ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆ ಖಂಡಿಸಿ ದೇಶದ ಹಲವೆಡೆ ಪ್ರತಿಭಟನೆ

ಸತತ 19ನೇ ದಿನವೂ ಇಂಧನಬೆಲೆ ಏರಿಕೆ
Last Updated 25 ಜೂನ್ 2020, 16:46 IST
ಅಕ್ಷರ ಗಾತ್ರ

ನವದೆಹಲಿ :‌ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ವಿರೋಧ ಪಕ್ಷಗಳು ದೇಶದ ಹಲವೆಡೆ ಗುರುವಾರ ಪ್ರತಿಭಟನೆ ನಡೆಸಿವೆ. ಕಾಂಗ್ರೆಸ್ ಕಾರ್ಯಕರ್ತರು ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.‌

ಕಾಂಗ್ರೆಸ್‌ನ, ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರು ಭೋಪಾಲ್‌ನಲ್ಲಿ ಸೈಕಲ್ ಜಾಥಾ ನಡೆಸಿ ಪ್ರತಿಭಟಿಸಿದರು. ಪ‍ಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಸಿದ್ದರು. ಅನುಮತಿ ಪಡೆಯದೇ ಪ್ರತಿಭಟನೆ ನಡೆಸಲಾಗಿದೆ ಎಂದು ದಿಗ್ವಿಜಯ ಸಿಂಗ್‌ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಬಡೆದು, ಬಿಡುಗಡೆ ಮಾಡಿದ್ದಾರೆ. ಲಖನೌನಲ್ಲಿ 150ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಬಿಡುಗಡೆ ಮಾಡಿದರು.

ದೆಹಲಿಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಚಟ್ಟದ ಮೇಲೆ ಮೋಟರ್‌ಬೈಕ್ ಹೇರಿಕೊಂಡು ಪ್ರತಿಭಟನೆ ನಡೆಸಿದರು. ಬಾಯಿಬಡಿದುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಸ್ಸಾಂ, ಮಣಿಪುರ, ಛತ್ತೀಸಗಡ, ಹರಿಯಾಣ, ಉತ್ತರಪ್ರದೇಶ, ಬಿಹಾರ, ತಮಿಳುನಾಡಿನಲ್ಲಿ ಪ್ರತಿಭಟನೆ ನಡೆದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ #fuelpricehike ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಮೋದಿ, ಸ್ಮೃತಿ ವಿಡಿಯೊ ವೈರಲ್

ಇಂಧನ ಬೆಲೆ ಏರಿಕೆ ಖಂಡಿಸಿ, ಯುಪಿಎ ಸರ್ಕಾರದ ವಿರುದ್ಧ ನರೇಂದ್ರ ಮೋದಿ (ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ) ಮತ್ತು ಸ್ಮೃತಿ ಇರಾನಿ ಅವರು ನೀಡಿದ್ದ ಹೇಳಿಕೆಗಳ ಹಳೆಯ ವಿಡಿಯೊ ಈಗ ವೈರಲ್ ಆಗಿದೆ. ಬೆಲೆ ಏರಿಕೆಯನ್ನು ಮೋದಿ ಮತ್ತು ಸ್ಮೃತಿ ಖಂಡಿಸಿದ್ದರು. ಈಗ ಅವರ ಅಧಿಕಾರದಲ್ಲಿ ಬೆಲೆಯನ್ನು ಏರಿಸುತ್ತಲೇ ಇದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಧನಗಳ ಬೆಲೆಯನ್ನು ತಕ್ಷಣವೇ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಪೆಟ್ರೋಲ್ ಬೆಲೆಯಲ್ಲಿ ಆಗಿರುವ ಭಾರಿ ಏರಿಕೆಯು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಇದು ಗುಜರಾತ್‌ನ ಕೋಟ್ಯಂತರ ಜನರ ಹೊರೆಯನ್ನು ಹೆಚ್ಚಿಸುತ್ತದೆ’ ಎಂದು ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಟ್ವೀಟ್ ಈಗ ಮರುಟ್ವೀಟ್ ಆಗಿದೆ. ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.

‘ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆ ಆಗುತ್ತಿದ್ದರೂ, ಮೋದಿ ಸರ್ಕಾರವು ತೆರಿಗೆ ಏರಿಕೆ ಮಾಡಿ ಇಂಧನಗಳ ಬೆಲೆ ಏರಿಸುತ್ತಿದೆ. ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆಯಲ್ಲಿ ಮಾತ್ರ ಮೋದಿ ಅವರ ವಿಕಾಸ ಗೋಚರವಾಗುತ್ತಿದೆ’ ಎಂದು ಶೃತಿ (@Shru_9876) ಎಂಬುವವರು ಟ್ವೀಟ್ ಮಾಡಿದ್ದಾರೆ.

ಬೆಲೆ ಏರಿಕೆಗೆ ಆಕ್ರೋಶ

2014ರಲ್ಲಿ ಡೀಸೆಲ್‌ ಮೇಲಿನ ಅಬಕಾರಿ ಸುಂಕ ₹ 3.56, ಪೆಟ್ರೋಲ್‌ಗೆ ₹ 9.40 ಇತ್ತು. ಮೋದಿ ಸರ್ಕಾರವು ಸುಂಕವನ್ನು 10 ಪಟ್ಟು ಏರಿಕೆ ಮಾಡಿದೆ. ಈಗ ಡೀಸೆಲ್‌ಗೆ ₹ 31.83 ಮತ್ತು ಪೆಟ್ರೋಲ್‌ಗೆ ₹ 32.98 ಸುಂಕ ತೆರಬೇಕಿದೆ

ಶರದ್ ಯಾದವ್, ಎಲ್‌ಜೆಡಿ ನಾಯಕ

–––––––––––––––

ಪ್ರಧಾನಿ ಮನದ ಮಾತಿನಲ್ಲಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಮಾತನಾಡಲು ಸಲಹೆ ನೀಡುವಂತೆ ಜನರನ್ನು ಕೋರುತ್ತಾರೆ. ಈ ಬಾರಿ ಜನರು ‘ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡಿ’ ಎಂದು ಕೇಳಬೇಕು

ಮೋಹನ್ ಜೋಶಿ, ಮಹಾರಾಷ್ಟ್ರ ಕಾಂಗ್ರೆಸ್‌ನ ಕಾರ್ಯದರ್ಶಿ

–––––––––––––––

ಇಂಧನಗಳ ಬೆಲೆ ಏರಿಕೆಗೂ, ಹಣದುಬ್ಬರಕ್ಕೂ ನೇರ ಸಂಬಂಧವಿದೆ. ಡೀಸೆಲ್ ಬೆಲೆ ಏರಿದರೆ ಸಾಗಣೆ ವೆಚ್ಚ ಏರಿ, ಎಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಬೇಸಾಯದ ವೆಚ್ಚವೂ ಏರಿಕೆಯಾಗಲಿದೆ. ಇದರ ಹೊರೆ ಜನರು ಹೊರಬೇಕಾಗುತ್ತದೆ

ಬಿ.ಎಸ್.ಹೂಡಾ, ಹರಿಯಾಣದ ಮಾಜಿ ಮುಖ್ಯಮಂತ್ರಿ

–––––––––––––––

ಇದು 70 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಏರಿಕೆ. ಕೇಂದ್ರ ಸರ್ಕಾರವು ತಕ್ಷಣವೇ ಅಬಕಾರಿ ಸುಂಕವನ್ನು ಇಳಿಕೆ ಮಾಡಬೇಕು. ಜನರ ಮೇಲಿನ ಹೊರೆಯನ್ನು ತಕ್ಷಣವೇ ಇಳಿಸಬೇಕು. ಪ್ರಧಾನಿಯವರು ಇದನ್ನು ಶೀಘ್ರ ಪರಿಹರಿಸಬೇಕು

ಸುಪ್ರಿಯಾ ಸುಳೆ, ಎನ್‌ಸಿಪಿ ಸಂಸದೆ

–––––––––––––

ಕೋವಿಡ್ ಹಾವಳಿ ಮತ್ತು ಆರ್ಥಿಕ ಹಿಂಜರಿತದಿಂದ ಜನ ತತ್ತರಿಸಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲೂ ಮೋದಿ ಸರ್ಕಾರವು ಜನರ ಜೇಬಿನಿಂದ ಹಣ ಲಪಟಾಯಿಸುವುದರಲ್ಲಿ ಮಾತ್ರ ಆಸಕ್ತಿ ತೋರಿಸುತ್ತಿದೆ

ಪ್ರಿಯಾಂಕ ಗಾಂಧಿ, ಕಾಂಗ್ರೆಸ್‍ಪ್ರಧಾನ ಕಾರ್ಯದರ್ಶಿ

–––––––––––––––

ಡೀಸೆಲ್ ಬೆಲೆ ಏರಿಕೆಯಿಂದ ರೈತರಿಗೆ ಭಾರಿ ಹೊಡೆತ ಬಿದ್ದಿದೆ. ಹೊಲ ಉಳುಮೆ ಮಾಡಲು ಟ್ರ್ಯಾಕ್ಟರ್‌ಗೆ ಡೀಸೆಲ್ ಹಾಕಲು ಸಾಧ್ಯವಾಗುತ್ತಿಲ್ಲ. ಇದು ದೇಶದ ಕೃಷಿ ಉತ್ಪನ್ನದ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರಲಿದೆ

ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ

–––––––––––––––––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT