ಸಮುದ್ರ ಮೂಲಕ ನುಗ್ಗಲು ಉಗ್ರರ ತಂತ್ರ; ಮುಂಬೈ ರೀತಿ ದಾಳಿ ಸಂಚು?

ಸೋಮವಾರ, ಮಾರ್ಚ್ 25, 2019
21 °C
ನೌಕಾಪಡೆ ಮುಖ್ಯಸ್ಥರ ಕಳವಳ

ಸಮುದ್ರ ಮೂಲಕ ನುಗ್ಗಲು ಉಗ್ರರ ತಂತ್ರ; ಮುಂಬೈ ರೀತಿ ದಾಳಿ ಸಂಚು?

Published:
Updated:

ನವದೆಹಲಿ: ಮುಂಬೈನಲ್ಲಿ 2008ರ ನವೆಂಬರ್ 26ರಂದು ನಡೆದಿದ್ದ ದಾಳಿಯಂತಹದ್ದೇ ದಾಳಿ ಮತ್ತೆ ನಡೆಯಬಹುದು ಎಂದು ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಎಚ್ಚರಿಕೆ ನೀಡಿದ್ದಾರೆ.

‘ಭಾರತದ ಮೇಲೆ ಸಮುದ್ರ ಮಾರ್ಗದ ಮೂಲಕ ನುಸುಳಿ, ದಾಳಿ ನಡೆಸುವ ಉದ್ದೇಶದಿಂದ ಉಗ್ರರಿಗೆ ತರಬೇತಿ ನೀಡಲಾಗುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ’ ಎಂದು ಲಾಂಬಾ ಹೇಳಿದ್ದಾರೆ.

ನವದೆಹಲಿಯಲ್ಲಿ ಮಂಗಳವಾರ ನಡೆದ ಇಂಡೊ–ಪೆಸಿಫಿಕ್ ಪ್ರಾದೇಶಿಕ ಶೃಂಗಸಭೆಯಲ್ಲಿ ಭದ್ರತಾ ತಜ್ಞರನ್ನು ಉದ್ದೇಶಿಸಿ ಮಾತನಾಡುವಾಗ ಲಾಂಬಾ ಅವರು ಈ ಮಾಹಿತಿ ನೀಡಿದ್ದಾರೆ.

‘ಜಗತ್ತಿನಾದ್ಯಂತ ಉಗ್ರರು ದಾಳಿಗೆ ಬೇರೆ–ಬೇರೆ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಈ ಸ್ವರೂಪದ ದಾಳಿಗಳು ಭಯೋತ್ಪಾದನೆಯ ಅಪಾಯವನ್ನು ಅತ್ಯಂತ ತ್ವರಿತಗತಿಯಲ್ಲಿ ಹೆಚ್ಚಿಸುತ್ತಿವೆ. ಕೆಲವೆಡೆ ಭಯೋತ್ಪಾದನೆಯನ್ನು ಸರ್ಕಾರಗಳೇ ಪ್ರಾಯೋಜಿಸುತ್ತಿವೆ’ ಎಂದು ಸುನಿಲ್ ಲಾಂಬಾ ಕಳವಳ ವ್ಯಕ್ತಪಡಿಸಿದ್ದಾರೆ.

‘ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯ ಅತ್ಯಂತ ವಿಧ್ವಂಸಕ ಪರಿಣಾಮಕ್ಕೆ ಭಾರತವು ಹಲವು ಭಾರಿ ತುತ್ತಾಗಿದೆ. ಮೂರು ವಾರಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ನಡೆಸಿದ ವಿಧ್ವಂಸಕ ಕೃತ್ಯವನ್ನು ನೀವೆಲ್ಲಾ ನೋಡಿದ್ದೀರಿ. ಉಗ್ರರು ಅತ್ಯಂತ ಯೋಜಿತವಾಗಿ ಆ ದಾಳಿ ನಡೆಸಿದ್ದರು. ಆದರೆ ಭಾರತವನ್ನು ಅಸ್ಥಿರಗೊಳಿಸಲೆಂದೇ ಸರ್ಕಾರವೊಂದು ಆ ದಾಳಿಯನ್ನು ಪ್ರಾಯೋಜಿಸಿದೆ’ ಎಂದು ಅವರು ಆರೋಪಿಸಿದ್ದಾರೆ.

ಎರಡನೇ ಎಚ್ಚರಿಕೆ


ಸಚಿವ ಹಂಸರಾಜ್ ಅಹಿರ್

ಈಚಿನ ದಿನಗಳಲ್ಲಿ ಇಂತಹ ದಾಳಿಯ ಬಗ್ಗೆ ವ್ಯಕ್ತವಾದ ಎರಡನೇ ಎಚ್ಚರಿಕೆ ಇದು. ಇದೇ ಜನವರಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಅಹಿರ್ ಅವರು ಇಂಥದ್ದೇ ಎಚ್ಚರಿಕೆ ನೀಡಿದ್ದರು.

‘ಪಾಕಿಸ್ತಾನ ಮೂಲದ ಉಗ್ರರ ಸಂಘಟನೆಯು ಸಮುದ್ರದ ಮೂಲಕ ದಾಳಿ ನಡೆಸುವ ಸಂಬಂಧ ತನ್ನ ಉಗ್ರರಿಗೆ ತರಬೇತಿ ನೀಡುತ್ತಿದೆ. ಹೀಗೆ ತರಬೇತಿ ಪಡೆದ ಉಗ್ರರನ್ನು ಜಲಮಾರ್ಗದ ಮೂಲಕ ಭಾರತಕ್ಕೆ ನುಸುಳಿಸಲು ಅವರು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಹಂಸರಾಜ್ ರಾಜ್ಯಸಭೆಯಲ್ಲಿ ತಿಳಿಸಿದ್ದರು.

ಜಲಾಂತರ್ಗಾಮಿ ಅತಿಕ್ರಮಣ ಆರೋಪ

*ಭಾರತದ ಜಲಾಂತರ್ಗಾಮಿ ನೌಕೆಯು ನಮ್ಮ ಗಡಿಯತ್ತ ನುಸುಳುತ್ತಿತ್ತು. ಅದನ್ನು ಅಲ್ಲೇ ತಡೆದಿದ್ದೇವೆ: ಪಾಕಿಸ್ತಾನದ ಆರೋಪ

*ಚಿತ್ರ ಮತ್ತು ವಿಡಿಯೊ ಬಿಡುಗಡೆ ಮಾಡಿರುವ ಪಾಕಿಸ್ತಾನದ ನೌಕಾಪಡೆ

*ಪಾಕಿಸ್ತಾನದ ಆರೋಪವನ್ನು ತಳ್ಳಿಹಾಕಿದ ಭಾರತೀಯ ನೌಕಾಪಡೆ

*ಪಾಕಿಸ್ತಾನ ಬಿಡುಗಡೆ ಮಾಡಿರುವ ವಿಡಿಯೊ 2016ರದ್ದು ಎಂದ ಭಾರತೀಯ ನೌಕಾಪಡೆ

*ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿಸಲು ರಾಜತಾಂತ್ರಿಕ ತಂತ್ರ

ಸತ್ತ ಉಗ್ರರೆಷ್ಟು ಎಂಬುದು ಇಂದಲ್ಲ ನಾಳೆ ಬಹಿರಂಗ: ರಾಜನಾಥ್‌

ಧುಬರಿ (ಅಸ್ಸಾಂ) (ಪಿಟಿಐ): ಪಾಕಿಸ್ತಾದ ಬಾಲಾಕೋಟ್‌ನಲ್ಲಿನ ಜೈಷ್–ಎ–ಮೊಹಮ್ಮದ್‌ ತರಬೇತಿ ಶಿಬಿರದ ಮೇಲೆ ಭಾರತದ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವಿಗೀಡಾದ ಉಗ್ರರ ನಿಖರವಾದ ಸಂಖ್ಯೆ ‘ಇಂದಲ್ಲ ನಾಳೆ’ ಗೊತ್ತಾಗಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಮಂಗಳವಾರ ಬಿಎಸ್‌ಎಫ್‌ನ ಎಲೆಕ್ಟ್ರಾನಿಕ್‌ ಗಡಿಕಾವಲು ವ್ಯವಸ್ಥೆ ಉದ್ಘಾಟಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಉಗ್ರರ ಶವಗಳ ಲೆಕ್ಕ ಬಯಸುವುದು ಎಂಥ ಮೂರ್ಖತನ ಎಂದು ಎಂದು ಅವರು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

‘ವಾಯುದಾಳಿ ವಿಷಯದಲ್ಲೂ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ. ದಾಳಿಯಲ್ಲಿ ಎಷ್ಟು ಉಗ್ರರು ಮೃತಪಟ್ಟಿದ್ದಾರೆ ಎಂದು ವಿಪಕ್ಷ ನಾಯಕರು ಲೆಕ್ಕ ಕೇಳುತ್ತಿದ್ದಾರೆ. ಅದು ಇಂದು ಅಥವಾ ನಾಳೆ ಹೊರಬರಲಿದೆ’ ಎಂದರು.

ರಾಷ್ಟ್ರವನ್ನು ಕಟ್ಟಲು ವಿರೋಧ ಪಕ್ಷಗಳು ರಾಜಕೀಯ ಮಾಡಲಿ. ಅದನ್ನು ಬಿಟ್ಟು ಸರ್ಕಾರ ರಚಿಸಲು ಇಷ್ಟೆಲ್ಲ ಕಸರತ್ತು ಮಾಡಬಾರದು ಎಂದು ವಿರೋಧ ಪಕ್ಷಗಳನ್ನು ಅವರು ತರಾಟೆಗೆ ತೆಗೆದುಕೊಂಡರು.

* ಭಾರತದ ಮೇಲೆ ಅನಿರೀಕ್ಷಿತ ಸ್ವರೂಪದ ದಾಳಿಗೆ ಉಗ್ರರು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅದರಲ್ಲಿ ಸಮುದ್ರ ಮಾರ್ಗದ ದಾಳಿಯೂ ಒಂದು

-ಅಡ್ಮಿರಲ್ ಸುನಿಲ್ ಲಾಂಬಾ, ನೌಕಾಪಡೆ ಮುಖ್ಯಸ್ಥ

* ಭಾರತದ ಮೇಲೆ ಮತ್ತೊಮ್ಮೆ ಭಯೋತ್ಪಾದಕರ ದಾಳಿ ನಡೆದರೆ, ಅದಕ್ಕೆ ಪ್ರತಿಯಾಗಿ ಎಲ್ಲಾ ಸ್ವರೂಪದ ಆಯ್ಕೆಗಳನ್ನು ಬಳಸಲು ನಾವು ಸಿದ್ಧರಾಗಿದ್ದೇವೆ

-ಕೇಂದ್ರ ಸರ್ಕಾರದ ಉನ್ನತ ಮೂಲಗಳು

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 3

  Frustrated
 • 0

  Angry

Comments:

0 comments

Write the first review for this !