ಉಗ್ರರ ದಮನ: ಪಾಕ್‌ಗೆ ಭಾರತ ಸವಾಲು

ಮಂಗಳವಾರ, ಮಾರ್ಚ್ 26, 2019
31 °C
ಹೊಸ ಆಲೋಚನೆ ಸಾಲದು, ಹೊಸ ಕಠಿಣ ಕ್ರಮ ಅಗತ್ಯ l ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಒತ್ತಾಯ

ಉಗ್ರರ ದಮನ: ಪಾಕ್‌ಗೆ ಭಾರತ ಸವಾಲು

Published:
Updated:
Prajavani

ನವದೆಹಲಿ: ‘ತಮ್ಮದು ಹೊಸ ಆಲೋಚನೆಯ ಹೊಸ ಪಾಕಿಸ್ತಾನ’ (ನಯಾ ಪಾಕಿಸ್ತಾನ್, ನಯೀ ಸೋಚ್) ಎಂದು ಹೇಳಿಕೊಳ್ಳುವ ಪಾಕಿಸ್ತಾನವು, ತನ್ನ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಉಗ್ರಗಾಮಿ ಸಂಘನೆಗಳ ವಿರುದ್ಧವೂ ‘ಹೊಸ ಕ್ರಮ’ ಜರುಗಿಸಬೇಕು ಎಂದು ಭಾರತ ಆಗ್ರಹಿಸಿದೆ. 

‘ಭಯೋತ್ಪಾದಕ ಸಂಘಟನೆಗಳನ್ನು ಬೇರುಸಹಿತ ಕಿತ್ತುಹಾಕುವುದಾಗಿ ಪಾಕಿಸ್ತಾನ ಕೇವಲ ಮಾತನಾಡಿದರೆ ಸಾಲದು, ಕೃತಿಯಲ್ಲೂ ಅದನ್ನು ಮಾಡಿತೋರಿಸಬೇಕು’ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ತಮ್ಮ ನೇತೃತ್ವದಲ್ಲಿ ‘ನಯಾ ಪಾಕಿಸ್ತಾನ’ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿ
ದ್ದರು. ಪಾಕಿಸ್ತಾನದಲ್ಲಿದ್ದುಕೊಂಡು ಬೇರೊಂದು ದೇಶದ ಮೇಲೆ ದಾಳಿಯನ್ನು ನಿರ್ದೇಶಿಸುವ ಭಯೋತ್ಪಾದಕ ಸಂಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

‘ಭಯೋತ್ಪಾದನಾ ಚಟುವಟಿಕೆ ನಡೆದಾಗ ಪಾಕಿಸ್ತಾನ ಒಂದೇ ರೀತಿಯ ಹೇಳಿಕೆ ನೀಡುತ್ತಾ ಬಂದಿದೆ. ಆದರೆ, ಅಂತರರಾಷ್ಟ್ರೀಯ ಸಮುದಾಯದ ನಿರೀಕ್ಷೆಯಂತೆ ಅದು ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಪಾಕಿಸ್ತಾನವು ನಂಬಲರ್ಹ, ಪರಿಶೀಲನಾರ್ಹ ಹಾಗೂ ಸುಸ್ಥಿರ ಕ್ರಮಗಳನ್ನೇ ತೆಗೆದುಕೊಳ್ಳಬೇಕು. ನಾವು ಜವಾಬ್ದಾರಿ ಹಾಗೂ ವಿವೇಚನಾಯುತ ಕ್ರಮಗಳನ್ನು ಮುಂದುವರಿಸುತ್ತೇವೆ’ ಎಂದಿದ್ದಾರೆ. 

‘ಪಾಕಿಸ್ತಾನದಲ್ಲಿ ಭಯೋತ್ಪಾದಕರ ಶಿಬಿರಗಳು ಹರಡಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅವುಗ
ಳನ್ನು ನಿರ್ನಾಮ ಮಾಡುವಂತೆ ಭಾರತ ಮತ್ತು ಜಾಗತಿಕ ಸಮುದಾಯ ಆಗ್ರಹಿಸುತ್ತಿದ್ದರೂ ಪಾಕಿಸ್ತಾನ ಮಾತ್ರ ಅದನ್ನು ನಿರಾಕರಿಸುತ್ತಲೇ ಬಂದಿದೆ’ ಎಂದು ಅಸಮಾಧಾನ‌ ವ್ಯಕ್ತಪಡಿಸಿದ್ದಾರೆ. 

ಸತ್ತ ಉಗ್ರರ ಸಂಖ್ಯೆ ಹೇಳದ ರವೀಶ್‌ ಕುಮಾರ್

‘ಬಾಲಾಕೋಟ್‌ನಲ್ಲಿ ಫೆಬ್ರುವರಿ 26ರಂದು ಭಾರತವು ಅಲ್ಲಿನ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ. ಅಂದುಕೊಂಡ ಉದ್ದೇಶವನ್ನು ಸಾಧಿಸಲಾಗಿದೆ. ಈ ಮೂಲಕ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ದಿಟ್ಟ ಕ್ರಮ ತೆಗೆದುಕೊಳ್ಳುವ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ’ ಎಂದು ರವೀಶ್ ಕುಮಾರ್ ಹೇಳಿದರು.

ಭಾರತದ ನಡೆಸಿದ ವಾಯುದಾಳಿಯಲ್ಲಿ ಎಷ್ಟು ಉಗ್ರರು ಹತರಾಗಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. 

‘ದಾಳಿ ನಡೆದ ಜಾಗಕ್ಕೆ ಪತ್ರಕರ್ತರ ಭೇಟಿಗೆ ಪಾಕಿಸ್ತಾನ ಅವಕಾಶ ನೀಡುತ್ತಿಲ್ಲ. ಇದು ಪಾಕಿಸ್ತಾನವು ಏನನ್ನೋ ಮುಚ್ಚಿಡುತ್ತಿದೆ ಎಂಬುದರ ಅರ್ಥ’ ಎಂದು ರವೀಶ್ ಆರೋಪಿಸಿದರು.

ತನ್ನ ನೆಲದ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲಾಗಿ ಪಾಕಿಸ್ತಾನವು ಆಕ್ರಮಣಶೀಲತೆಯ ಹಾದಿಯನ್ನು ಆಯ್ದುಕೊಂಡು ಭಾರತದ ವಾಯುಗಡಿ ಉಲ್ಲಂಘಿಸುವ ಮೂಲಕ ಉದ್ವಿಗ್ನತೆ ಸೃಷ್ಟಿಗೆ ಕಾರಣವಾಯಿತು ಎಂದು ಅವರು ದೂರಿದ್ದಾರೆ.

‘ಪಾಕ್‌ನ ಎ‌ಫ್–16 ಹೊಡೆದುರುಳಿಸಿದ್ದು ಅಭಿನಂದನ್’

ಭಾರತದ ಎರಡು ಮಿಗ್ ವಿಮಾನಗಳನ್ನು ಹೊಡೆದುರುಳಿಸಿದ್ದಾಗ ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಪತನವಾಗಿದ್ದು ಒಂದು ಮಾತ್ರ. ಒಂದು ವೇಳೆ ಎರಡು ವಿಮಾನಗಳನ್ನು ಹೊಡೆದುರುಳಿಸಿದ್ದು ನಿಜವಾಗಿದ್ದರೆ, ಆ ವಿಡಿಯೊವನ್ನು ಈವರೆಗೆ ಪಾಕಿಸ್ತಾನಕ್ಕೆ ಏಕೆ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ರವೀಶ್ ಕುಮಾರ್ ಪ್ರಶ್ನಿಸಿದ್ದಾರೆ.

‘ಸುಳ್ಳು ಹೇಳುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಮಿಗ್ ವಿಮಾನ ಹಾಗೂ ಅದರ ಪೈಲಟ್ ಎಲ್ಲಿದ್ದಾರೆ ಎಂದು ತಿಳಿಸಲು ಆಗಿಲ್ಲ. ಪಾಕಿಸ್ತಾನವು ಎಫ್–16 ಯುದ್ಧವಿಮಾನವನ್ನು ಕಾರ್ಯಾಚರಣೆಗೆ ಬಳಸಿಕೊಂಡಿರುವ ಬಗ್ಗೆ ವಿದ್ಯುನ್ಮಾನ ಸಾಕ್ಷ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿವೆ. ಆ ಪೈಕಿ ಒಂದು ಎಫ್–16 ವಿಮಾನವನ್ನು ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರು ಹೊಡೆದುರುಳಿಸಿದ್ದಾರೆ’ ಎಂದು ಹೇಳಿದ್ದಾರೆ.

‘ತನ್ನ ವಿಮಾನವನ್ನು ಕಳೆದುಕೊಂಡಿದ್ದರೂ ಪಾಕಿಸ್ತಾನ ಅದನ್ನು ಏಕೆ ನಿರಾಕರಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ. ವಿಮಾನ ಖರೀದಿ ಒಪ್ಪಂದದ ಪ್ರಕಾರ, ಭಾರತದ ವಿರುದ್ಧ ಎಫ್–16 ಯುದ್ಧವಿಮಾನ ಬಳಕೆ ಮಾಡಬಹುದೇ ಎಂಬ ಬಗ್ಗೆ ಪರಿಶೀಲಿಸುವಂತೆ ಅಮೆರಿಕಕ್ಕೆ ಕೇಳಿಕೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ವಿದೇಶಾಂಗ ಸಚಿವರು ಜೈಷ್ ವಕ್ತಾರರೇ?’

‘ಪುಲ್ವಾಮಾ ದಾಳಿಯ ಹೊಣೆಯನ್ನು ಸ್ವತಃ ಜೈಷ್ ಸಂಘಟನೆ ಹೊತ್ತುಕೊಂಡಿತ್ತು. ಆದರೆ ಈ ಬಗ್ಗೆ ಸಂಶಯವಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಹಾಗಾದರೆ ಪಾಕಿಸ್ತಾನವು ಜೈಷ್‌ ಪರ ವಕ್ತಾರರಂತೆ ಕೆಲಸ ಮಾಡುತ್ತಿದೆಯೇ?’ ಎಂದು ರವೀಶ್ ಪ್ರಶ್ನಿಸಿದ್ದಾರೆ. 

ಪಾಕ್ ವಿದೇಶಾಂಗ ಸಚಿವರು ಹಾಗೂ ಮಾಜಿ ಅಧ್ಯಕ್ಷ ಮುಷರಫ್ ಅವರು ಪಾಕಿಸ್ತಾನದಲ್ಲಿ ಜೈಷ್ ಸಕ್ರಿಯವಾಗಿದೆ ಎಂದು ಹೇಳಿಕೊಂಡ ಬಳಿಕವೂ ಪಾಕಿಸ್ತಾನದ ಸೇನೆಯ ವಕ್ತಾರರು ಇದನ್ನು ಬಹಿರಂಗವಾಗಿ ಅಲ್ಲಗಳೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !