ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಳಿಕೆಗೆ ಹೊಸ ದಾರಿ: ‘ಗೋ’ ಪಾಲಕರಿಗೆ ಶುಕ್ರದೆಸೆ

ಹಸುಗಳ ನಿರ್ವಹಣೆಗೆ ಅನುದಾನ ಹೆಚ್ಚಳ
Last Updated 11 ಮಾರ್ಚ್ 2019, 19:56 IST
ಅಕ್ಷರ ಗಾತ್ರ

ಜೈಪುರ: ಅಶೋಕ್‌ ಗೆಹ್ಲೋಟ್‌ ನೇತೃತ್ವದ ರಾಜಸ್ಥಾನ ಕಾಂಗ್ರೆಸ್‌ ಸರ್ಕಾರಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾರರ ಮನವೊಲಿಕೆಗೆ ಹಲವು ಆಕರ್ಷಕ ಯೋಜನೆಗಳನ್ನು ಜಾರಿಗೆ ತಂದಿದೆ.

ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬರುತ್ತಲೇ ಗೋವುಗಳ ಕಲ್ಯಾಣಕ್ಕೆ ಆದ್ಯತೆ ನೀಡಿದ್ದ ಸರ್ಕಾರ ಈಗ ಗೋವುಗಳ ನಿರ್ವಹಣಾ ಅನುದಾನ ಹೆಚ್ಚಿಸಿದೆ. ಏಪ್ರಿಲ್‌ನಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಮನೆಗಳಿಗೆ ಉಚಿತವಾಗಿ ನೀರು ಪೂರೈಸುವುದಾಗಿ ಪ್ರಕಟಿಸಿದೆ.

ರಾಜಸ್ಥಾನ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಗೋವು ಮಹತ್ವದ ಸ್ಥಾನ ಪಡೆದಿತ್ತು. ಗೋಶಾಲೆಗಳ ಅನುದಾನ ಹೆಚ್ಚಳ, ಬೀಡಾಡಿ ದನಗಳ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಕಾಂಗ್ರೆಸ್‌ ಭರವಸೆ ನೀಡಿತ್ತು.

ವಸುಂಧರಾ ರಾಜೆ ಸಿಂಧಿಯಾ ನೇತೃತ್ವದಹಿಂದಿನ ಬಿಜೆಪಿ ಸರ್ಕಾರ ಭಾರತದಲ್ಲಿಯೇ ಮೊದಲ ಬಾರಿಗೆ ಗೋವುಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ತೆರೆದಿತ್ತು. ಕಾಂಗ್ರೆಸ್‌ ಕೂಡ ಅದೇ ಹಾದಿಯಲ್ಲಿ ಸಾಗಿದೆ.

ಬೀಡಾಡಿ ದನಗಳನ್ನು ದತ್ತು ತೆಗೆದುಕೊಂಡವರನ್ನು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಮಾರಂಭದಲ್ಲಿ ಸತ್ಕರಿಸಲಾಗುವುದು ಎಂದು ಅಧಿಕಾರಕ್ಕೆ ಬರುತ್ತಲೇ ಕಾಂಗ್ರೆಸ್‌ ಸರ್ಕಾರ ಘೋಷಿಸಿತ್ತು. ಇದೀಗ ಹಸುಗಳ ನಿರ್ವಹಣಾ ವೆಚ್ಚವನ್ನು ಹೆಚ್ಚಿಸಿ ಗೋವು ಪಾಲನಾ ನಿರ್ದೇಶನಾಲಯ ಆದೇಶ ಹೊರಡಿಸಿದೆ.

ಅನುದಾನ ಹೆಚ್ಚಳ:ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಳೆಯ ಹಸುಗಳ ಪ್ರತಿದಿನದ ವೆಚ್ಚವನ್ನು ₹16ರಿಂದ ₹20ಕ್ಕೆ ಮತ್ತು ಎರಡು ವರ್ಷಕ್ಕಿಂತ ದೊಡ್ಡ ಹಸುಗಳ ವೆಚ್ಚವನ್ನು ₹32ರಿಂದ ₹40ಕ್ಕೆ ಹೆಚ್ಚಿಸಿದೆ. ವರ್ಷದಲ್ಲಿ ಒಟ್ಟು 180 ದಿನಗಳ ನಿರ್ವಹಣಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ.

ರಾಜಸ್ಥಾನ ಸರ್ಕಾರ ವಾರದ ಹಿಂದೆ ಆಯೋಜಸಿದ್ದ ರಾಜ್ಯಮಟ್ಟದ ಸಮ್ಮೇಳನದಲ್ಲಿ 2,673 ನೋಂದಾಯಿತ ಗೋಶಾಲೆ
ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಗೋವುಗಳ ಕಲ್ಯಾಣ ಸಚಿವ ಪ್ರಮೋದ್‌ ಜೈನ್‌ ಭಯ್ಯಾ ನೇತೃತ್ವದಲ್ಲಿ ರಾಜ್ಯದಲ್ಲಿ ಹಸುಗಳ ನಿರ್ವಹಣೆ, ಸಮಸ್ಯೆ ಮತ್ತು ಪರಿಹಾರ ಕುರಿತು ಚರ್ಚಿಸಲಾಯಿತು.

ಉಚಿತ ನೀರು, ರೈತರ ಸಾಲಮನ್ನಾ

ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಮನೆಗಳಿಗೆ ಏಪ್ರಿಲ್‌ 1ರಿಂದ ಉಚಿತವಾಗಿ ನೀರು ಪೂರೈಸುವುದಾಗಿ ಅಶೋಕ್ ಗೆಹ್ಲೋಟ್‌ ಸರ್ಕಾರ ಘೋಷಿಸಿದೆ.

ರಾಜ್ಯದ ಒಟ್ಟು 3.36 ಕೋಟಿ ಜನರು ಇದರ ಲಾಭ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ ಆರಂಭಿಸುವ ಉದ್ಯಮಿಗಳಿಗೆ ಸುಲಭವಾಗಿ ಪರವಾನಗಿ ನೀಡಲು ಮತ್ತು ಸಾಲ ಸೌಲಭ್ಯ ಕಲ್ಪಿಸಲು ಸುಗ್ರೀವಾಜ್ಞೆ ಹೊರಡಿಸಿದೆ.

ರೈತರ ಸಾಲಮನ್ನಾ ಯೋಜನೆಗೆ ಕಳೆದ ತಿಂಗಳು ವಿಧ್ಯುಕ್ತ ಚಾಲನೆ ದೊರೆತಿದ್ದು 25 ಲಕ್ಷ ರೈತರಿಗೆ ಲಾಭವಾಗಲಿದೆ ಎಂದು ರಾಜಸ್ಥಾನ ಸರ್ಕಾರ ಹೇಳಿದೆ.

ಎರಡು ಹಂತದಲ್ಲಿ ಮತದಾನ

* ರಾಜಸ್ಥಾನದ 25 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 29 ಮತ್ತು ಮೇ 6ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

* ಈ ಬಾರಿ ಚುನಾವಣೆಯಲ್ಲಿ 4.85 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

* ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರ ಪೈಪೋಟಿ ಇದ್ದು, 2014ರಲ್ಲಿ 23 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT