ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ನ ಪಶುವೈದ್ಯೆ ಹತ್ಯೆ ಪ್ರಕರಣ: ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಆಗ್ರಹ

ಪೊಲೀಸರ ವಿರುದ್ಧ ಕುಟುಂಬದ ಆಕ್ರೋಶ, ಮಹಿಳಾ ಆಯೋಗಕ್ಕೆ ದೂರು
Last Updated 30 ನವೆಂಬರ್ 2019, 18:30 IST
ಅಕ್ಷರ ಗಾತ್ರ

ಹೈದಾರಾಬಾದ್‌: ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಆರೋಪಿಗಳನ್ನು ಇರಿಸಿಕೊಳ್ಳಲಾಗಿದ್ದ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಪೊಲೀಸ್ ಠಾಣೆ ಎದುರು ಶನಿವಾರ ಬೆಳಿಗ್ಗೆಯೇ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ, ಪ್ರತಿಭಟನೆ ನಡೆಸಿದರು.ಆರೋಪಿಗಳನ್ನು ಇಲ್ಲಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಕರೆದೊಯ್ಯಲು ಪೊಲೀಸರು ಮುಂದಾದಾಗ, ಪ್ರತಿಭಟನಕಾರರ ಆಕ್ರೋಶ ತೀವ್ರವಾಯಿತು.

ಹೊರಗೆ ಭಾರಿ ಸಂಖ್ಯೆಯ ಜನರು ಸೇರಿದ್ದ ಕಾರಣ ಆರೋಪಿಗಳನ್ನು ಪೊಲೀಸರು ಹೊರಗೆ ಕರೆತರಲಿಲ್ಲ. ಬದಲಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರೇ ಠಾಣೆಗೆ ಬಂದು ವಿಚಾರಣೆ ನಡೆಸಿ, ಆದೇಶ ನೀಡಿದರು.

‘ಆರೋಪಿಗಳನ್ನು ಬಿಡಿ, ನಾವು ನೋಡಿಕೊಳ್ಳುತ್ತೇವೆ’:‘ಅತ್ಯಾಚಾರಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋದರೆ ಸಾಲದು. ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಪೊಲೀಸರು ನೋಡಿಕೊಳ್ಳಬೇಕು. ಆರೋಪಿಗಳನ್ನು ಗಲ್ಲಿಗೆ ಏರಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

‘ಆರೋಪಿಗಳನ್ನು ತಮಗೆ ಒಪ್ಪಿಸಿ, ಅವರಿಗೆ ನಾವು ಬುದ್ದಿ ಕಲಿಸುತ್ತೇವೆ’ ಎಂದು ಕೆಲವು ಪ್ರತಿಭಟನಕಾರರು ಪೊಲೀಸರ ಜತೆ ವಾಗ್ವಾದಕ್ಕೆ ಇಳಿದರು. ಇದು ಮಾತಿನ ಚಕಮಕಿಗೂ ಕಾರಣವಾಯಿತು.

‘ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನಾವು ನೋಡಿಕೊಳ್ಳುತ್ತೇವೆ. ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕು’ ಎಂದು ಪೊಲೀಸರು ಮನವಿ ಮಾಡಿಕೊಂಡರು. ಆಗಲೂ ಪ್ರತಿಭಟನೆ ನಿಲ್ಲದ ಕಾರಣ ಪೊಲೀಸರು ಲಾಠಿಪ್ರಹಾರ ನಡೆಸಿದರು. ಈ ವೇಳೆ ಹಲವು ಪ್ರತಿಭಟನಾಕಾರರು ಮತ್ತು ಪೊಲೀಸರಿಗೆ ಗಾಯಗಳಾಗಿವೆ.

ವಕಾಲತ್ತು ಇಲ್ಲ: ಈ ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ರಂಗಾರೆಡ್ಡಿ ಜಿಲ್ಲಾ ವಕೀಲರ ಸಂಘ, ಮೆಹಬೂಬ್‌ನಗರ ಜಿಲ್ಲಾ ವಕೀಲರ ಸಂಘಗಳು ಘೋಷಿಸಿವೆ. ಇವರ ಪರ ವಕಾಲತ್ತು ವಹಿಸುವುದಿಲ್ಲ ಎಂದು ಶಾದ್‌ನಗರದ ವಕೀಲರು ಘೋಷಿಸಿದ್ದಾರೆ. ಆರೋಪಿಗಳ ಪರವಾಗಿ ಯಾರೂ ವಾದ ಮಾಡಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲೂ ಆಗ್ರಹ ವ್ಯಕ್ತವಾಗಿದೆ.

ಆತ್ಮಹತ್ಯೆ ಶಂಕೆ: ಪಶುವೈದ್ಯೆಯ ಶವ ದೊರೆತ ಸ್ಥಳದ ಸಮಿಪದಲ್ಲೇ ಮತ್ತೊಬ್ಬ ಮಹಿಳೆಯ ಶವ ದೊರೆತಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ಗುರುವಾರ ಸಂಜೆ ಆ ಮಹಿಳೆ ಅಲ್ಲಿ ಅಳುತ್ತಾ ಕುಳಿತಿದ್ದದ್ದನ್ನು ಕೆಲವರು ನೋಡಿದ್ದಾರೆ. ಆದರೆ ಮರಣೋತ್ತರ ಪರಿಕ್ಷೆಯ ವರದಿ ಬಂದನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಮಗಳು ಬದುಕುತ್ತಿದ್ದಳು’

‘ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಲು ಹೋದಾಗ, ಈ ಪ್ರಕರಣವು ನಮ್ಮ ಠಾಣೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ಬೇರೆ–ಬೇರೆ ಠಾಣೆಗಳಿಗೆ ನಮ್ಮನ್ನು ಅಲೆದಾಡಿಸಿದರು. ಅಮೂಲ್ಯ ಸಮಯ ವ್ಯರ್ಥ ಮಾಡಿದರು. ಅವರು ಸ್ವಲ್ಪ ಜವಾಬ್ದಾರಿ ತೋರಿಸಿದ್ದರೂ, ನಮ್ಮ ಮಗಳನ್ನು ಉಳಿಸಿಕೊಳ್ಳಬಹುದಿತ್ತು’ ಎಂದು ಪಶುವೈದ್ಯೆಯ ತಂದೆ ದುಃಖ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಭೇಟಿ ಮಾಡಲು ಬಂದಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಎದುರು ಅವರು ದುಃಖ ತೋಡಿಕೊಂಡಿದ್ದಾರೆ.

ಪ್ರತಿಭಟಿಸಿದಕ್ಕೆ ಹಲ್ಲೆ, ಪೊಲೀಸರಿಗೆ ನೋಟಿಸ್‌

ದೇಶದಲ್ಲಿ ಈ ವಾರ ನಡೆದಿರುವ ಅತ್ಯಾಚಾರ ಮತ್ತು ಕೊಲೆಗಳನ್ನು ಖಂಡಿಸಿ, ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ. ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಪೊಲೀಸರಿಗೆ ದೆಹಲಿ ಮಹಿಳಾ ಆಯೋಗವು ನೋಟಿಸ್ ನೀಡಿದೆ.

ಅನು ದುಬೆ (20) ಎಂಬ ಯುವತಿ ಶನಿವಾರ ಬೆಳಿಗ್ಗೆ ಸಂಸತ್ ಭವನದ ಬಳಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ‘ನನ್ನ ಭಾರತದಲ್ಲಿ ನಾನೇಕೆ ಸುರಕ್ಷಿತಳಲ್ಲ’ ಎಂಬ ಬರಹವಿದ್ದ ಫಲಕವನ್ನು ಅವರು ಹಿಡಿದಿದ್ದರು. ಕೆಲವೇ ಸಮಯದಲ್ಲಿ ಪೊಲೀಸರು ಅವರನ್ನು ತಮ್ಮ ವಾಹನದಲ್ಲಿ ಪೊಲೀಸ್ ಠಾಣೆಗೆ ಬಲವಂತಾವಾಗಿ ಎಳೆದುಕೊಂಡು ಹೋಗಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷ ಸ್ವಾತಿ ಮಳಿವಾಳ್ ಆರೋಪಿಸಿದ್ದಾರೆ.

ಪೊಲೀಸರು ಯುವತಿಯನ್ನು ತಮ್ಮ ವಶದಲ್ಲೇ ಇರಿಸಿಕೊಂಡಿದ್ದರು. ಅಲ್ಲದೆ, ಹಲ್ಲೆ ನಡೆಸಿದ್ದಾರೆ. ಮಹಿಳಾ ಆಯೋಗದ ಸದಸ್ಯರು ಠಾಣೆಗೆ ಭೇಟಿ ನೀಡಿದ ನಂತರವಷ್ಟೇ ಆಕೆಯನ್ನು ಬಿಡುಗಡೆ ಮಾಡಿದರು. ಈ ಕುರಿತು ವಿವರಣೆ ನೀಡುವಂತೆ ನೋಟಿಸ್ ನೀಡಿದ್ದೇವೆ ಎಂದು ಮಳಿವಾಳ್ ಹೇಳಿದ್ದಾರೆ.

***

ಅನ್ಯಾಯದ ವಿರುದ್ಧ ದನಿ ಎತ್ತಿದ ವಿದ್ಯಾರ್ಥಿನಿಯನ್ನು ಠಾಣೆಗೆ ಎಳೆದೊಯ್ಯುತ್ತೀರಿ. ದನಿ ಎತ್ತುವವರಿಗೆ ಆಗುವುದು ಇದೇ ಗತಿ ಅಲ್ಲವೇ?

ಸ್ವಾತಿ ಮಳಿವಾಳ್, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT