ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮೇಲ್ವಸ್ತ್ರ ಧರಿಸುವುದಕ್ಕಾಗಿ ಮಹಿಳೆಯರ ಹೋರಾಟ' ಪಠ್ಯ ಕೈ ಬಿಟ್ಟ ಎನ್‌ಸಿಇಆರ್‌ಟಿ

Last Updated 18 ಮಾರ್ಚ್ 2019, 6:26 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) 9 ನೇ ತರಗತಿಯ ಇತಿಹಾಸ ಪಠ್ಯ ಪುಸ್ತಕದಲ್ಲಿ ಬದಲಾವಣೆಗಳನ್ನು ತಂದಿದೆ.ಟ್ರಾವೆಂಕೂರ್‌ನಲ್ಲಿ ಕೆಳ ಜಾತಿಯವರು ಎಂದು ಕರೆಯಲ್ಪಟ್ಟ ನಾಡಾರ್ ಮಹಿಳೆಯರು ಎದೆಭಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದಕ್ಕಾಗಿ ನಡೆಸಿದ ಹೋರಾಟದ ಕಥನ ಸೇರಿದಂತೆ ಮೂರು ಪಾಠಗಳನ್ನು ಎನ್‌ಸಿಇಆರ್‌ಟಿಕೈ ಬಿಟ್ಟಿದೆ ಎಂದುಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಮಕ್ಕಳಿಗೆ ಕಲಿಕೆಯ ಹೊರೆ ಕಡಿಮೆ ಮಾಡುವುದಕ್ಕಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ನಿರ್ದೇಶಿಸಿದ್ದು ಇದರಂತೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ಎನ್‌ಸಿಇಆರ್‌ಟಿ, ಭಾರತ ಮತ್ತು ಸಮಕಾಲೀನ ಜಗತ್ತು-1 ಎಂಬ ಪಠ್ಯ ಪುಸ್ತಕದಲ್ಲಿ 70 ಪುಟಗಳನ್ನು ಕೈ ಬಿಟ್ಟಿದೆ.

ಪರಿಷ್ಕೃತ ಪಠ್ಯ ಪುಸ್ತಕಗಳು ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಸಿದ್ಧವಾಗಲಿವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪಠ್ಯ ಪುಸ್ತಕಗಳಲ್ಲಿ ಈ ರೀತಿ ಬದಲಾವಣೆ ತಂದಿದ್ದು ಇದು ಎರಡನೇ ಬಾರಿ.

2017ರಲ್ಲಿ ಎನ್‌ಸಿಇಆರ್‌ಟಿ 182 ಪಠ್ಯ ಪುಸ್ತಕಗಳಲ್ಲಿ ಕೆಲವು ವಿಷಯಗಳನ್ನು ಸೇರಿಸಿ, ಇನ್ನು ಕೆಲವು ವಿಷಯಗಳನ್ನು ತಿದ್ದಿ, ಇನ್ನು ಕೆಲವು ವಿಷಯಗಳನ್ನು ನವೀಕರಿಸುವ ಮೂಲಕ ಒಟ್ಟು 1,334 ಬದಲಾವಣೆಗಳನ್ನು ತಂದಿತ್ತು.

ಪಠ್ಯ ಪುಸ್ತಕದಿಂದ ಕೈ ಬಿಟ್ಟ ವಿಷಯಗಳು ಯಾವುದು?
1. ಉಡುಗೆ: ಸಾಮಾಜಿಕ ಇತಿಹಾಸ (Clothing: A Social History): ಉಡುಗೆ ಬಗ್ಗೆ ನಡೆದ ಸಾಮಾಜಿಕ ಹೋರಾಟಗಳು ಎಂಬ ವಿಷಯವನ್ನು ಇಲ್ಲಿ ಅಳಿಸಲಾಗಿದೆ.

2.ಇತಿಹಾಸ ಮತ್ತು ಕ್ರೀಡೆ: ಕ್ರಿಕೆಟ್ ಕಥೆ (History and Sport: The Story of Cricket): ಭಾರತದಲ್ಲಿ ಕ್ರಿಕೆಟ್ ಇತಿಹಾಸ ಮತ್ತು ಅದು ಜಾತಿ, ಪ್ರದೇಶ ಮತ್ತು ಸಮುದಾಯದೊಂದಿಗೆ ಈ ಕ್ರೀಡೆ ಹೇಗೆ ಬೆಸೆದುಕೊಂಡಿದೆ ಎಂಬುದರ ಬಗ್ಗೆ.

3. ಗ್ರಾಮೀಣ ಜನರು ಮತ್ತು ರೈತರು : ಗ್ರಾಮೀಣ ಜನರು ಮತ್ತು ರೈತರ ಜೀವನದ ಮೇಲೆ ಬಂಡವಾಳಶಾಹಿ ಮತ್ತು ವಸಾಹತುಶಾಹಿ ಯಾವ ರೀತಿ ಪ್ರಭಾವ ಬೀರಿದೆ ಎಂಬುದರ ಬಗ್ಗೆ

ಉಡುಗೆ: ಸಾಮಾಜಿಕ ಇತಿಹಾಸ ಎಂಬುದು ಇತಿಹಾಸ ಪಠ್ಯ ಪುಸ್ತಕದಲ್ಲಿನ ಕೊನೆಯ ಪಾಠವಾಗಿದೆ.ಉಡುಗೆ- ತೊಡುಗೆಗಳಿಗೆ ಸಂಬಂಧಿಸಿ ಭಾರತ ಮತ್ತು ಇಂಗ್ಲೆಂಡ್‍ನಲ್ಲಿ ನಡೆದ ಸಾಮಾಜಿಕ ಹೋರಾಟಗಳ ಬಗ್ಗೆ ಇಲ್ಲಿ ಹೇಳಲಾಗಿದೆ.ಅದರಲ್ಲಿ ಜಾತಿ ಸಂಘರ್ಷ ಮತ್ತು ವಸ್ತ್ರ ಬದಲಾವಣೆ (Caste Conflict and Dress Change) ಎಂಬ ಪಾಠದಲ್ಲಿ ವರ್ಷಗಳ ಹಿಂದೆ ಭಾರತದಲ್ಲಿಆಹಾರ ಮತ್ತು ಉಡುಗೆಗಳಬಗ್ಗೆ ನಡೆದ ಹೋರಾಟಗಳ ಕತೆಯಾಗಿದೆ.

ಇದು ಯಾವ ಹೋರಾಟ?
ದಕ್ಷಿಣ ತಿರುವಿದಾಂಕೂರ್ (ಟ್ರಾವೆಂಕೂರ್) ನಾಡಾರ್ (ಚನ್ನಾರ್) ಜಾತಿಯ ಮಹಿಳೆಯರು ಎದೆಭಾಗವನ್ನು ಮುಚ್ಚಬಾರದು ಎಂಬ ಆದೇಶವಿತ್ತು. ಹಿಂದೂ ಧರ್ಮದಲ್ಲಿದ್ದ ನಾಡಾರ್ ಜಾತಿಯವರು ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಅಂಥಾ ಮಹಿಳೆಯರು ಮೇಲ್ವಸ್ತ್ರ ಧರಿಸಬಹುದಾಗಿತ್ತು. ಹಾಗಾಗಿ ಹಲವಾರು ಮಂದಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು.ಹೀಗೆ ಮತಾಂತರಗೊಂಡ ಮಹಿಳೆಯರ ಮೇಲೆ ಅಧಿಕಾರಿ ವರ್ಗದ ಜನರು ಹಿಂಸೆ, ಕಿರುಕುಳಗಳನ್ನು ನೀಡಿದ್ದಲ್ಲದೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರು. ಅಧಿಕಾರಿ ವರ್ಗದ ಜನರಈ ಕೃತ್ಯಗಳ ವಿರುದ್ಧ ನಾಡಾರ್ ಜನರು ಕೈಗೊಂಡ ಪ್ರತಿಭಟನೆಯೇ ಚನ್ನಾರ್ ಚಳವಳಿ.

ಮೇ 1822ರಲ್ಲಿ ಟ್ರಾವೆಂಕೂರ್‌ನಲ್ಲಿ ಚನ್ನಾರ್ ಜಾತಿಯ ಮಹಿಳೆಯರು ಮೇಲ್ವಸ್ತ್ರ ಧರಿಸಿದ್ದಕ್ಕಾಗಿ ನಾಯರ್ ಜಾತಿಯವರು ಸಾರ್ವಜನಿಕ ಸ್ಥಳಗಳಲ್ಲಿ ಹಲ್ಲೆ ನಡೆಸಿದ್ದರು. ಇದರ ತರುವಾಯ ಕೆಲವು ವರ್ಷಗಳ ಕಾಲ ವಸ್ತ್ರ ಸಂಹಿತೆ ಬಗ್ಗೆ ಸಂಘರ್ಷಗಳು ನಡೆದಿತ್ತು ಎಂದು ಪಠ್ಯ ಪುಸ್ತಕದಲ್ಲಿದೆ.

Caste Conflict and Dress Change ಎಂಬ ವಿಷಯವನ್ನು ಸಿಬಿಎಸ್‍ಐ ಪಠ್ಯಪುಸ್ತಕದಿಂದ ಕೈ ಬಿಡಲಾಗುವುದು ಮತ್ತು 2017ರಲ್ಲಿ ಈ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳಬಾರದು ಎಂದು 2016ರಲ್ಲಿ ಸಿಬಿಎಸ್‍ಇ ಸುತ್ತೋಲೆ ಹೊರಡಿಸಿತ್ತು.ಆದಾಗ್ಯೂ, ಈ ಪಾಠ ಅದೇ ಪಠ್ಯ ಪುಸ್ತಕದಲ್ಲಿ ಉಳಿದುಕೊಂಡಿದೆ. ಆದರೆ ಎನ್‍ಸಿಇಆರ್‌ಟಿ ಈ ಪಠ್ಯವನ್ನೇ ತೆಗೆದುಹಾಕಿದೆ.


ಈ ಪಾಠದಲ್ಲಿ ಸ್ವದೇಶಿ ಚಳವಳಿ ಮತ್ತು ಮಹಾತ್ಮ ಗಾಂಧಿಯವರು ಹೋರಾಟ ಭಾರತದಲ್ಲಿನ ಉಡುಗೆ- ತೊಡುಗೆ ಮೇಲೆ ಯಾವ ರೀತಿಯ ಬದಲಾವಣೆಗಳನ್ನು ತಂದಿದೆ ಎಂಬುದರ ಬಗ್ಗೆಯೂ ವಿವರಣೆ ಇದೆ.

ಪಠ್ಯ ಪುಸ್ತಕಗಳಲ್ಲಿನ ಬದಲಾವಣೆ ಬಗ್ಗೆ ಎನ್‌ಸಿಇಆರ್‌ಟಿ ಸಾಮಾಜಿಕ ಅಧ್ಯಯನ ಶಿಕ್ಷಣ ವಿಭಾಗದ ಮುಖ್ಯಸ್ಥೆ ಗೌರಿ ಶ್ರೀವಾಸ್ತವ್ ಅವರಲ್ಲಿ ಕೇಳಿದಾಗ ಎನ್‌ಸಿಇಆರ್‌ಟಿ ನಿರ್ದೇಶಕ ಹೃಷಿಕೇಶ್ ಸೇನಾಪತಿ ಅವರಲ್ಲಿ ಕೇಳಿ ಎಂದು ಉತ್ತರಿಸಿದ್ದಾರೆ.ಸೇನಾಪತಿ ಅವರಿಗೆ ಇಂಡಿಯನ್ ಎಕ್ಸ್‌ಪ್ರೆಸ್‌ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಿಲ್ಲ. ಸಂದೇಶ ಕಳಿಸಿದ್ದರೂ ಅದಕ್ಕೆ ಉತ್ತರಿಸಿಲ್ಲ.

ಎಲ್ಲ ಪಠ್ಯ ವಿಷಯಗಳಿಂದಲೂ ಒಂದಿಷ್ಟು ಪಠ್ಯಗಳನ್ನು ಕಡಿಮೆ ಮಾಡಬೇಕೆಂದು ಜಾವಡೇಕರ್ ನಿರ್ದೇಶಿಸಿದ್ದರು. ಮೂಲಗಳ ಪ್ರಕಾರ ಎನ್‌ಸಿಇಆರ್‌ಟಿ ಸಾಮಾಜಿಕ ವಿಜ್ಞಾನ ಪಠ್ಯದಿಂದ ಶೇ. 20 ರಷ್ಟು ಪಠ್ಯ ಭಾಗವನ್ನು ತೆಗೆದುಹಾಕಿದೆ.ಆದರೆ ಗಣಿತ ಮತ್ತು ವಿಜ್ಞಾನ ಪಠ್ಯದಲ್ಲಿ ಬದಲಾವಣೆ ಮಾಡಿದ್ದು ಕಡಿಮೆ.ವಿದ್ಯಾರ್ಥಿಗಳು, ಪೋಷಕರಿಂದ ಮತ್ತು ಶಿಕ್ಷಕರ ಮನವಿ ಮೇರೆಗೆ ಪಠ್ಯದಲ್ಲಿ ಬದಲಾವಣೆ ಮಾಡಲು ಸರ್ಕಾರ ನಿರ್ಧರಿಸಿತ್ತು.

ಪಠ್ಯಗಳನ್ನು ಕೈ ಬಿಡುವ ಕಾರ್ಯ ಒಂದೆಡೆಯಾದರೆ ಇನ್ನೊಂದೆಡೆ 8ನೇ ತರಗತಿಯ ಹಿಂದಿ ಪಠ್ಯ ಪುಸ್ತಕದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕವನವನ್ನು ಎನ್‌ಸಿಇಆರ್‌ಟಿ ಸೇರ್ಪಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT