ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರಕ್ಕೆ ₹10 ಲಕ್ಷ ದಂಡ: ಎನ್‌ಜಿಟಿ

ಕಿತ್ತಗಾನಹಳ್ಳಿ ಕೆರೆಯಲ್ಲಿ ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲ
Last Updated 21 ಜೂನ್ 2020, 12:37 IST
ಅಕ್ಷರ ಗಾತ್ರ

ನವದೆಹಲಿ : ಬೆಂಗಳೂರಿನ ಬೊಮ್ಮಸಂದ್ರ ವ್ಯಾಪ್ತಿಯ ಕಿತ್ತಗಾನಹಳ್ಳಿ ಕೆರೆಯಲ್ಲಿ ಮಾಲಿನ್ಯ ನಿಯಂತ್ರಣವನ್ನು ಸಮರ್ಪಕವಾಗಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕರ್ನಾಟಕ ರಾಜ್ಯ ಸರ್ಕಾರಕ್ಕೆ ₹10 ಲಕ್ಷ, ಮತ್ತು ಬೊಮ್ಮಸಂದ್ರ ಪುರಸಭೆಗೆ ₹ 5 ಲಕ್ಷ ಮಧ್ಯಂತರ ದಂಡ ವಿಧಿಸಿದೆ.

ಮಾಲಿನ್ಯಕಾರಕ ವಸ್ತುಗಳು ಕೆರೆ ಸೇರುವುದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದು ಕ್ರಿಮಿನಲ್‌ ಅಪರಾಧವಾಗುತ್ತದೆ ಎಂದು ಎನ್‌ಜಿಟಿ ಆಕ್ರೋಶ ವ್ಯಕ್ತಪಡಿಸಿದೆ.

ಕೆರೆಯಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಮಲಿನಗೊಂಡಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಸಂಜಯ್‌ ರಾವ್‌ ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು.

ಎನ್‌ಜಿಟಿ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶ್‌ ಕುಮಾರ್‌ ಗೋಯೆಲ್‌ ನೇತೃತ್ವದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿ, ಬೊಮ್ಮಸಂದ್ರ ಪುರಸಭೆಯು ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಹೇಳಿ, ಪುರಸಭೆಗೂ ₹5 ಲಕ್ಷ ದಂಡ ವಿಧಿಸಿದೆ.

‘ಪುರಸಭೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಮಾಲಿನ್ಯ ತಡಗಟ್ಟುವಲ್ಲಿ ವಿಫಲರಾಗಿದ್ದಾರೆ. ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ ಆದೇಶಗಳನ್ನು ಪಾಲಿಸಿಲ್ಲ. ಇದು ದುರದೃಷ್ಟಕರವಾಗಿದ್ದು, ಇದಕ್ಕೆ ತ್ವರಿತ ಪರಿಹಾರ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಕೇವಲ ಪತ್ರ ಬರೆದರೆ ಕಾನೂನು ಅನುಸರಣೆ ಮಾಡಿದಂತಾಗುವುದಿಲ್ಲ’ ಎಂದು ಎನ್‌ಜಿಟಿ ಹೇಳಿದೆ.

ಸಂಸ್ಕರಿಸದ ಒಳಚರಂಡಿ ನೀರು ಕೆರೆಗೆ ಸೇರುವ ಮೂಲಕ ಭಾರಿ ಹಾನಿಯಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಒಳಚರಂಡಿ ನೀರು ಸೇರುವುದನ್ನು ತಡೆಯುವುದು ಅಧಿಕಾರಿಗಳ ಕರ್ತವ್ಯ ಎಂದು ಎನ್‌ಜಿಟಿ ಹೇಳಿದೆ.

ಪರಿಸರಕ್ಕೆ ಹಾನಿಯುಂಟಾಗಿದ್ದರಿಂದ ರಾಜ್ಯ ಸರ್ಕಾರಕ್ಕೆ ₹10 ಲಕ್ಷ ಹಾಗೂ ಬೊಮ್ಮಸಂದ್ರ ಪುರಸಭೆಗೆ ₹5 ಲಕ್ಷ ಮಧ್ಯಂತರ ದಂಡ ವಿಧಿಸಲಾಗಿದೆ. ರಾಜ್ಯ ಮತ್ತು ಪುರಸಭೆಯ ಪ್ರತಿಕ್ರಿಯೆ ನಂತರ ಅಂತಿಮ ಪರಿಹಾರ ನಿರ್ಧರಿಸಲಾಗುವುದು ಎಂದು ನ್ಯಾಯಮಂಡಳಿ ತಿಳಿಸಿದೆ.

ಅಗತ್ಯಬಿದ್ದರೆ, ತಜ್ಞರ ಸಮಿತಿಯನ್ನು ನೇಮಕ ಮಾಡಲಾಗುವುದು. ತಪ್ಪಿತಸ್ಥ ಅಧಿಕಾರಿಗಳಿಂದ ದಂಡದ ಮೊತ್ತವನ್ನು ವಸೂಲಿ ಮಾಡಲು ರಾಜ್ಯ ಮತ್ತು ಪುರಸಭೆಗೆ ಅಧಿಕಾರವಿದೆ. ಮಧ್ಯಂತರ ದಂಡವನ್ನು ಒಂದು ತಿಂಗಳೊಳಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ಜಮಾ ಮಾಡಿ, ಪರಿಸರ ಪುನರ್‌ ಸ್ಥಾಪನೆಗೆ ಅದನ್ನು ಬಳಸಲಾಗುವುದು ಎಂದು ನ್ಯಾಯಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT