ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್ ಮೋದಿಯ 13 ಐಷಾರಾಮಿ ಕಾರುಗಳ ಹರಾಜು-ನೋ ಟೆಸ್ಟ್ ಡ್ರೈವ್

Last Updated 1 ಏಪ್ರಿಲ್ 2019, 9:26 IST
ಅಕ್ಷರ ಗಾತ್ರ

ಮುಂಬೈ: ಬಹುಕೋಟಿವಂಚನೆ ಪ್ರಕರಣ ಆರೋಪಿ ನೀರವ್ ಮೋದಿಯ 13 ಐಷಾರಾಮಿ ಕಾರುಗಳನ್ನು ಹರಾಜು ಮಾಡಲು ಜಾರಿನಿರ್ದೇಶನಾಲಯ ತೀರ್ಮಾನಿಸಿದೆ.

ನೀರವ್ ಮೋದಿಯ ಐಷಾರಾಮಿ ಕಾರುಗಳಾದ ರೋಲ್ಸ್ ರಾಯ್, ಪೋರ್ಸ್ ಪನಮೆರಾ, ಎರಡು ಮರ್ಸಿಡಿಸ್ ಬೆನ್ಜ್ , ಮೂರು ಹೊಂಡಾ ಕಾರುಗಳು, ಟೊಯೋಟಾ ಫಾರ್ಚುನರ್ ಹಾಗೂ ಇನ್ನೊವಾ ಇವು ಹರಾಜಾಗುವಪ್ರಮುಖ ಕಾರುಗಳಾಗಿವೆ.ನೀರವ್ ಮೋದಿಯ ನಿವಾಸದಲ್ಲಿ ದೊರೆತ ಪೇಂಟಿಂಗ್ಸ್ ಗಳನ್ನು ಹರಾಜು ಮಾಡಿದ ಆದಾಯ ತೆರಿಗೆ ಇಲಾಖೆ 54.84 ಕೋಟಿ ರೂಪಾಯಿಗಳನ್ನು ಮೋದಿ ಬಾಬ್ತು ಜಮಾ ಮಾಡಿಕೊಂಡ ಬೆನ್ನ ಹಿಂದೆಯೇ ಜಾರಿ ನಿರ್ದೇಶನಾಲಯ ಈ ತೀರ್ಮಾನಕ್ಕೆ ಬಂದಿದೆ. ವಂಚನೆ ಪ್ರಕರಣ ದಾಖಲಾದ ನಂತರ ಜಾರಿ ನಿರ್ದೇಶನಾಲಯ ಈ ಕಾರುಗಳನ್ನು ವಶಪಡಿಸಿಕೊಂಡಿತ್ತು. ಈ ಕಾರುಗಳ ಹರಾಜಿನಿಂದ ಸ್ವಲ್ಪ ಮೊತ್ತದ ಹಣ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.

ಕಾರುಗಳನ್ನು ಹರಾಜು ಹಾಕುವ ಗುತ್ತಿಗೆಯನ್ನು ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾದ 'ಮೆಟಲ್ ಸ್ಕ್ರಾಪ್ ಟ್ರೇಡ್ ಕಾರ್ಪೋರೇಷನ್'ಗೆ ವಹಿಸಲಾಗಿದೆ. ಆದಾಯತೆರಿಗೆ ಇಲಾಖೆ ಪೇಂಟಿಂಗ್ಸ್‌ಗಳ ಹರಾಜು ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ವಹಿಸಿತ್ತು.

ಬಿಡ್ಡುದಾರರು ಕಾರುಗಳನ್ನು ಪರಿಶೀಲಿಸಬಹುದು, ಆದರೆ ಟೆಸ್ಟ್ ಡ್ರೈವ್ ಹೋಗುವಂತಿಲ್ಲ. ಹರಾಜಿಗೆ ಒಂದು ವಾರಕ್ಕೂ ಮುನ್ನ ಕಾರುಗಳನ್ನು ಪರಿಶೀಲನೆ ಮಾಡಲು ಅವಕಾಶವಿದೆ. ಕಾರಿನ ಅಂದಾಜು ಬೆಲೆ, ಉತ್ಪಾದನಾ ವರ್ಷ, ಕಾರಿನ ಮಾದರಿ, ಚಿತ್ರಗಳು ಹಾಗೂ ಸಂಬಂಧಿಸಿದ ದಾಖಲೆಗಳನ್ನು ಮುಂದಿನ ವಾರ ವೆಬ್ ಸೈಟ್ ನಲ್ಲಿ ನೋಡಬಹುದು. ಹರಾಜಿನ ಕ್ಯಾಟಲಾಗ್ ಸಿದ್ದವಾಗುತ್ತಿದ್ದು, ಇವುಗಳ ಕುರಿತು ಎಂಎಸ್ ಟಿಸಿ ವೆಬ್ ಸೈಟ್‌ನಲ್ಲಿ ವಿವರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹರಾಜು ಪ್ರಕ್ರಿಯೆ ಏಪ್ರಿಲ್ 18ರಂದು ನಡೆಯಲಿದೆ. ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಕಾರುಗಳನ್ನು ಪರಿಶೀಲಿಸಲು ಸ್ಥಳ ಮತ್ತು ಹರಾಜು ಪ್ರಕ್ರಿಯೆ ನಡೆಸುವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಹರಾಜಿನ ನಂತರ ಮಾರಾಟವಾದ ಕಾರುಗಳ ನೋಂದಣಿಗೆ ಅವಕಾಶವಿದೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಲಂಡನ್ ನಲ್ಲಿ ಕಾಣಿಸಿಕೊಂಡ ನೀರವ್ ಮೋದಿಯನ್ನು ಅಲ್ಲಿನ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ನೀರವ್ ಮೋದಿಯು ಜಾಮೀನಿಗೆ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದ. ನ್ಯಾಯಾಲಯ ಜಾಮೀನು ನಿರಾಕರಿಸಿತು. ಎರಡನೇ ಬಾರಿಯೂ ಅಲ್ಲಿನ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಇದು ಅತ್ಯಂತ ಪ್ರಮುಖವಾದ ಪ್ರಕರಣವಾಗಿದ್ದು, ಆರೋಪಿಯು ಸಾಕ್ಷ್ಯ ನಾಶಮಾಡುವ ಹಾಗೂ ಸಾಕ್ಷಿದಾರರ ಮೇಲೆ ಒತ್ತಡ ಹೇರಿ ಲಂಡನ್‌ನಿಂದ ಪರಾರಿಯಾಗುವ ಕುರಿತು ವಿಷಯ ಪ್ರಸ್ತಾಪಿಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT