ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಜಿಟಿ ಆದೇಶ ಪಾಲಿಸಿದರೆ ಬೆಂಗಳೂರಿನ ಶೇ 95ರಷ್ಟು ಕಟ್ಟಡ ನೆಲಸಮ?

ಎನ್‌ಜಿಟಿ ಆದೇಶ: ಬೆಂಗಳೂರಿನ ಶೇ 95ರಷ್ಟು ಕಟ್ಟಡ ನೆಲಸಮ?
Last Updated 21 ಜನವರಿ 2019, 9:32 IST
ಅಕ್ಷರ ಗಾತ್ರ

ನವದೆಹಲಿ: ಕೆರೆಗಳು ಹಾಗೂ ರಾಜಕಾಲುವೆಗಳ ಮೀಸಲು ಪ್ರದೇಶಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ಪಾಲಿಸಿದರೆ ಬೆಂಗಳೂರಿನ ಶೇ 95ರಷ್ಟು ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ. ಜತೆಗೆ, ಸಂತ್ರಸ್ತರಿಗೆ ₹3 ಲಕ್ಷ ಕೋಟಿ ಪರಿಹಾರ ನೀಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೆರೆಗಳು ಹಾಗೂ ರಾಜಕಾಲುವೆಗಳ ಸುತ್ತಮುತ್ತ ಇನ್ನುಮುಂದೆ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಡಬಾರದು ಎಂದು ಎನ್‌ಜಿಟಿ 2016ರ ಮೇ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಕೆರೆಯ ಅಂಚಿನಿಂದ 75 ಮೀಟರ್‌ ಅಂದರೆ 225 ಅಡಿ ದೂರದ ಪರಿಧಿ
ಯನ್ನು ಬಫರ್‌ ಜೋನ್‌ ಅಥವಾ ಹಸಿರು ವಲಯ ಎಂದೂ ಆದೇಶದಲ್ಲಿ ತಿಳಿಸಿತ್ತು.

ಎರಡೂ ರಾಜಕಾಲುವೆಗಳನ್ನು ಸೇರುವ ಮೂರನೇ ಶ್ರೇಣಿಯ ಕಾಲುವೆಗಳ ಎಡ ಮತ್ತು ಬಲದಲ್ಲಿ 25 ಮೀಟರ್‌ (75 ಅಡಿ) ಬಿಡಬೇಕು ಎಂದೂ ಸೂಚಿಸಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದೆ. ಈ ಸಂಬಂಧ ನ್ಯಾಯ
ಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್‌ ಉದಯ್ ಹೊಳ್ಳ ಅವರು ಲಿಖಿತ ಹೇಳಿಕೆ ಸಲ್ಲಿಸಿದ್ದಾರೆ.

‘ಮೂರನೇ ಹಂತದ ರಾಜಕಾಲುವೆ ಪ್ರತಿ ಮನೆ ಅಥವಾ ಕಟ್ಟಡದ ಮುಂದೆ ಇದೆ. ಎನ್‌ಜಿಟಿ ಆದೇಶ ‍ಪಾಲಿಸಿದರೆ ಕೆಲವು ನಿವೇಶನ ಹಾಗೂ ಮನೆಗಳನ್ನು ಬಿಟ್ಟು ಉಳಿದವುಗಳನ್ನು ಕೆಡವಬೇಕಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಬೆಂಗಳೂರಿನಲ್ಲಿ ಮೊದಲನೇ ಹಾಗೂ ಎರಡನೇ ಹಂತದ ರಾಜಕಾಲುವೆಗಳ ಉದ್ದ 857 ಕಿ.ಮೀ. ಇದೆ. ಇವುಗಳ ಮೀಸಲು ‍ಪ್ರದೇಶ 21,400 ಎಕರೆಗಳಷ್ಟು. ಕೆರೆಗಳ ಮೀಸಲು ಪ್ರದೇಶವನ್ನು ಹೆಚ್ಚಿಸಿದರೆ ಆಗ ಹೆಚ್ಚುವರಿಯಾಗಿ 11 ಸಾವಿರ ಎಕರೆ ಬಿಡಬೇಕಾಗುತ್ತದೆ. ಮೀಸಲು ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ. ಒಟ್ಟಾರೆ ಅಭಿವೃದ್ಧಿ ಚಟುವಟಿಕೆ ಮುಕ್ತ ಪ್ರದೇಶ 32,400 ಎಕರೆಗಳಷ್ಟು ಆಗುತ್ತದೆ. ಅಂದರೆ 131 ಚದರ ಕಿ.ಮೀ.ಗಳಷ್ಟು. ಒಂದು ವೇಳೆ, ತೃತೀಯ ಹಂತದ ರಾಜಕಾಲುವೆಗಳನ್ನು ಪರಿಗಣಿಸಿದರೆ ಇಡೀ ಬೆಂಗಳೂರೇ ಮೀಸಲು ಪ್ರದೇಶವಾಗುತ್ತದೆ’ ಎಂದು ಉಲ್ಲೇಖಿಸಿದ್ದಾರೆ.

31,500

ಕೆರೆಗಳ ಮೀಸಲು ಪ್ರದೇಶದಲ್ಲಿರುವ ಕಟ್ಟಡಗಳ ಸಂಖ್ಯೆ

19.4 ಲಕ್ಷ

ರಾಜಕಾಲುವೆಗಳ ಮೀಸಲು ಪ್ರದೇಶದಲ್ಲಿರುವ ಕಟ್ಟಡಗಳ ಸಂಖ್ಯೆ

(ಎನ್‌ಜಿಟಿ ಆದೇಶ ಅನುಷ್ಠಾನ ಮಾಡಿದರೆ ಬಾಧಿತ ಕಟ್ಟಡಗಳ ಪ್ರಮಾಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT