ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ಬಹುಮತ ಗಳಿಸಲು ಬಿಜೆಪಿ ರಣತಂತ್ರ

ಮಹತ್ವ ಪಡೆದ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ವಿಧಾನಸಭೆ ಚುನಾವಣೆ
Last Updated 29 ಮೇ 2019, 3:30 IST
ಅಕ್ಷರ ಗಾತ್ರ

ನವದೆಹಲಿ:ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೇರಿರುವ ಎನ್‌ಡಿಎ ಇದೀಗ ರಾಜ್ಯಸಭೆಯಲ್ಲೂ ಬಹುಮತ ಗಳಿಸುವತ್ತ ಚಿತ್ತ ನೆಟ್ಟಿದೆ.

ಪ್ರಮುಖ ಮಸೂದೆಗಳ ಸುಗಮ ಅನುಮೋದನೆಗಾಗಿ ರಾಜ್ಯಸಭೆಯಲ್ಲಿ 124 ಸದಸ್ಯರನ್ನು ಹೊಂದುವುದು ಎನ್‌ಡಿಎಗೆ ಅನಿವಾರ್ಯ. ರಾಜ್ಯಸಭೆಯಲ್ಲಿ ಬಹುಮತ ಇರದ ಕಾರಣಕ್ಕೆ ತ್ರಿವಳಿ ತಲಾಖ್ ನಿಷೇಧದಂತಹ ಮಸೂದೆಗಳಿಗೆ ಅನುಮೋದನೆ ಪಡೆಯುವುದು ಎನ್‌ಡಿಎ ಸರ್ಕಾರಕ್ಕೆ ಕಳೆದ ಐದು ವರ್ಷಗಳಲ್ಲಿ ಸಾಧ್ಯವಾಗಿರಲಿಲ್ಲ. ಹೀಗಾಗಿ 2021ರ ಒಳಗೆ ಮ್ಯಾಜಿಕ್ ಸಂಖ್ಯೆ ತಲುಪಲು ಎನ್‌ಡಿಎ ಪಣತೊಟ್ಟಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಈ ವರ್ಷ ನಡೆಯಲಿರುವಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ವಿಧಾನಸಭೆ ಚುನಾವಣೆ ಎನ್‌ಡಿಎಗೆ ಮಹತ್ವದ್ದಾಗಲಿದೆ.

ಸದ್ಯ ರಾಜ್ಯಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸಂಖ್ಯೆ ಬಹುತೇಕ ಸಮಸಮವಾಗಿದೆ. ಬಿಜೆಪಿಯ 73 ಸದಸ್ಯರು ಸೇರಿ ಎನ್‌ಡಿಎ 102 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್‌ನ 50 ಸದಸ್ಯರ ಬಲದೊಂದಿಗೆ ಪ್ರತಿಪಕ್ಷಗಳು 101 ಸ್ಥಾನ ಹೊಂದಿವೆ. ಈ ವರ್ಷ (2019) 8 ಸ್ಥಾನಗಳು ತೆರವಾಗಿವೆ. ಈ ಪೈಕಿ 2 ಅಸ್ಸಾಂ ಮತ್ತು 6 ಸ್ಥಾನಗಳು ತಮಿಳುನಾಡಿನದ್ದಾಗಿವೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯಸಭಾ ಸದಸ್ಯರಾಗಿದ್ದು ಅವರ ಅವಧಿ ಜೂನ್ 14ಕ್ಕೆ ಮುಕ್ತಾಯಗೊಳ್ಳಲಿದೆ. ತಮಿಳುನಾಡಿನ 6 ಸ್ಥಾನಗಳ ಪೈಕಿ ಎಐಎಡಿಎಂಕೆ 4, ಸಿಪಿಐ 1 ಮತ್ತು ಡಿಎಂಕೆ 1 ಸ್ಥಾನ ಹೊಂದಿದೆ. ಸದ್ಯದ ಲೆಕ್ಕಾಚಾರದ ಪ್ರಕಾರಎಐಎಡಿಎಂಕೆ 1 ಸ್ಥಾನ ಕಳೆದುಕೊಳ್ಳಲಿದ್ದು ಡಿಎಂಕೆಗೆ 2 ಸ್ಥಾನ ದೊರೆಯಲಿದೆ.

ಕಾಂಗ್ರೆಸ್‌ಗೇ ಹೆಚ್ಚು ನಷ್ಟ

2020ರಲ್ಲಿ ರಾಜ್ಯಸಭೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ. ಆ ವರ್ಷ ಒಟ್ಟು 72 ಸದಸ್ಯರ ಅವಧಿ ಪೂರ್ಣಗೊಳ್ಳಲಿದ್ದು, ಇದರಲ್ಲಿ ಕಾಂಗ್ರೆಸ್‌ನವರು 15 ಮಂದಿ ಇದ್ದಾರೆ. ಈ ಪೈಕಿ ಹೆಚ್ಚಿನ ಸ್ಥಾನಗಳನ್ನು ಮರಳಿ ಗಳಿಸುವುದು ಕಾಂಗ್ರೆಸ್‌ಗೆ ಸಾಧ್ಯವಾಗಲಾರದು ಎನ್ನಲಾಗಿದೆ.

2020ರ ವೇಳೆಗೆ ಎಡಪಕ್ಷಗಳ ರಾಜ್ಯಸಭಾ ಸದಸ್ಯರ ಸಂಖ್ಯೆ ಈಗಿರುವ 7ರಿಂದ 5ಕ್ಕೆ ಇಳಿಕೆಯಾಗಲಿದೆ. ಸಿಪಿಐನ ಡಿ.ರಾಜಾ ಈ ವರ್ಷ ಜೂನ್‌ನಲ್ಲಿ ಹಾಗೂ ಸಿಪಿಐ(ಎಂ)ಟಿ.ಕೆ.ರಂಗರಾಜನ್ 2020ರಲ್ಲಿ ನಿವೃತ್ತರಾಗಲಿದ್ದಾರೆ. ಸದ್ಯದ ಅಂಕಿಅಂಶಗಳ ಪ್ರಕಾರ ಈ ಸ್ಥಾನಗಳನ್ನು ಮರಳಿ ಗಳಿಸಲು ಎಡಪಕ್ಷಗಳಿಗೆ ಸಾಧ್ಯವಾಗಲಾರದು.

ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾದವರ ಪೈಕಿ 10 ಮಂದಿ2020ರ ವೇಳೆಗೆ ನಿವೃತ್ತರಾಗಲಿದ್ದಾರೆ. ಇದರಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ಸ್ಥಾನಗಳೇ ಹೆಚ್ಚು. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಬಹುಮತ ಇರುವುದರಿಂದ ತೆರವಾದ 10 ಸ್ಥಾನಗಳಲ್ಲಿ 9 ಬಿಜೆಪಿ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಪ್ರಸ್ತುತ ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷ 13 ಸ್ಥಾನಗಳನ್ನು ಹೊಂದಿದ್ದು, 2020ರ ವೇಳೆಗೆ 6 ಸ್ಥಾನಗಳು ತೆರವಾಗಲಿವೆ. ಈ ಪೈಕಿ ಒಂದನ್ನು ಮಾತ್ರ ಮರಳಿ ಗಳಿಸಲು ಅದಕ್ಕೆ ಸಾಧ್ಯವಾಗಬಹುದು. 2020ರ ವೇಳೆಗೆ ಬಿಎಸ್‌ಪಿಯ 4 ಸ್ಥಾನಗಳ ಪೈಕಿ 2 ತೆರವಾಗಲಿದ್ದು ಇದನ್ನು ಮರಳಿ ಗಳಿಸಲು ಅದಕ್ಕೆ ಸಾಧ್ಯವಾಗದೇ ಹೋಗಬಹುದು.

ಎನ್‌ಸಿಪಿಯ ಶರದ್‌ ಪವಾರ್ ಅವಧಿ 2020ಕ್ಕೆ ಮುಕ್ತಾಯವಾಗಲಿದೆ. ಇವರು ಪುನರಾಯ್ಕೆಯಾಗುತ್ತಾರೋ ಇಲ್ಲವೋ ಎಂಬುದು ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಬಳಿಕ ಸ್ಪಷ್ಟವಾಗಬಹುದು.

2020ರಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಗಳಿಸಿದಂತೆಯೇ ವಿಧಾನಸಭೆ ಚುನಾವಣೆಯಲ್ಲೂ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸಿದಲ್ಲಿ ಎನ್‌ಡಿಎಗೆ ಹೆಚ್ಚು ನೆರವಾಗಲಿದೆ.

ಹೀಗಾಗಿ 2021ರ ವೇಳೆಗೆ ರಾಜ್ಯಸಭೆಯಲ್ಲಿ ಮ್ಯಾಜಿಕ್‌ ಸಂಖ್ಯೆ 124 ಅನ್ನು ಹೊಂದಲು ಎನ್‌ಡಿಎಗೆ ಸಾಧ್ಯವಾಗಬಹುದು. ತನ್ಮೂಲಕ ಕೇಂದ್ರದಲ್ಲಿ ಸರ್ಕಾರದ ಅವಧಿ ಪೂರ್ಣಗೊಳ್ಳುವ ಮೊದಲೇ ಪ್ರಮುಖ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ.

ರಾಜ್ಯಸಭೆಯಲ್ಲಿ ಪ್ರಮುಖ ಪಕ್ಷಗಳ ಬಲಾಬಲ

ಪಕ್ಷ – ಸ್ಥಾನ

ಎನ್‌ಡಿಎ – 102

ಯುಪಿಎ – 66

ಟಿಎಂಸಿ – 13

ಎಸ್‌ಪಿ – 13

ಇತರೆ – 12

ಬಿಜೆಡಿ – 9

ಎಡಪಕ್ಷಗಳು – 7

ಟಿಡಿಪಿ – 6

ಟಿಆರ್‌ಎಸ್ – 6

ಬಿಎಸ್‌ಪಿ – 4‌

ನಾಮನಿರ್ದೇಶಿತರು – 4

ವೈಎಸ್‌ಆರ್‌ಸಿಪಿ – 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT