ಅಮೆರಿಕದ ಬಹುಮುಖ್ಯವಾದ ಗೆಳೆಯ ಮತ್ತು ಪಾಲುದಾರ. ಸದ್ಯಕ್ಕೆ ನಮ್ಮ ಮುಂದೆ ಕೆಲವು ಸಮಸ್ಯೆಗಳಿವೆ. ಇವುಗಳೆಲ್ಲವನ್ನೂ ಪರಿಹರಿಸುತ್ತೇವೆ. ನಮ್ಮ ಸಂಬಂಧ ಇನ್ನಷ್ಟು ಬಲವಾಗಲಿದೆ ಎಂದು ಪಾಂಪಿಯೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT