4

ನೀಟ್‌: 196 ಕೃಪಾಂಕ ನೀಡಲು ಮದ್ರಾಸ್‌ ಹೈಕೋರ್ಟ್‌ ಆದೇಶ

Published:
Updated:

ಚೆನ್ನೈ: ತಮಿಳು ಭಾಷೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಬರೆದಿದ್ದ 24 ಸಾವಿರ ವಿದ್ಯಾರ್ಥಿಗಳಿಗೆ 196 ಕೃಪಾಂಕ ನೀಡುವಂತೆ ಸಿಬಿಎಸ್‌ಇಗೆ ಮದ್ರಾಸ್‌ ಹೈಕೋರ್ಟ್‌ ಮಂಗಳವಾರ ಆದೇಶ ನೀಡಿದೆ.

49 ಪ್ರಶ್ನೆಗಳನ್ನು ಇಂಗ್ಲಿಷ್‌ನಿಂದ ತಪ್ಪಾಗಿ ಭಾಷಾಂತರ ಮಾಡಿರುವುದರಿಂದ ಈ ಕ್ರಮಕೈಗೊಳ್ಳಬೇಕು ಮತ್ತು ಇನ್ನು ಹದಿನೈದು ದಿನಗಳಲ್ಲಿ ಪರಿಷ್ಕೃತ ರ‍್ಯಾಂಕ್‌ ಪಟ್ಟಿ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಸಿಪಿಎಂನ ಹಿರಿಯ ಮುಖಂಡ ಟಿ.ಕೆ. ರಂಗರಾಜನ್‌ ಈ ಬಗ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠದ ನ್ಯಾಯಮೂರ್ತಿ ಸಿ.ಟಿ. ಸೇಲ್ವಂ ಮತ್ತು ಎ.ಎಂ. ಬಷೀರ್ ಅಹಮದ್‌ ಅವರಿದ್ದ ಪೀಠ ಈ ಆದೇಶ ನೀಡಿದೆ.

ತಮಿಳು ಭಾಷೆಯಲ್ಲಿ ತಪ್ಪುಗಳಿಂದ ಕೂಡಿರುವ ಎಲ್ಲ 49 ಪ್ರಶ್ನೆಗಳಿಗೆ ತಲಾ 4 ಅಂಕಗಳನ್ನು ನೀಡಬೇಕು ಎಂದು ಪೀಠ ಸೂಚಿಸಿದೆ. ಆದರೆ, ವೈದ್ಯಕೀಯ ಪ್ರವೇಶದ ಕೌನ್ಸೆಲಿಂಗ್‌ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳೇ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಈ ಆದೇಶದ ವಿರುದ್ಧ  ಸಿಬಿಎಸ್‌ಇ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸದಿದ್ದರೆ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡಬೇಕಾಗುತ್ತದೆ. ಆಗ ತಮಿಳುನಾಡು ಸರ್ಕಾರ ಸಹ ವೈದ್ಯಕೀಯ ಪ್ರವೇಶ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹೊಸದಾಗಿ ಕೌನ್ಸೆಲಿಂಗ್‌ ನಡೆಸಬೇಕಾಗುತ್ತದೆ.

‘ನೀಟ್‌’ನಲ್ಲಿ ಒಟ್ಟು 180 ಪ್ರಶ್ನೆಗಳಿಗೆ 720 ಅಂಕಗಳನ್ನು ನಿಗದಿಪಡಿಸಲಾಗಿತ್ತು.  ಸಿಬಿಎಸ್‌ಇ ಮೇ 6ರಂದು 136 ನಗರಗಳಲ್ಲಿ 11 ಭಾಷೆಗಳಲ್ಲಿ ’ನೀಟ್‌’ ನಡೆಸಿತ್ತು. ತಮಿಳುನಾಡಿನಲ್ಲಿ ಸುಮಾರು 1.07 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !