ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರೂಕ್‌, ಒಮರ್‌ ಭೇಟಿಯಾದ ಎನ್‌ಸಿ ನಿಯೋಗ

Last Updated 6 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ಬಂಧನದಲ್ಲಿರುವ ನಾಯಕರಾದ ಫಾರೂಕ್‌ ಅಬ್ದುಲ್ಲಾ ಮತ್ತು ಒಮರ್‌ ಅಬ್ದುಲ್ಲಾ ಅವರನ್ನುನ್ಯಾಷನಲ್‌ ಕಾನ್ಫರೆನ್ಸ್‌ನ (ಎನ್‌ಸಿ) 15 ಮುಖಂಡರ ನಿಯೋಗವು ಭಾನುವಾರ ಭೇಟಿಯಾಗಿದೆ. ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ಬಳಿಕ ನಡೆದ ಮಹತ್ವದ ರಾಜಕೀಯ ಬೆಳವಣಿಗೆ ಇದು.

ರಾಜ್ಯದಲ್ಲಿನ ಬೆಳವಣಿಗೆಗಳು ಮತ್ತು ಮುಂದೆ ಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಬಗ್ಗೆ ಚರ್ಚೆ ನಡೆದಿದೆ. ನಿಯೋಗವು ಫಾರೂಕ್‌ ಮತ್ತು ಒಮರ್‌ ಅವರನ್ನು ಪ್ರತ್ಯೇಕವಾಗಿ ಭೇಟಿಯಾಯಿತು. ಈ ಭೇಟಿಗೆ ಅಲ್ಲಿನ ಆಡಳಿತ ಅನುಮತಿ ನೀಡಿತ್ತು.

ಪಕ್ಷದ ಜಮ್ಮು ಪ್ರದೇಶದ ಅಧ್ಯಕ್ಷ ದೇವೇಂದ್ರ ಸಿಂಹ ರಾಣಾ ನೇತೃತ್ವದ ನಿಯೋಗವು ಒಮರ್‌ ಅವರನ್ನು ಹರಿನಿವಾಸದಲ್ಲಿ ಭೇಟಿಯಾಯಿತು. ಒಮರ್‌ ಅವರನ್ನು ಹರಿನಿವಾಸದಲ್ಲಿ ಬಂಧನದಲ್ಲಿ ಇರಿಸಲಾಗಿದೆ. ಮಾತುಕತೆ ಸುಮಾರು 30 ನಿಮಿಷ ನಡೆಯಿತು. ಬಳಿಕ, ಈ ನಿಯೋಗವು ಫಾರೂಕ್‌ ಅವರನ್ನು ಭೇಟಿಯಾಯಿತು. ಫಾರೂಕ್‌ ಅವರನ್ನು ಅವರ ಮನೆಯಲ್ಲಿಯೇ ಬಂಧನದಲ್ಲಿ ಇರಿಸಲಾಗಿದೆ.

ರಾಜ್ಯದಲ್ಲಿ ಯಾವುದೇ ರಾಜಕೀಯ ಪ್ರಕ್ರಿಯೆ ಆರಂಭವಾಗಬೇಕಿದ್ದರೆ ಸೆರೆಯಲ್ಲಿರುವ ಮುಖಂಡರ ಬಿಡುಗಡೆ ಆಗಬೇಕಿದೆ ಎಂದು ಈ ಭೇಟಿಯ ಬಳಿಕ ರಾಣಾ ಹೇಳಿದ್ದಾರೆ.

‘ಇಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಜನರ ಮೇಲೆ ಹೇರಲಾಗಿರುವ ನಿರ್ಬಂಧಗಳ ಕುರಿತು ಬಹಳ ನೋವು ಇದೆ. ಇಲ್ಲಿ ರಾಜಕೀಯ ಪ್ರಕ್ರಿಯೆ ಆರಂಭವಾಗಬೇಕು ಮತ್ತು ಪ್ರಜಾಪ್ರಭುತ್ವವನ್ನು ಪುನಶ್ಚೇತನಗೊಳಿಸಬೇಕು ಎಂಬುದು ಒಂದು ರಾಜಕೀಯ ಪಕ್ಷವಾಗಿ ನಮ್ಮ ಮನವಿ. ಅದಕ್ಕಾಗಿ ವಿವಿಧೆಡೆ ಬಂಧನದಲ್ಲಿರುವ ಮುಖಂಡರನ್ನು ಬಿಡುಗಡೆ ಮಾಡಬೇಕು. ಯಾವುದೇ ಅಪರಾಧ ಹಿನ್ನೆಲೆ ಇಲ್ಲದವರನ್ನು ಬಿಡುಗಡೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಇಬ್ಬರೂ ನಾಯಕರು ಆರೋಗ್ಯವಾಗಿದ್ದಾರೆ ಎಂಬುದು ನಮಗೆ ಸಂತಸ ತಂದಿದೆ. ಆದರೆ, ಜಮ್ಮು–ಕಾಶ್ಮೀರದ ಬೆಳವಣಿಗೆಗಳು ಹಾಗೂ ಜನರ ಮೇಲೆ ನಿರ್ಬಂಧಗಳಿರುವುದು ಅವರಲ್ಲಿ ಸಂಕಟ ಉಂಟು ಮಾಡಿದೆ’ ಎಂದು ರಾಣಾ ತಿಳಿಸಿದ್ದಾರೆ.

ಇಂದು ಮೆಹಬೂಬಾ ಭೇಟಿ

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಪಕ್ಷದ ಜಮ್ಮು ಘಟಕದ ನಿಯೋಗವು ಸೋಮವಾರ ಭೇಟಿಯಾಗಲಿದೆ. ಈ ಭೇಟಿಗೆ ಜಮ್ಮು–ಕಾಶ್ಮೀರ ಆಡಳಿತವು ಒಪ್ಪಿಗೆ ನೀಡಿದೆ. ಸ್ಥಳೀಯಾಡಳಿತ ಚುನಾವಣೆಗಳು ಘೋಷಣೆಯಾದ ಬಳಿಕ ಜಮ್ಮು–ಕಾಶ್ಮೀರದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ರಾಜಕೀಯ ಪಕ್ಷಗಳ ಬಂಧನದಲ್ಲಿರುವ ನಾಯಕರನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿದೆ.

ಆರು ನಾಯಕರ ಬಿಡುಗಡೆ ಸಾಧ್ಯತೆ

ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಳ್ಳುವುದಕ್ಕಾಗಿ ರಾಜಕೀಯ ನಾಯಕರನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಕನಿಷ್ಠ ಆರು ಮಂದಿ ನಾಯಕರನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಜಮ್ಮು–ಕಾಶ್ಮೀರ ಮತ್ತು ಲಡಾಖ್‌ಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿಸುವ ಪ್ರಕ್ರಿಯೆ ಅಕ್ಟೋಬರ್‌ 31ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ನಂತರವಷ್ಟೇ ಈ ನಾಯಕರನ್ನು ಬಿಡುಗಡೆ ಮಾಡಲಾಗುವುದು.

ಮೊದಲ ಹಂತದಲ್ಲಿ ಯಾರನ್ನು ಬಿಡುಗಡೆ ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಮಾಜಿ ಸಚಿವ ಮೊಹಮ್ಮದ್‌ ಸಾಗರ್‌ ಮತ್ತು ಮಾಜಿ ಶಾಸಕ ಇಶ್ಫಾಕ್‌ ಜಬ್ಬಾರ್‌ (ಇಬ್ಬರೂ ಎನ್‌ಸಿಯವರು), ಐಎಎಸ್‌ಗೆ ರಾಜೀನಾಮೆ ಕೊಟ್ಟು ರಾಜಕಾರಣಿಯಾಗಿರುವ ಶಾ ಫೈಸಲ್‌, ಮಾಜಿ ಸಚಿವ ನಯೀಮ್‌ ಅಕ್ತರ್‌ (ಪಿಡಿಪಿ), ಶ್ರೀನಗರ ಪಾಲಿಕೆಯ ಮೇಯರ್‌ ಜುನೈದ್‌ ಮಟ್ಟೂ, ಉಪ ಮೇಯರ್‌ ಶೇಖ್‌ ಇಮ್ರಾನ್‌ ಮೊದಲ ಹಂತದಲ್ಲಿ ಬಿಡುಗಡೆ ಆಗಬಹುದು ಎನ್ನಲಾಗಿದೆ.

ಫಾರೂಕ್‌ ಅಬ್ದುಲ್ಲಾ ಅವರನ್ನು ನವೆಂಬರ್‌ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಅವರ ವಿರುದ್ಧ ಹೇರಲಾಗಿರುವ ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿಯಲ್ಲಿನ ಆರೋಪವನ್ನು ಕೈಬಿಟ್ಟ ಬಳಿಕ ಬಿಡುಗಡೆ ಆಗಲಿದೆ. ಆದರೆ, ಈ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT