ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇರಿಕೆ ಅಲ್ಲ, ಹಿಂದಿ ದ್ವಿತೀಯ ಭಾಷೆಯಾಗಲಿ ಎಂದಿದ್ದೆ: ಅಮಿತ್‌ ಶಾ ಸ್ಪಷ್ಟನೆ

Last Updated 18 ಸೆಪ್ಟೆಂಬರ್ 2019, 18:33 IST
ಅಕ್ಷರ ಗಾತ್ರ

ರಾಂಚಿ: ‘ದೇಶದಲ್ಲಿ ಹಿಂದಿ ಭಾಷೆಯನ್ನು ಹೇರಬೇಕು ಎಂದು ನಾನು ಹೇಳಿಲ್ಲ. ಬದಲಿಗೆ, ದ್ವಿತೀಯ ಭಾಷೆ
ಯಾಗಿ ಬಳಸಬೇಕು ಎಂದು ಪ್ರತಿಪಾದಿಸಿದ್ದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದಿ ದಿನ ಕಾರ್ಯಕ್ರಮದ ಸಂದರ್ಭದಲ್ಲಿ ಟ್ವೀಟ್‌ ಮಾಡಿದ್ದ ಅವರು ‘ಒಂದು ದೇಶ–ಒಂದು ಭಾಷೆ’ ಪ್ರಸ್ತಾವವನ್ನು ಮುಂದಿಟ್ಟಿದ್ದರು.ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

‘ಪ್ರಾದೇಶಿಕ ಭಾಷೆಗಳನ್ನು ಬಲಪಡಿಸ ಬೇಕು ಎಂದು ನಾನು ಹಿಂದಿನಿಂದಲೂ ವಾದಿಸುತ್ತಾ ಬಂದಿದ್ದೇನೆ. ನಾನೂ ಹಿಂದಿಯೇತರ ಭಾಷೆ ಬಳಸುವ ರಾಜ್ಯದವನು. ಮಾತೃಭಾಷೆಯಿಂದ ಮಾತ್ರ ಮಕ್ಕಳ ಮನೋ ವಿಕಾಸ ಸಾಧ್ಯ. ಮಾತೃಭಾಷೆ ಎಂದರೆ ಹಿಂದಿ ಅಲ್ಲ. ಅವರವರ ರಾಜ್ಯದ ಭಾಷೆ. ಆದರೆ ಇಡೀ ರಾಷ್ಟ್ರಕ್ಕೆ ಒಂದು ಭಾಷೆ ಇರುವುದು ಅಗತ್ಯ. ಯಾರಾದರೂ ಇನ್ನೊಂದು
ಭಾಷೆ ಕಲಿಯಲು ಇಚ್ಛಿಸುವುದಾದರೆ ಅದು ಹಿಂದಿ ಆಗಿರಬೇಕು ಎಂದು ನಾನು ಹೇಳಿದ್ದೆ. ಈ ಮಾತಿನಲ್ಲಿ ತಪ್ಪೇನಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದು ಶಾ ಹೇಳಿದ್ದಾರೆ.

‘ಯಾರೂ ತಮ್ಮ ಮಾತೃಭಾಷೆಯನ್ನು ಕಳೆದುಕೊಳ್ಳಬಾರದು. ಅವುಗಳನ್ನು ಗಟ್ಟಿಗೊಳಿಸಲು ಚಳವಳಿಗಳು ನಡೆಯ ಬೇಕು. ಪ್ರಾದೇಶಿಕ ಭಾಷೆಗಳನ್ನು ಕಳೆದು ಕೊಂಡರೆ ಭಾರತವೂ ನ್ಯೂಜಿಲೆಂಡ್‌ ಅಥವಾ ಆಸ್ಟ್ರೇಲಿಯಾದಂತಾಗಬಹುದು’ ಎಂದು ಶಾ ಹೇಳಿದರು.

ಹಿಂದಿ ಹೇರಿಕೆಯ ವಿಚಾರವಾಗಿ ಬುಧವಾರವೂ ಹಲವು ನಾಯಕರು ವಿರೋಧದ ಧ್ವನಿ ಎತ್ತಿದ್ದಾರೆ.

ಅಪಾಯಕಾರಿ ಚಿಂತನೆ: ತಮ್ಮ ಕುಟುಂಬ ದವರ ಮೂಲಕ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ,
‘ಎಲ್ಲಾ ಭಾಷೆಗಳನ್ನು ಅಭಿವೃದ್ಧಿಪಡಿಸ ಬೇಕು ಎಂಬ ಚಿಂತನೆಗೆ ನನ್ನ ಬೆಂಬಲ. ಹಿಂದಿ ಭಾಷೆಯೊಂದೇ ದೇಶವನ್ನು ಒಗ್ಗೂಡಿಸುತ್ತದೆ ಎಂಬುದನ್ನು ನಾನು ಒಪ್ಪಲಾರೆ. ಅದು ಅಪಾಯಕಾರಿ ಚಿಂತನೆ’ ಎಂದಿದ್ದಾರೆ.

ಐಎನ್‌ಎಕ್ಸ್‌ ಮೀಡಿಯಾ ಹಗರಣದ ಆರೋಪ ಎದುರಿಸುತ್ತಿರುವ ಚಿದಂಬರಂ ಪ್ರಸಕ್ತ ತಿಹಾರ್‌ ಜೈಲಿನಲ್ಲಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಮಾರಕ: ಹಿಂದಿಯು ದೇಶದ ಜನರನ್ನು ಒಗ್ಗೂಡಿಸುವ ಭಾಷೆ’ ಎಂದು ಅಮಿತ್‌ ಶಾ ನೀಡಿರುವ ಹೇಳಿಕೆ
ಯನ್ನು ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಅವರೂ ವಿರೋಧಿಸಿದ್ದಾರೆ.

‘ಒಂದು ರಾಷ್ಟ್ರ, ಒಂದು ಚುನಾವಣೆ’, ‘ಒಂದು ರಾಷ್ಟ್ರ, ಒಂದು ಭಾಷೆ’ ಮುಂತಾದ ಚಿಂತನೆಗಳು ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ ಹಾಗೂ ಸಂವಿ ಧಾನದಲ್ಲಿ ವಿವರಿಸಲಾದ ತತ್ವಗಳಿಗೆ ವಿರುದ್ಧವಾದವುಗಳು. ಭಾರತದಂಥ ರಾಷ್ಟ್ರದ ಗೃಹಸಚಿವರೊಬ್ಬರು ದೇಶದ ಜನರಲ್ಲಿ ಇಂಥ ವಿಚಾರಗಳನ್ನು ಬಿತ್ತಲು ಸಾಧ್ಯವೇ? ಶಾ ತಮ್ಮ ಹೇಳಿಕೆಯನ್ನು ಹಿಂಪಡೆದರೆ, ಅದು ದೇಶದ ಏಕತೆಗೆ ಪೂರಕವಾಗಬಹುದು’ ಎಂದು ಮೊಯಿಲಿ ಹೇಳಿದ್ದಾರೆ.

‘ಬಹುಪಕ್ಷ ವ್ಯವಸ್ಥೆಯೇ ಭಾರತದ ಏಕತೆ ಹಾಗೂ ಸಮಗ್ರತೆಯನ್ನು ಭದ್ರವಾಗಿಟ್ಟಿದೆ. ಜಾತ್ಯತೀತ ಸಿದ್ಧಾಂತ ಈ ರಾಷ್ಟ್ರದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆ’ ಎಂದು ಅವರು ಹೇಳಿದ್ದಾರೆ.

***

ಗೃಹಸಚಿವರ ಹೇಳಿಕೆಯು ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ದೇಶದ ಒಗ್ಗಟ್ಟಿನ ವಿಚಾರವಾಗಿ ಅವರು ನೀಡಿರುವ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು

-ವೀರಪ್ಪ ಮೊಯಿಲಿ, ಕಾಂಗ್ರೆಸ್‌ ಮುಖಂಡ

***

ವಿವಾದ ಸೃಷ್ಟಿಸುತ್ತಿರುವವರು ನನ್ನ ಅಂದಿನ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಅವರಿಗೆ ಬಿಟ್ಟದ್ದು.

- ಅಮಿತ್‌ ಶಾ, ಕೇಂದ್ರದ ಗೃಹಸಚಿವ

***

‘ಹೇರಿಕೆ ಸಾಧ್ಯವಿಲ್ಲ’

ಚೆನ್ನೈ (ರಾಯಿಟರ್ಸ್‌) : ‘ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿಸಲು ಸಾಧ್ಯವಿಲ್ಲ. ಒಂದುವೇಳೆ ಜನರ ಮೇಲೆ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನ ಮಾಡಿದರೆ ದಕ್ಷಿಣದ ರಾಜ್ಯಗಳಷ್ಟೇ ಅಲ್ಲ ಉತ್ತರ ಭಾರತದ ಹಲವು ರಾಜ್ಯಗಳಿಂದಲೂ ಅದಕ್ಕೆ ವಿರೋಧ ಬರಲಿದೆ’ ಎಂದು ನಟ ರಜನಿಕಾಂತ್‌ ಹೇಳಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ‘ಏಕತೆ ಮತ್ತು ಅಭಿವೃದ್ಧಿಗಾಗಿ ‘ಏಕಭಾಷೆ’ ಎಂಬುದು ಒಳ್ಳೆಯ ಚಿಂತನೆ, ಆದರೆ ಭಾರತದಲ್ಲಿ ಅದನ್ನು ಜಾರಿಮಾಡಲಾಗದು. ನೀವು ಯಾವುದೇ ಒಂದು ಭಾಷೆಯನ್ನು ಜನರ ಮೇಲೆ ಹೇರಲಾಗದು’ ಎಂದರು.

‘ಒಂದು ಭಾಷೆ, ಪಕ್ಷ: ದೇಶದ್ರೋಹ’

ಮೈಸೂರು: ‘ಒಂದು ಭಾಷೆ, ಒಂದು ಪಕ್ಷ ಸಾಕು’ ಎನ್ನುವುದು ಈ ದೇಶಕ್ಕೆ ಬಗೆಯುವ ದ್ರೋಹ ಎಂದು ವಿದ್ವಾಂಸ ಓ.ಎಲ್.ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.

ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ಬಸವರಾಜ ಕಟ್ಟೀಮನಿ ಸಾಹಿತ್ಯ– ಸಮಕಾಲೀನ ಸಂದರ್ಭ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪ್ರಾಣಿ, ಪಕ್ಷಿ, ಪರಿಸರ, ಭಾಷೆ, ರಾಜಕೀಯ ಪಕ್ಷಗಳಲ್ಲಿ ವೈವಿಧ್ಯ ಇರಬೇಕು. ಇಲ್ಲವಾದರೆ ಈ ಜಗತ್ತು ನಾಶವಾಗುತ್ತದೆ ಎಂದು ಎಚ್ಚರಿಸಿದ ಅವರು, ಇಂತಹ ಸಮಕಾಲೀನ ಬೆಳವಣಿಗೆಗಳನ್ನು ಸಾಹಿತ್ಯ ಮತ್ತು ಕಲೆಯ ಮೂಲಕ ವಿರೋಧಿಸಬೇಕು ಎಂದು ಕರೆ ನೀಡಿದರು.

ಬಂಗಾಳಿ ಪರ ಪಶ್ಚಿಮ ಬಂಗಾಳ ಬಿಜೆಪಿ

ಕೋಲ್ಕತ್ತ: ಬಂಗಾಳಿ ಭಾಷೆಯನ್ನು ಸಂಭ್ರಮಿಸುವ ಕಾರ್ಯಕ್ರಮವನ್ನು
ಪಶ್ಚಿಮ ಬಂಗಾಳದಾದ್ಯಂತ ಹಮ್ಮಿಕೊಳ್ಳಲು ಅಲ್ಲಿನ ಬಿಜೆಪಿ ಘಟಕ ನಿರ್ಧರಿಸಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹಿಂದಿಗೆ ಸಂಬಂಧಿಸಿ ನೀಡಿದ ಹೇಳಿಕೆಯಿಂದಾಗಿ ಈ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.

ಶಾ ಅವರ ಹೇಳಿಕೆಯನ್ನು ಬಳಸಿಕೊಂಡು ಬಿಜೆಪಿ ‘ಬಂಗಾಳಿ ವಿರೋಧಿ’ ಪಕ್ಷ ಎಂದು ಬಿಂಬಿಸಲು ಟಿಎಂಸಿ ಪ್ರಯತ್ನಿಸಬಹುದು. ಅದಕ್ಕಾಗಿ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

‘ಪಶ್ಚಿಮ ಬಂಗಾಳ ಮಾತೃಭಾಷೆ ದಿನ’ ಎಂಬ ಕಾರ್ಯಕ್ರಮವನ್ನುಬಿಜೆಪಿಯ ವಿದ್ಯಾರ್ಥಿ ವಿಭಾಗ ಎಬಿವಿಪಿ ರಾಜ್ಯದಾದ್ಯಂತ ಶುಕ್ರವಾರ ನಡೆಸಲಿದೆ.

ಪ್ರತಿಭಟನೆ ರದ್ದು

ಚೆನ್ನೈ: ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ಶುಕ್ರವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಡಿಎಂಕೆ ‘ತಾತ್ಕಾಲಿಕವಾಗಿ’ ಕೈಬಿಟ್ಟಿದೆ. ರಾಜ್ಯದ ಜನರ ಮೇಲೆ ಯಾವುದೇ ಭಾಷೆಯನ್ನು ಹೇರಲು ಅವಕಾಶ ಕೊಡುವುದಿಲ್ಲ ಎಂದು ರಾಜ್ಯಪಾಲ ಭನ್ವಾರಿಲಾಲ್‌ ಪುರೋಹಿತ್‌ ಅವರು ಭರವಸೆ ಕೊಟ್ಟ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಎಂಕೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT