ಬೋಸ್‌ ಮರಿಮೊಮ್ಮಗನ ಸೌಜನ್ಯ ರಾಜಕಾರಣ

ಭಾನುವಾರ, ಏಪ್ರಿಲ್ 21, 2019
25 °C
ಮೋದಿ ಮರು ಆಯ್ಕೆ ಏಕೆ; ಮಮತಾಗೆ ವಿವರಿಸಲು ನಿರ್ಧಾರ

ಬೋಸ್‌ ಮರಿಮೊಮ್ಮಗನ ಸೌಜನ್ಯ ರಾಜಕಾರಣ

Published:
Updated:
Prajavani

ಕೋಲ್ಕತ್ತ: ವಿರೋಧಿಗಳ ಮೇಲೆ ಆರೋಪಗಳ ಸುರಿಮಳೆ, ತೀವ್ರ ಟೀಕಾ ಪ್ರಹಾರ... ಚುನಾವಣಾ ಪ್ರಚಾರದಲ್ಲಿ ಇವೆಲ್ಲ ಸಾಮಾನ್ಯ. ಆದರೆ ಕೋಲ್ಕತ್ತ ಈ ಬಾರಿ ಅಪರೂಪದ ‘ರಾಜಕೀಯ ಸೌಜನ್ಯ’ಕ್ಕೆ ಸಾಕ್ಷಿಯಾಗಲಿದೆ. ಕೋಲ್ಕತ್ತ ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಕುಮಾರ್‌ ಬೋಸ್‌ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಮಾಡಿ ‘ಮೋದಿಯನ್ನೇ ಪುನಃ ಯಾಕೆ ಆಯ್ಕೆ ಮಾಡಬೇಕು’ ಎಂಬುದನ್ನು ವಿವರಿಸಲು ನಿರ್ಧರಿಸಿದ್ದಾರೆ.

ನೇತಾಜಿ ಸುಭಾಸ್‌ಚಂದ್ರ ಬೋಸ್‌ ಅವರ ಮರಿಮೊಮ್ಮಗನಾಗಿರುವ ಚಂದ್ರಕುಮಾರ್‌ 2016ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದರು. ಭೇಟಿಗೆ ಅವಕಾಶ ಸಿಕ್ಕರೆ, ‘ಮೋದಿಯೇ ಯಾಕೆ ಪುನಃ ಪ್ರಧಾನಿಯಾಗಬೇಕು’ ಎಂಬುದನ್ನು ಮೋದಿಯ ಬಹುದೊಡ್ಡ ಟೀಕಾಕಾರರಾಗಿರುವ ಮಮತಾಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂಬ ಸುದ್ದಿಯೇ ಎರಡೂ ಪಕ್ಷಗಳ ನಾಯಕರುಮತ್ತು ಕಾರ್ಯಕರ್ತರಲ್ಲಿ ಕುತೂಹಲ ಕೆರಳುವಂತೆ ಮಾಡಿದೆ.

‘ರಾಜಕೀಯವಾಗಿ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಪರಸ್ಪರರ ವಿರುದ್ಧ ಕಹಿ ಭಾವನೆಗಳಿಲ್ಲ. ಮುಖ್ಯಮಂತ್ರಿಯವರ ಕಾಲಿಘಾಟ್‌ನಲ್ಲಿರುವ ಮನೆಯು ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಅವರನ್ನು ಭೇಟಿಮಾಡಿ ಮತ ಯಾಚಿಸುವುದು ನನ್ನ ಕರ್ತವ್ಯವಾಗಿದೆ’ ಎಂದು ಬೋಸ್‌ ಹೇಳಿದ್ದಾರೆ.

ಕೋಲ್ಕತ್ತ ದಕ್ಷಿಣ ಲೋಕಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಮಾಲಾ ರಾಯ್‌ ಅವರು ಬೋಸ್‌ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ ತಾವೂ ಬೋಸ್‌ ಮನೆಗೆ ಭೇಟಿಕೊಟ್ಟು ಮತ ಯಾಚಿಸಲು ತೀರ್ಮಾನಿಸಿದ್ದಾರೆ.

‘ಅವರು ನೇತಾಜಿಯ ಕುಟುಂಬದಿಂದ ಬಂದವರು. ನಾನು ಖಂಡಿತವಾಗಿಯೂ ಅವರ ಮನೆಗೆ ಭೇಟಿನೀಡಿ ಮತ ಯಾಚಿಸುತ್ತೇನೆ. ‘ಸೌಜನ್ಯ’ ಎಂಬುದು ಮಮತಾ ಬ್ಯಾನರ್ಜಿ ಅವರ ರಾಜಕೀಯದ ಅವಿಭಾಜ್ಯ ಅಂಗ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಮಾಲಾ ಹೇಳಿದ್ದಾರೆ. ಆದರೆ ಅವರು ಬೋಸ್‌ ಮನೆಗೆ ಭೇಟಿನೀಡುವ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ.

ಸಿಪಿಎಂ ಅಭ್ಯರ್ಥಿ ನಂದಿನಿ ಮುಖರ್ಜಿ ಅವರೂ ಮಮತಾ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ತನ್ನ ಪಕ್ಷದ ಬದ್ಧ ವಿರೋಧಿಯಾಗಿರುವ ಮಮತಾ ಅವರನ್ನು ಭೇಟಿಮಾಡಿ ‘ಎಡಪಂಥೀಯ ಪರ್ಯಾಯ ರಾಜಕೀಯಕ್ಕೆ ಯಾಕೆ ಬೆಂಬಲ ನೀಡಬೇಕು’ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂಬುದು ನಂದಿನಿ ಅವರ ಉದ್ದೇಶ. ಆದರೆ ಮುಖ್ಯಮಂತ್ರಿಯ ಭೇಟಿಗೆ ಅವಕಾಶ ಲಭಿಸುವುದೇ ಎಂಬುದು ಅವರಿಗಿನ್ನೂ ಖಚಿತವಾಗಿಲ್ಲ. ‘ಭೇಟಿಗೆ ಅವರು ಅವಕಾಶ ಕೊಟ್ಟರೆ ನನ್ನ ಉದ್ದೇಶಗಳನ್ನು ಖಂಡಿತವಾಗಿ ವಿವರಿಸುವೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !