ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ನಾಯಕ್‌, ಖಂಡು ಪ್ರಮಾಣ ಸ್ವೀಕಾರ

Last Updated 29 ಮೇ 2019, 19:45 IST
ಅಕ್ಷರ ಗಾತ್ರ

ಭುವನೇಶ್ವರ/ ಇಟಾನಗರ: ಒಡಿಶಾದ ಮುಖ್ಯಮಂತ್ರಿಯಾಗಿ ನವೀನ್‌ ಪಟ್ನಾಯಕ್‌ ಹಾಗೂ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು.

ಭುವನೇಶ್ವರದ ಇಡ್ಕೊ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಗಣೇಶಿ ಲಾಲ್‌ ಅವರು ಪಟ್ನಾಯಕ್‌ ಅವರಿಗೆ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಪಟ್ನಾಯಕ್‌ ಜೊತೆಗೆ ಬಿಜೆಡಿಯಿಂದ ಆಯ್ಕೆಯಾದ 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರಲ್ಲಿ 11 ಕ್ಯಾಬಿನೆಟ್‌ ದರ್ಜೆಯ ಸಚಿವರಾಗಿದ್ದಾರೆ.

ಐದನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಪಟ್ನಾಯಕ್‌ ಅವರ ಪ್ರಮಾಣವಚನ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಸಮಾರಂಭದ ನಂತರ ಟ್ವೀಟ್‌ ಮಾಡಿರುವ ಪಟ್ನಾಯಕ್‌, ‘ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ನನ್ನ ಕುಟುಂಬದ 4.5 ಕೋಟಿ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಕೊಟ್ಟ ಜವಾಬ್ದಾರಿಯನ್ನು ವಿನಯಪೂರ್ವಕವಾಗಿ ಸ್ವೀಕರಿಸಿದ್ದೇನೆ’ ಎಂದಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮೂಲಕ ಪಟ್ನಾಯಕ್‌ ಅವರನ್ನು ಅಭಿನಂದಿಸಿದ್ದಾರೆ.147 ಸದಸ್ಯಬಲದ ಒಡಿಶಾ ವಿಧಾನಸಭೆಯಲ್ಲಿ ಪಟ್ನಾಯಕ್‌ ಅವರ ಬಿಜೆಡಿ ಪಕ್ಷವು 112 ಸ್ಥಾನಗಳನ್ನು ಗೆದ್ದುಕೊಂಡಿದೆ.

ಅರುಣಾಚಲದ 10ನೇ ಮುಖ್ಯಮಂತ್ರಿ ಖಂಡು:ಇಟಾನಗರದ ದೋರ್ಜಿ ಖಂಡು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಮುಖಂಡ ಪೆಮಾ ಖಂಡು ಅವರು ಅರುಣಾಚಲಪ್ರದೇಶದ 10ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಬಿ.ಡಿ. ಮಿಶ್ರಾ ಅವರು ಖಂಡು ಅವರಿಗೆ ಪ್ರಮಾಣವಚನ ಬೋಧಿಸಿದರು.

ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯಾಗಿ ಛೌನ ಮೀನ್‌ ಹಾಗೂ 11 ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್‌ ಹಾಗೂ ತ್ರಿಪುರಾ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್‌ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಖಂಡು, ‘ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಇಂದು ಚಾರಿತ್ರಿಕ ದಿನ. ನಮ್ಮ ಸರ್ಕಾರ ಶುದ್ಧ, ಪಾರದರ್ಶಕ ಮತ್ತು
ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಲಿದೆ. ಕಾನೂನು ಸುವ್ಯವಸ್ಥೆ ಸರಿಪಡಿಸುವುದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಸುಧಾರಣೆಗೆ ಸರ್ಕಾರ ಆದ್ಯತೆ ನೀಡಲಿದೆ’ ಎಂದರು.

60 ಸದಸ್ಯಬಲದ ಅರುಣಾಚಲಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆದ್ದುಕೊಂಡಿದೆ.

ಉಕ್ಕಿನ ಹಿಡಿತದ ಮೃದು ರಾಜಕಾರಣಿ

ಲೇಖಕ, ಕಲಾಸ್ವಾದಕ ಮತ್ತು ನಿಪುಣ ರಾಜಕಾರಣಿ ನವೀನ್‌ ಪಟ್ನಾಯಕ್‌. ಅತ್ಯಂತ ಮೃದು ಸ್ವಭಾವದ ಅವರು ಪ್ರತಿಸ್ಪರ್ಧಿಗಳು ಮತ್ತು ಪಕ್ಷದೊಳಗಿನ ಬಂಡಾಯವನ್ನು ನಿರ್ದಯವಾಗಿ ಹತ್ತಿಕ್ಕಬಲ್ಲರು. ಈ ಎಲ್ಲ ಗುಣಗಳು ಒಬ್ಬರಲ್ಲೇ ಮೇಳೈಸುವುದು ಬಹಳ ವಿರಳ.

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ ಅವರು 1997ರಲ್ಲಿ ನಿಧನರಾದ ಬಳಿಕ ಒಲ್ಲದ ಮನಸ್ಸಿನಿಂದ ರಾಜಕೀಯಕ್ಕೆ ಬಂದ ಅವರು ಇದೀಗ ಸತತ ಐದನೇ ಅವಧಿಗೆ ಒಡಿಶಾದ ಮುಖ್ಯಮಂತ್ರಿಯಾಗಿದ್ದಾರೆ.

2000ನೇ ಇಸವಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಅವರು ಈಗ, ದೇಶದಲ್ಲಿ ಅತಿ ದೀರ್ಘಕಾಲದಿಂದ ಅಧಿಕಾರದಲ್ಲಿರುವ ಮುಖ್ಯಮಂತ್ರಿ. ಈ ಅವಧಿಯಲ್ಲಿ ಚಿಟ್‌ಫಂಡ್‌ನಿಂದ ಹಿಡಿದು ಗಣಿಗಾರಿಕೆವರೆಗಿನ ಹಲವು ಹಗರಣ ಆರೋಪಗಳು ಅವರನ್ನು ಹಾದು ಹೋಗಿವೆ. ಆದರೆ, ಇಡೀ ದೇಶದಲ್ಲಿ ಅವರಿಗೆ ‘ಸಭ್ಯ ಮತ್ತು ಪ್ರಾಮಾಣಿಕ’ ಎಂಬ ವರ್ಚಸ್ಸು ಇದೆ.

ರಾಜಕಾರಣಿಯಾಗಿ ಅವರ ಮೊದಲ ಪ್ರವೇಶ ಲೋಕಸಭೆಗೆ. 1997ರಲ್ಲಿ ತಂದೆ ಬಿಜು ನಿಧನದಿಂದ ತೆರವಾದ ಅಸ್ಕಾ ಕ್ಷೇತ್ರದಿಂದ ಅವರು ಆಯ್ಕೆಯಾದರು. ವರ್ಷದ ಬಳಿಕ ಜನತಾ ದಳ ವಿಭಜನೆಯಾಯಿತು. ತಂದೆಯ ಹೆಸರನ್ನೇ ಇರಿಸಿಕೊಂಡು ನವೀನ್‌ ಹೊಸ ಪಕ್ಷ ಕಟ್ಟಿದರು. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡರು. 1998ರಲ್ಲಿ ಕೇಂದ್ರದ ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರೂ ಆದರು.

ಒಂದು ರೂಪಾಯಿಗೆ ಕಿಲೋ ಅಕ್ಕಿ, ₹5ಕ್ಕೆ ಊಟದಂತಹ ಯೋಜನೆಗಳು ನವೀನ್‌ ಅವರ ಜನಪ್ರಿಯತೆಯನ್ನು ಏರಿಸುತ್ತಲೇ ಹೋಗಿವೆ.ಒಂದೆರಡು ಪುಸ್ತಕಗಳನ್ನು ಬರೆದಿರುವ, ಕಲೆಯಲ್ಲಿಯೂ ಕೈಯಾಡಿಸಿರುವ ನವೀನ್‌ ಅವರು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅದ್ಭುತ ಸಾಧನೆ ಮೂಲಕ ಒಡಿಶಾದ ಇತಿಹಾಸಕ್ಕೆ ಹೊಸದೊಂದು ಅಧ್ಯಾಯವನ್ನು ಸೇರಿಸಿದ್ದಾರೆ.

ಕಮಲ ಅರಳಿಸಿದ ಪೆಮಾ ಖಂಡು

ಕ್ರೀಡೆ ಹಾಗೂ ಸಂಗೀತಪ್ರೇಮಿಯಾಗಿರುವ ಪೆಮಾ ಖಂಡು ಅರುಣಾಚಲಪ್ರದೇಶದಲ್ಲಿ ಬಿಜೆಪಿಯ ತಾವರೆ ಅರಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಮುಖಂಡ.

2016ರಲ್ಲಿ ಮೊದಲ ಬಾರಿ ಅರುಣಾಚಲದ ಮುಖ್ಯಮಂತ್ರಿಯಾದ ಖಂಡು ಮತ್ತು ಅವರ ಇಡೀ ಸಚಿವ ಸಂಪುಟದ ಸದಸ್ಯರು ಎರಡು ಬಾರಿ ಪಕ್ಷಾಂತರ ಮಾಡಿದ್ದಾರೆ. ಅದೂ ಕೇವಲ ಐದು ತಿಂಗಳ ಅವಧಿಯಲ್ಲಿ.

ಪೆಮಾ ಖಂಡು ಅವರ ತಂದೆ ದೋರ್ಜಿ ಖಂಡು ಅರುಣಾಚಲದ ಮುಖ್ಯಮಂತ್ರಿಯಾಗಿದ್ದರು. 2011ರಲ್ಲಿ ಸಂಭವಿಸಿದ ಹೆಲಿಕಾಪ್ಟರ್‌ ಅಪಘಾತದಲ್ಲಿ ಅವರು ಸಾವನ್ನಪ್ಪಿದರು. ಆನಂತರ ರಚನೆಯಾದ ನಬಂ ತುಕಿ ನೇತೃತ್ವದ ಸರ್ಕಾರದಲ್ಲಿ ಪೆಮಾ ಖಂಡು ಜಲಸಂಪನ್ಮೂಲ ಸಚಿವರಾದರು. 2014ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾಗಿ ತುಕಿ ನೇತೃತ್ವದ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾದರು.

2016ರಲ್ಲಿ ಅರುಣಾಚಲರಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಅಲ್ಲಿಂದ ಪೆಮಾ ಖಂಡು ಅವರ ರಾಜಕೀಯ ಜೀವನವೂ ಬದಲಾಯಿತು. 26 ದಿನಗಳ ರಾಷ್ಟ್ರಪತಿ ಆಡಳಿತದ ನಂತದ ರಾಜ್ಯದಲ್ಲಿ ರಚನೆಯಾದ ಬಿಜೆಪಿ ಬೆಂಬಲಿತ, ಕಲಿಖೊ ಪುಲ್‌ ನೇತೃತ್ವದ ಸರ್ಕಾರದಲ್ಲಿ ಪೆಮಾ ಪುನಃ ಸಚಿವರಾದರು. ಈ ಸರ್ಕಾರ ಆರು ತಿಂಗಳು ಮಾತ್ರ ಅಸ್ತಿತ್ವದಲ್ಲಿತ್ತು. ಆನಂತರ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ 37ವರ್ಷ ವಯಸ್ಸಿನ ಪೆಮಾ ಖಂಡು ಮುಖ್ಯಮಂತ್ರಿಯಾದರು.

ಹೀಗೆ ಅಧಿಕಾರ ಸ್ವೀಕರಿಸಿ ಸರಿಯಾಗಿ ಮೂರು ತಿಂಗಳ ಬಳಿಕ ಪೆಮಾ ಅವರು 43 ಶಾಸಕರ ಜೊತೆಯಲ್ಲಿ ಪಕ್ಷತ್ಯಾಗ ಮಾಡಿ, ಬಿಜೆಪಿಯ ಮಿತ್ರಪಕ್ಷವಾಗಿರುವ ಪಿಪಿಎ ಜೊತೆ ಕೈಜೋಡಿಸಿದರು. ಇದಾಗಿ ಕೆಲವೇ ತಿಂಗಳಲ್ಲಿ ಅವರು ಬಿಜೆಪಿ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT