ಮಂಗಳವಾರ, ನವೆಂಬರ್ 19, 2019
22 °C
ಲಂಡನ್‌ನ ಹೈಕಮಿಷನ್ ಕಚೇರಿ ಎದುರು ಹಿಂಸಾತ್ಮಕ ಪ್ರತಿಭಟನೆ

ಬ್ರಿಟನ್‌ ವಿರುದ್ಧ ಭಾರತ ಅಸಮಾಧಾನ

Published:
Updated:

ನವದೆಹಲಿ: ಲಂಡನ್‌ನ ಭಾರತೀಯ ಹೈಕಮಿಷನ್ ಕಚೇರಿ ಎದುರು ಪಾಕಿಸ್ತಾನಿಯರು ಮಂಗಳವಾರ ನಡೆಸಿದ ಹಿಂಸಾತ್ಮಕ ಪ್ರತಿಭಟನೆಯನ್ನು ಭಾರತ ಖಂಡಿಸಿದ್ದು, ಬ್ರಿಟನ್ ವಿರುದ್ಧ ಪ್ರತಿಭಟನೆ ದಾಖಲಿಸಿದೆ. 

ಹಿಂಸಾತ್ಮಕ ಪ್ರತಿಭಟನೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು, ಭಾರತೀಯ ಹೈಕಮಿಷನ್ ಕಚೇರಿಯ ರಾಜತಾಂತ್ರಿಕ ಸಿಬ್ಬಂದಿಗೆ ರಕ್ಷಣೆ ನೀಡಬೇಕು ಎಂದು ಭಾರತ ಆಗ್ರಹಿಸಿದೆ. 

ಬ್ರಿಟನ್‌ನಲ್ಲಿ ವಾಸವಿರುವ ಪಾಕಿಸ್ತಾನದ ನಾಗರಿಕರು ಹೈಕಮಿಷನ್ ಕಚೇರಿ ಎದುರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಡೆದ ಪ್ರತಿಭಟನೆಗೆ ಹಿಂಸೆಗೆ ತಿರುಗಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿಖ್ ಸಮುದಾಯದ ಕೆಲವರು, ಪಂಜಾಬ್‌ನಿಂದ ಖಲಿಸ್ತಾನವನ್ನು ಪ್ರತ್ಯೇಕಗೊಳಿಸುವಂತೆ ಆಗ್ರಹಿಸಿದ್ದರು. 

‘ಅಶಿಸ್ತಿನ ಪ್ರತಿಭಟನೆ ನಡೆಸಿದ ಪಾಕಿಸ್ತಾನ ಪ್ರಚೋದಿತ ಗುಂಪುಗಳು ಭಾರತೀಯ ರಾಜತಾಂತ್ರಿಕ ಕಚೇರಿಗೆ ಹಾನಿ ಮಾಡಿದ್ದು ಕಳವಳಕಾರಿ ವಿದ್ಯಮಾನ’ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಲಂಡನ್‌ನಲ್ಲಿ ಆಗಸ್ಟ್ 15ರಂದು ಇದೇ ರೀತಿಯ ಪ್ರತಿಭಟನೆ ನಡೆದಿತ್ತು. ಹಿಂಸಾತ್ಮಕ ಪ್ರತಿಭಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದನ್ನು ಬ್ರಿಟನ್ ಪ್ರಧಾನಿ ಬೋರಿಸ್ ಬಾನ್ಸನ್ ಅವರ ಗಮನಕ್ಕೆ ತಂದಿದ್ದರು. ಘಟನೆಗೆ ವಿಷಾದ ವ್ಯಕ್ತಪಡಿಸಿದ್ದ ಜಾನ್ಸನ್, ಭಾರತೀಯ ದೂತವಾಸ ಕಚೇರಿಯ ಸಿಬ್ಬಂದಿ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಆದರೆ ಮಂಗಳವಾರ ನಡೆದ ಪ್ರತಿಭಟನೆ ಮತ್ತೆ ಹಿಂಸೆಗೆ ತಿರುಗಿತ್ತು. 

ಘಟನೆ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ. 

ಪ್ರತಿಕ್ರಿಯಿಸಿ (+)