ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಹಿಂಸಾಚಾರ: ವಿದ್ಯಾರ್ಥಿ, ನಾಗರಿಕರಲ್ಲಿ ಆತಂಕ

ದೆಹಲಿ ಹಿಂಸಾಚಾರ: ನಿಯಂತ್ರಿಸಲು ವಿಫಲವಾದ ಸರ್ಕಾರದ ಮೇಲೆ ಜನರಿಗೆ ಆಕ್ರೋಶ
Last Updated 26 ಫೆಬ್ರುವರಿ 2020, 19:57 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹಿಂಸಾಚಾರದ ಕಾರಣಕ್ಕೆ ಪರೀಕ್ಷೆಗಳನ್ನು ಮುಂದೂಡಲಾಗಿದೆ.

‘ವಿದ್ಯಾರ್ಥಿಗಳಿಗೆ ಇವು ಅತ್ಯಂತ ಮಹತ್ವದ ಪರೀಕ್ಷೆಗಳು. ಓದಿನ ಕಡೆಗೆ ಗಮನ ಕೇಂದ್ರೀಕರಿಸುವಂತೆ ಪಾಲಕರು ನಮಗೆ ಎರಡು ವರ್ಷಗಳಿಂದ ಹೇಳುತ್ತಲೇ ಇದ್ದರು. ಈಗ ನಮ್ಮ ಸುತ್ತಮುತ್ತ ಬೆಂಕಿಯ ಜ್ವಾಲೆಗಳಿವೆ. ಇಂಥ ಭಯಾನಕ ಸ್ಥಿತಿಯಲ್ಲಿ ಓದುವುದಾದರೂ ಹೇಗೆ’ ಎಂದು ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ್ದ ವಿದ್ಯಾರ್ಥಿ ಮುಸ್ಕಾನ್‌ ಶರ್ಮಾ ಪ್ರಶ್ನಿಸಿದ್ದಾರೆ. ಅವರು ಹಿಂಸಾಚಾರದ ಕೇಂದ್ರವಾಗಿರುವ ಮೌಜ್‌ಪುರದ ನಿವಾಸಿ.

‘ನಾಳೆ ನಾನು ಇಂಗ್ಲಿಷ್‌ ಪರೀಕ್ಷೆ ಬರೆಯಬೇಕಿದೆ. ನನ್ನ ಮನೆಯ ಸುತ್ತ ಗಲಭೆಗಳು ನಡೆಯುತ್ತಿವೆ. ಬಾಗಿಲು ಬಡಿದ ಶಬ್ದ ಕೇಳಿದರೇ ಭಯಪಡುವಂಥ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಚಾಂದ್‌ ಬಾಗ್‌ ಪ್ರದೇಶದ ನಿವಾಸಿ ಗಗನ್‌ದೀಪ್‌ ಸಿಂಗ್‌ ಹೇಳಿದರು.

‘ಜೀವಕ್ಕೇ ಅಪಾಯವಿರುವಾಗ ಪರೀಕ್ಷೆಗಳಿಂದ ಆಗುವ ಒಳಿತಾದರೂ ಏನು? ಅಪಾಯ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಪರೀಕ್ಷೆ ನಡೆಸಲು ಬರುವ ಶಿಕ್ಷಕರು, ಮೇಲ್ವಿಚಾರಕರು ಹಾಗೂ ಇತರರಿಗೂ ಇದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎಂದು ಚಾಂದ್‌ಬಾಗ್‌ನ ಇನ್ನೊಬ್ಬ ವಿದ್ಯಾರ್ಥಿ ಒತ್ತಾಯಿಸಿದ್ದಾರೆ.

ಭಯದ ವಾತಾವರಣ: ನಾಲ್ಕು ದಿನಗಳಿಂದ ನಡೆಯುತ್ತಿರುವ ಗಲಭೆಯಿಂದ ದೆಹಲಿಯ ನಾಗರಿಕರೂ ಭಯ, ಆತಂಕಕ್ಕೆ ಒಳಗಾಗಿದ್ದಾರೆ. ಗಲಭೆಯಿಂದಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವರನ್ನು ಮಾಧ್ಯಮ ಪ್ರತಿನಿಧಿಗಳು ಭೇಟಿಮಾಡಿ ಮಾತುಕತೆ ನಡೆಸಿದರು.

ಎರಡು ಸಮುದಾಯದವರಲ್ಲಿ ಭಯ ಮತ್ತು ಆತಂಕ ಮನೆಮಾಡಿದೆ. ಇಂಥ ಘಟನೆ ನಡೆಯಲು ಅವಕಾಶ ಮಾಡಿ
ಕೊಟ್ಟ ಆಡಳಿತದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂಸಾಚಾರ ನಿಲ್ಲಬೇಕು, ಶಾಂತಿ ನೆಲೆಸಬೇಕು ಎಂದು ಜನರು ಬಯಸುತ್ತಾರೆ. ಆದರೆ, ಉದ್ವಿಗ್ನತೆ ಹೆಚ್ಚುತ್ತಿದೆ. ಹಿಂಸಾಚಾರದ ಕ್ಷಣಕ್ಷಣದ ಮಾಹಿತಿ ಜನರಿಗೆ ಲಭ್ಯವಾಗುತ್ತಿದೆ. ಇದರಿಂದ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗುತ್ತಿದೆ.

‘ನಾನು ಯಾವುದೇ ಪ್ರತಿಭಟನೆಯ ಭಾಗವಾಗಿರಲಿಲ್ಲ, ಕೆಲಸದ ನಿಮಿತ್ತ ಮನೆಯಿಂದ ಹೊರಹೋದಾಗ ಗಲಭೆಯಲ್ಲಿ ಸಿಲುಕಿಕೊಂಡೆ. ಕೈಯಲ್ಲಿ ಕಲ್ಲು, ರಾಡ್‌ಗಳನ್ನು ಹಿಡಿದುಕೊಂಡು ಜನರು ಗುಂಪಾಗಿ ಬರುತ್ತಿದ್ದರು. ಕೆಲವರ ಕೈಯಲ್ಲಿ ಬಾಟಲ್‌ಗಳಿದ್ದವು. ಅವುಗಳು ಪೆಟ್ರೋಲ್‌ ಬಾಂಬ್‌ಗಳಾಗಿದ್ದವು ಎಂದು ಕೇಳಿದ್ದೇನೆ. ಪ್ರಾಣ ಉಳಿಸಿಕೊಳ್ಳಲು ನಾನು ಅಲ್ಲಿಂದ ಓಡಿದೆ. ಆ ಸಂದರ್ಭದಲ್ಲಿ ನನ್ನ ಕೈಗೆ ಗುಂಡೇಟು ತಗಲಿದ್ದೂ ತಿಳಿಯಲಿಲ್ಲ’ ಎಂದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವಆಸಿಫ್‌ ಎಂಬುವರು ಹೇಳಿದ್ದಾರೆ.

‘ಬಿಜೆಪಿ ಮುಖಂಡ ಕಪಿಲ್‌ ಮಿಶ್ರಾ ಅವರ ಪ್ರಚೋದನೆಯ ನಂತರ ಗಲಭೆಗಳು ಆರಂಭವಾಗಿದ್ದವು. ಮಂಗಳವಾರ ಸಂಜೆಯವರೆಗೂ ಚಾಂದ್‌ಬಾಗ್‌ನಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಕರ್ಫ್ಯೂ ವಿಧಿಸಿದ ನಂತರ ಸ್ವಲ್ಪ ಶಾಂತಿ ನೆಲೆಸಿದೆ. ಮೊದಲ ದಿನವೇ ಈ ತೀರ್ಮಾನ ಕೈಗೊಂಡಿದ್ದರೆ ಇಷ್ಟೆಲ್ಲ ಅನಾಹುತ ಆಗುತ್ತಿರಲಿಲ್ಲ. ಈಗ ನಾವು ಭಯದ ವಾತಾವರಣದಲ್ಲೇ ಬದುಕುತ್ತಿದ್ದೇವೆ’ ಎಂದು ಚಾಂದ್‌ಬಾಗ್‌ ನಿವಾಸಿ ವಕೀಲ ಅಹ್ಮದ್‌ ಭೀತಿ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ: ಶೀಘ್ರ ನಿರ್ಧಾರಕ್ಕೆ ಸೂಚನೆ

ಪರೀಕ್ಷೆಗಳನ್ನು ಮುಂದೂಡುವ ವಿಚಾರವಾಗಿ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಪರೀಕ್ಷಾ ಮಂಡಳಿಗೆ ದೆಹಲಿ ಹೈಕೋರ್ಟ್‌ ಸೂಚನೆ ನೀಡಿದೆ.

‘ಇಂಥ ಸ್ಥಿತಿಯಲ್ಲಿ ಪೋಷಕರು ಮಕ್ಕಳನ್ನು ಕಳುಹಿಸಲಾರರು. ಆದ್ದರಿಂದ ಒಂದು ದಿನದ ಪರೀಕ್ಷೆಯನ್ನು ಮುಂದೂಡಿದರೆ ಸಾಲದು. ಎಲ್ಲಾ ಪರೀಕ್ಷೆಗಳನ್ನು ಕನಿಷ್ಠ 10 ರಿಂದ 15 ದಿನಗಳ ಕಾಲ ಮುಂದೂಡುವ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಬೇಕು’ ಎಂದು ನ್ಯಾಯಮೂರ್ತಿ ರಾಜೀವ್‌ ಶಕ್‌ಧರ್‌ ಅವರು ಪರೀಕ್ಷಾ ಮಂಡಳಿಗೆ ಸೂಚಿಸಿದ್ದಾರೆ.

ಆದರೆ, ಗಲಭೆಪೀಡಿತ ಪ್ರದೇಶದಲ್ಲಿರುವ 73 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ನಡೆಯಲಿರುವ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಉಳಿದ ಪ್ರದೇಶಗಳಲ್ಲಿ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿಯ ಕಾರ್ಯದರ್ಶಿ ಅನುರಾಗ್‌ ತ್ರಿಪಾಠಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT