ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಚುನಾವಣೆಗೆ ರಾಹುಲ್ ಪಕ್ಕದ ರಾಷ್ಟ್ರಗಳಿಂದ ಸ್ಪರ್ಧಿಸಬೇಕು-ಬಿಜೆಪಿ

Last Updated 21 ಏಪ್ರಿಲ್ 2019, 2:07 IST
ಅಕ್ಷರ ಗಾತ್ರ

ಅಹಮದಾಬಾದ್: ಮುಂದಿನ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಕದ ರಾಷ್ಟ್ರಗಳಲ್ಲಿ ಯಾವುದಾದರೂ ಕ್ಷೇತ್ರವನ್ನು ಹುಡುಕಿಕೊಳ್ಳಬೇಕಾಗುತ್ತದೆ. ಏಕೆಂದರೆ, ಅಮೇಥಿ ಹಾಗೂ ವಯನಾಡ್ ಎರಡೂ ಕ್ಷೇತ್ರಗಳಲ್ಲಿ ಸೂಲುವುದು ಖಚಿತ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಪಿಯುಷ್ ಗೋಯಲ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಹುಲ್ ಗಾಂಧಿಗೆ ಎಡಪಕ್ಷಗಳ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಕೇರಳದ ವಯನಾಡ್ ನಲ್ಲಿ ಸಿಪಿಐ ಅಭ್ಯರ್ಥಿ ವಿರುದ್ಧ ಸೋಲುವುದು ಖಚಿತ. ಹೀಗಾಗಿ ಅವರು ಪಕ್ಕದ ರಾಷ್ಟ್ರಗಳಲ್ಲಿ ಯಾವುದಾದರೂ ಕ್ಷೇತ್ರವನ್ನು ಹುಡುಕಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ವಿರೋಧಿಗಳ ವಿರುದ್ಧ ಮಾತನಾಡುವ ಧೈರ್ಯ ಇಲ್ಲದಿದ್ದರೆ ದೇಶ ಸೇವೆ ಮಾಡುವುದು ಸಾಧ್ಯವಿಲ್ಲ. ರಾಹುಲ್ ಗಾಂಧಿ ಹಾಗೂ ಸೀತಾರಾಂ ಯಚೂರಿ ಜೊತೆ ಜೊತೆಯಲ್ಲಿಯೇ ಇರುವ ಹಲವು ಫೋಟೋಗಳನ್ನು ನಾನು ನೋಡಿದ್ದೇನೆ. ರಾಹುಲ್ ಗಾಂಧಿ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲುವುದು ಖಚಿತ ಎಂದು ತಿಳಿದ ಮೇಲೆ ವಯನಾಡ್ ಕ್ಷೇತ್ರಕ್ಕೆ ಹೋದರು. ಆದರೆ, ಅಲ್ಲಿ ಸಿಪಿಐ ಅಭ್ಯರ್ಥಿ ವಿರುದ್ಧ ಟೀಕೆ ಮಾಡದೆ, ಹೆದರಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ವಯನಾಡ್ ನಲ್ಲಿ ಸ್ಪರ್ಧಿಸಿದ ನಂತರ ರಾಹುಲ್ ಗಾಂಧಿ ಸಿಪಿಐ ವಿರುದ್ಧ ಯಾವುದೇ ಟೀಕೆ ಮಾಡುವುದಿಲ್ಲ. ಯಾಕೆಂದರೆ, ಆ ಮೂಲಕ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಕಳುಹಿಸುತ್ತಿದ್ದೇನೆ ಎಂದಿದ್ದಾರೆ. ವಯನಾಡ್ ಕ್ಷೇತ್ರದಲ್ಲಿ ಸಿಪಿಐ ಮುಖಂಡ ಪಿ.ಪಿ.ಸುನೀರ್ ರಾಹುಲ್ ವಿರುದ್ಧ ಸ್ಪರ್ಧಿಸಿದ್ದಾರೆ.

ಕಾಂಗ್ರೆಸ್ ಕ್ಷಮೆ ಕೇಳಬೇಕು: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಈ ಚುನಾವಣೆಗೆ ಸ್ಪರ್ಧಿಸಲು ಸೂಚಿಸಿದ್ದಕ್ಕೆ ದೇಶದ ಜನರಲ್ಲಿ ಕ್ಷಮೆ ಕೇಳಬೇಕು ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಗೋಯಲ್, ಮಹಾರಾಷ್ಟ್ರದ ಪೃಥ್ವಿರಾಜ್ ಚೌಹಾಣ್ ಅವರು ಮೊದಲು ಕ್ಷಮೆ ಕೇಳಬೇಕು. ಯಾಕೆಂದರೆ, ಇಡೀ ಹಿಂದೂಗಳನ್ನು ಉಗ್ರರು ಎಂದು ಕರೆದು ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದರು.

ವೇದಿಕೆ ಇಳಿದ ನಂತರ ಇಬ್ಬರೂ ಬೇರೆ ಬೇರೆ :ಎಸ್ಪಿ ಹಾಗೂ ಬಿಎಸ್ಪಿ ಸ್ನೇಹ ಏನಿದ್ದರೂ ವೇದಿಕೆ ಮೇಲೆ ಹೊರತು, ವೇದಿಕೆಯಿಂದ ಇಳಿದ ಮೇಲೆ ಇಬ್ಬರೂ ಬೇರೆ ಬೇರೆ ಎಂದು ಹೇಳಿದ್ದಾರೆ. ಈ ಎರಡೂ ಪಕ್ಷದವರನ್ನು ಹಲವಾರು ಬಾರಿ ಗಮನಿಸಿದ್ದೇನೆ. ಒಂದೇ ವೇದಿಕೆಯಲ್ಲಿರುತ್ತಾರೆ. ಒಬ್ಬರಿಗೊಬ್ಬರು ಕೈಕುಲುಕುತ್ತಾರೆ. ಕೆಲವು ಸಮಯ ಹೊರಗೆ ಬರುತ್ತಾರೆ. ಹೊರಬಂದ ಮೇಲೆ ತದ್ವಿರುದ್ದ ಹೇಳಿಕೆಗಳನ್ನು ನೀಡುತ್ತಾರೆ ಎಂದು ಹೇಳಿದರು.

ಜಿಎಸ್ ಟಿ ಇಲ್ಲ:ಲಾಲು ಪ್ರಸಾದ್ ಅವರ ಬಗ್ಗೆ ಅವರ ಪತ್ನಿ ರಾಬ್ರಿದೇವಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಗೋಯಲ್ ಅವರ ಆರೋಪಗಳಿಗೆ ಜಿಎಸ್ ಟಿ ಇಲ್ಲ ಎಂದಿದ್ದು, ಲಾಲು ಪ್ರಸಾದ್ ಯಾದವ್ ಅವರು ಇಡೀ ದೇಶದ ಜನತೆಗೆ ಉತ್ತರಿಸಬೇಕು. ಅವರು ಮೇವು ಹಗರಣದಲ್ಲಿ ಕಾನೂನು ಹೋರಾಟದಲ್ಲಿ ಸೋತು ಜೈಲು ಸೇರಿದ್ದಾರೆ. ನಾವೇನು ಅವರನ್ನು ಜೈಲಿಗೆ ಹಾಕಿಲ್ಲ ಎಂದರು.

ಬಿಜೆಪಿಗೆ ಅಧಿಕ ಸ್ಥಾನ:ನಮ್ಮ ಪಕ್ಷ ಅತ್ಯಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 2014ರಲ್ಲಿ ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದವರನ್ನು ನಾವು ಕರೆತಂದು ಪ್ರಧಾನ ಮಂತ್ರಿ ಮಾಡಿದೆವು. ಈಗ ದೇಶದ ಜನತೆಯೇ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಬಯಸುತ್ತಿದ್ದಾರೆ. ಜನರ ಭಾವನೆಗಳನ್ನು ಗಮನಸಿದರೆ, ನಾವು ಅತ್ಯಧಿಕ ಸ್ಥಾನಗಳನ್ನು ಪಡೆದು ಸರ್ಕಾರ ರಚಿಸುವುದು ಖಚಿತ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT