ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾ’ ರಾಜಕಾರಣದಲ್ಲಿ ಹೊಸ ಸಮೀಕರಣ?: ಸೇನಾ– ಎನ್‌ಸಿಪಿ ಮೈತ್ರಿಗೆ ಸಿದ್ಧತೆ

ಪವಾರ್‌– ಸೋನಿಯಾ ಭೇಟಿಗೂ ಮುನ್ನ ರಾಜಕೀಯ ಚಟುವಟಿಕೆ
Last Updated 3 ನವೆಂಬರ್ 2019, 20:26 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ದಲ್ಲಿ ಅಧಿಕಾರದ ಸಮಾನ ಹಂಚಿಕೆಯ ವಿಚಾರವಾಗಿ ಶಿವಸೇನಾ ತನ್ನ ನಿಲುವನ್ನು ಇನ್ನಷ್ಟು ಕಠಿಣಗೊಳಿಸಿದೆ. ‘ನಮ್ಮ ಬೇಡಿಕೆಗಳನ್ನು ಒಪ್ಪದಿದ್ದರೆ ಪರ್ಯಾಯ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸುತ್ತೇವೆ’ ಎಂಬ ಎಚ್ಚರಿಕೆಯನ್ನು ಬಿಜೆಪಿಗೆ ನೀಡಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಸಂಪಾದಕೀಯ ಬರಹದ ಮೂಲಕ ಬಿಜೆಪಿಗೆ ಸವಾಲು ಎಸೆದಿರುವ ಶಿವಸೇನಾ, ‘ಬಿಜೆಪಿಯು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಿ ಅಥವಾ ಸದನದಲ್ಲಿ ಬಹುಮತ ಸಾಬೀತುಪಡಿಸಲಿ. ಅದು ಸಾಧ್ಯವಾಗದಿದ್ದರೆ ಎರಡನೆಯ ಅತಿದೊಡ್ಡ ಪಕ್ಷವಾಗಿರುವ ಶಿವಸೆನಾ ಸರ್ಕಾರ ರಚನೆಗೆ ಮುಂದಾಗಲಿದೆ’ ಎಂದಿದೆ.

ಕಾಂಗ್ರೆಸ್‌, ಎನ್‌ಸಿಪಿ ಹಾಗೂ ಕೆಲವು ಪಕ್ಷೇತರ ಶಾಸಕರು ನಮಗೆ ಬೆಂಬಲ ನೀಡಲಿದ್ದಾರೆ ಎಂದು ಶಿವಸೇನಾ ಇದೇ ಮೊದಲಬಾರಿಗೆ ಬಹಿರಂಗವಾಗಿ ಹೇಳಿಕೊಂಡಿದೆ.

‘ಎನ್‌ಸಿಪಿಯ 54, ಕಾಂಗ್ರೆಸ್‌ನ 44 ಮಂದಿ ಹಾಗೂ ಕೆಲವು ಪಕ್ಷೇತರರ ನೆರವಿನಿಂದ ನಾವು ಸುಲಭವಾಗಿ ಬಹುಮತ ಪಡೆಯಬಲ್ಲೆವು. ಶಿವಸೇನಾ ದವರನ್ನೇ ಮುಖ್ಯಮಂತ್ರಿಯೂ ಮಾಡಬಹುದು. ಇದಕ್ಕಾಗಿ ತಮ್ಮದೇ ಆದ ಸಿದ್ಧಾಂತಗಳನ್ನು ಹೊಂದಿರುವ ಮೂರು ರಾಜಕೀಯ ಪಕ್ಷಗಳು ಒಂದು ಸರ್ವಸಮ್ಮತ ನೀತಿಯನ್ನು ರೂಪಿಸಬೇಕಾಗುತ್ತದೆ’ ಎಂದು ಲೇಖನದಲ್ಲಿ ಹೇಳಲಾಗಿದೆ.

ಅಜಿತ್‌ ಅವರಿಗೆ ರಾವತ್‌ ಸಂದೇಶ: ಬಿಜೆಪಿಯ ಜೊತೆಗೆ ಶಿವಸೇನಾದ ಅಧಿಕೃತ ಮಾತುಕತೆ ಇನ್ನೂ ಆರಂಭವಾಗಿಲ್ಲ. ಆದರೆ, ಶಿವಸೇನಾದ ಮುಖಂಡ ಸಂಜಯ್‌ ರಾವತ್‌ ಅವರು ಎನ್‌ಸಿಪಿ ಮುಖಂಡ ಅಜಿತ್‌ ಪವಾರ್‌ ಅವರನ್ನು ಸಂಪರ್ಕಿಸಿದ್ದಾರೆ. ಈ ವಿಚಾರವನ್ನು ಅಜಿತ್‌ ಪವಾರ್‌ ಅವರೇ ಭಾನುವಾರ ಬಹಿರಂಗಪಡಿಸಿದರು.

‘ನಮಸ್ಕಾರ, ನಾನು ಸಂಜಯ್‌ ರಾವತ್‌. ಜೈ ಮಹಾರಾಷ್ಟ್ರ’ ಎಂಬ ಎಸ್‌ಎಂಎಸ್‌ ಒಂದನ್ನು ರಾವತ್‌ ಅವರು ನನಗೆ ಕಳುಹಿಸಿದ್ದಾರೆ. ನನ್ನಿಂದ ಅವರು ಕರೆಯನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಅದರ ಅರ್ಥ. ನಾನು ಶೀಘ್ರದಲ್ಲೇ ಅವರನ್ನು ಸಂಪರ್ಕಿಸುತ್ತೇನೆ’ ಎಂದು ಅಜಿತ್‌ ಪವಾರ್‌ ಮಾಧ್ಯಮದವರಿಗೆ ತಿಳಿಸಿದರು. ತಮಗೆ ಬಂದಿರುವ ಎಸ್‌ಎಂಎಸ್‌ ಅನ್ನೂ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದರು.

ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸೋಮವಾರ ದೆಹಲಿಯಲ್ಲಿ ಭೇಟಿಮಾಡಲಿದ್ದಾರೆ. ಅದಕ್ಕೆ ಮುನ್ನಾದಿನ ಈ ಬೆಳವಣಿಗೆ ನಡೆದಿರುವು ದರಿಂದ ರಾಜ್ಯದಲ್ಲಿ ಶಿವಸೇನಾ– ಎನ್‌ಸಿಪಿ– ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ದಟ್ಟವಾಗಿದೆ.

‘170 ಶಾಸಕರ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಶಿವಸೇನಾ ಸರ್ಕಾರ ರಚಿಸಲಿದೆ’ ಎಂದು ಸಂಜಯ್ ರಾವತ್‌ ಭಾನುವಾರ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಜಿತ್‌ ಪವಾರ್‌, ‘ಈ ಸಂಖ್ಯೆಯನ್ನು ಅವರು ಹೇಗೆ ಉಲ್ಲೇಖಿಸಿದರು ಎಂಬುದು ನನಗೆ ತಿಳಿದಿಲ್ಲ. ಕಾಂಗ್ರೆಸ್‌- ಎನ್‌ಸಿಪಿ ಮೈತ್ರಿಗೆ 110 ಸಂಖ್ಯಾಬಲ ಇದೆ. ವಿರೋಧ ಪಕ್ಷದಲ್ಲಿ ಕೂರಲು ಮಾತ್ರ ನಮಗೆ ಸಾಧ್ಯ’ ಎಂದಿದ್ದಾರೆ.

ಶಾಸಕರ ಮೇಲೆ ಒತ್ತಡ: ಸೇನಾ ಆರೋಪ
‘ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಮೇಲೆ ಒತ್ತಡ ಹೇರಲು ಸರ್ಕಾರಿ ಸಂಸ್ಥೆಗಳನ್ನು ಹಾಗೂ ಕ್ರಿಮಿನಲ್‌ ಶಕ್ತಿಗಳನ್ನು ಬಳಸಲಾಗುತ್ತಿದೆ. ಯಾವ ಸಂಸ್ಥೆ ಹಾಗೂ ಶಕ್ತಿಯನ್ನು ಬಳಕೆಮಾಡಲಾಗುತ್ತಿದೆ ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ’ ಎಂದುಸಂಜಯ್‌ ರಾವತ್‌ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಹೇಳಿದರು.

‘ಪ್ರಮಾಣವಚನಕ್ಕಾಗಿ ಬಿಜೆಪಿಯವರು ವಾಂಖೆಡೆ ಸ್ಟೇಡಿಯಂ ಹಾಗೂ ಮಹಾಲಕ್ಷ್ಮಿ ರೇಸ್‌ಕೋರ್ಸ್‌ ಅನ್ನು ಕಾಯ್ದಿರಿಸಿದ್ದಾರೆ. ಹಾಗಿದ್ದಮೇಲೆ ಸರ್ಕಾರ ರಚನೆಗೆ ಯಾಕೆ ಮುಂದಾಗುತ್ತಿಲ್ಲ. ಶಿವಸೇನಾಕ್ಕೆ 170 ಶಾಸಕರ ಬೆಂಬಲ ಲಭ್ಯವಾಗಲಿದ್ದು ಶಿವಾಜಿ ಪಾರ್ಕ್‌ನಲ್ಲಿ ಪ್ರಮಾಣವಚನ ಸಮಾರಂಭ ಹಮ್ಮಿಕೊಳ್ಳ ಲಾಗುವುದು’ ಎಂದು ರಾವತ್‌ ಹೇಳಿದರು.

ಔರಂಗಾಬಾದ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ‘ಶಿವಸೇನಾ ನೇತೃತ್ವದ ಸರ್ಕಾರ ರಚನೆಯಾಗುವುದೇ ಅಥವಾ ಇಲ್ಲವೇ ಎಂಬುದು ಶೀಘ್ರದಲ್ಲೇ ಬಹಿರಂಗವಾಗ ಲಿದೆ’ ಎಂದಿದ್ದಾರೆ. ಆ ಕುರಿತು ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.

ಫಡಣವೀಸ್‌– ಶಾ ಭೇಟಿ ಇಂದು
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರನ್ನು ಸೋಮವಾರ ದೆಹಲಿ ಯಲ್ಲಿ ಭೇಟಿಮಾಡಲಿದ್ದಾರೆ.

ಆದರೆ, ‘ಸರ್ಕಾರ ರಚನೆಯ ವಿಚಾರವಾಗಿ ಪಕ್ಷದ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಲು ಮುಖ್ಯಮಂತ್ರಿ ದೆಹಲಿಗೆ ಹೋಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಿಂದಾಗಿ ಸಾವಿರಾರು ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಅವರಿಗೆ ಪರಿಹಾರ ನೀಡಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ಹಣ ಬಿಡುಗಡೆ ಮಾಡುವಂತೆ ಗೃಹಸಚಿವರಲ್ಲಿ ಅವರು ಮನವಿ ಮಾಡಲಿದ್ದಾರೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT