‘ನೀರವ್ ಮೋದಿ ಭಾರತದ ವಶಕ್ಕೆ ಶೀಘ್ರ’: ತನಿಖಾ ಸಂಸ್ಥೆಗಳ ವಿಶ್ವಾಸ

ಗುರುವಾರ , ಏಪ್ರಿಲ್ 25, 2019
29 °C
ವಿಜಯ್‌ ಮಲ್ಯ ಪ್ರಕರಣದಂತೆ ವಿಳಂಬವಾಗದು:

‘ನೀರವ್ ಮೋದಿ ಭಾರತದ ವಶಕ್ಕೆ ಶೀಘ್ರ’: ತನಿಖಾ ಸಂಸ್ಥೆಗಳ ವಿಶ್ವಾಸ

Published:
Updated:
Prajavani

ನವದೆಹಲಿ: ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಂಗ್ಲೆಂಡ್‌ನಲ್ಲಿ ಬಂಧನಕ್ಕೊಳಗಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಕರೆತರುವುದರಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ತನಿಖಾ ಸಂಸ್ಥೆಗಳು ವಿಶ್ವಾಸ ವ್ಯಕ್ತಪಡಿಸಿವೆ. 

ಉದ್ಯಮಿ ವಿಜಯ್‌ಮಲ್ಯ ಪ್ರಕರಣದಂತೆ ಈ ವಿಚಾರದಲ್ಲಿ ಯಾವುದೇ ವಿಳಂಬವಾಗುವುದಿಲ್ಲ. ಇಂಗ್ಲೆಂಡ್‌ನ ಅಧಿಕಾರಿಗಳಿಗೆ ಎಲ್ಲ ಅಗತ್ಯ ದಾಖಲೆಗಳನ್ನು ನೀಡಲಾಗಿದ್ದು, ನೀರವ್‌ ಮೋದಿಯನ್ನು ಭಾರತದ ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

‘ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನೀರವ್‌ ಮೋದಿ ಪ್ರಕರಣದ ಸಂಪೂರ್ಣ ಸಾಕ್ಷ್ಯಾಧಾರಗಳನ್ನು ಇಂಗ್ಲೆಂಡ್‌ನೊಂದಿಗೆ ಹಂಚಿಕೊಂಡಿದೆ. ಹೀಗಾಗಿ, ಅಪರಾಧದ ಸ್ವರೂಪ ಅಲ್ಲಿನ ಅಧಿಕಾರಿಗಳಿಗೆ ತಿಳಿದಿದೆ’ ಎಂದು ಮೂಲಗಳು ಹೇಳಿವೆ ಎಂದು ವಾಹಿನಿ ತಿಳಿಸಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ₹13,500 ಕೋಟಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನೀರವ್‌ ಮೋದಿಯ ಜಾಮೀನು ಅರ್ಜಿಯನ್ನು ಇಲ್ಲಿನ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌, ತಿರಸ್ಕರಿಸಿ ಅವನನ್ನು ಪೊಲೀಸ್‌ ವಶಕ್ಕೆ ಒಪ್ಪಿಸಿತ್ತು.  ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತ ಅರ್ಜಿ ವಿಚಾರಣೆಯನ್ನು ಮಾರ್ಚ್‌ 29ಕ್ಕೆಮುಂದೂಡಿದೆ.

ಮಾರ್ಚ್‌ 29ರಂದು ನಡೆಯಲಿರುವ ವಿಚಾರಣೆ ವೇಳೆ ಸಿಬಿಐ ಮತ್ತು ಇ.ಡಿಯ ಜಂಟಿ ತಂಡವನ್ನು ಇಂಗ್ಲೆಂಡ್‌ಗೆ ಕಳುಹಿಸುವ ಬಗ್ಗೆ ಭಾರತ ಇನ್ನೂ ನಿರ್ಧರಿಸಿಲ್ಲ. ಪ್ರಕರಣದ ಇತರೆ ಆರೋಪಿಗಳಾದ ನೀರವ್‌ ಮೋದಿ ಸಹೋದರ ನಿಶಾಲ್‌ ಮತ್ತು ಸಹೋದರಿ ಪೂರ್ವಿ ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಇದೆ. ಅಲ್ಲದೆ, ಪ್ರಕರಣದ ಮತ್ತೊಬ್ಬ ಆರೋಪಿ, ನೀರವ್‌ ಚಿಕ್ಕಪ್ಪ ಮೆಹುಲ್‌ ಚೌಕ್ಸಿ ಆಂಟಿಗುವಾದಲ್ಲಿದ್ದು, ಅವನನ್ನೂ ಭಾರತಕ್ಕೆ ಹಸ್ತಾಂತರಿಸುವ ಕುರಿತ ಪ್ರಕ್ರಿಯೆ ಪ್ರಗತಿಯಲ್ಲಿದೆ. ತನಿಖಾ ತಂಡಗಳು ಇಂಗ್ಲೆಂಡ್‌ಗೆ ತೆರಳುವ ಸಾಧ್ಯತೆ ಇದೆ.

ಭಾರತದಲ್ಲಿಯೂ ವಿಚಾರಣೆ:  ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯದಲ್ಲಿಯೂ ನೀರವ್‌ ಮೋದಿ ವಿರುದ್ಧ ಪ್ರಕರಣವಿದ್ದು, ಶುಕ್ರವಾರ ವಿಚಾರಣೆಗೆ ಬರಲಿದೆ. ಲಂಡನ್‌ ಕೋರ್ಟ್‌ನ ತೀರ್ಪಿನ ನಂತರ, ಈ ಪ್ರಕರಣದಲ್ಲಿಯೂ ಅವನನ್ನು ‘ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸಲು ಸುಲಭವಾಗಬಹುದು ಎಂದು ಜಾರಿ ನಿರ್ದೇಶನಾಲಯ ವಿಶ್ವಾಸ ವ್ಯಕ್ತಪಡಿಸಿದೆ. 

ಕಹಿಯಾದ ಹೋಳಿ

ಲಂಡನ್‌: ವೈಭವೋಪೇತ ಬಂಗಲೆಯಲ್ಲಿ ಐಷಾರಾಮ ಜೀವನ ನಡೆಸುತ್ತಿದ್ದ ಉದ್ಯಮಿ ನೀರವ್‌ ಮೋದಿ ಗುರುವಾರ ಇಂಗ್ಲೆಂಡ್‌ ಜೈಲಿನ ಕಂಬಿಗಳ ಹಿಂದೆ ಹೋಳಿ ಆಚರಿಸುವಂತಾಯಿತು.

ಶಿಕ್ಷಗೆ ಒಳಗಾಗಿರುವವರು, ವಿಚಾರಣಾಧೀನ ಕೈದಿಗಳಿಂದ ಗಿಜಿಗುಡುವ ಲಂಡನ್‌ನ ನೈರುತ್ಯ ಭಾಗದಲ್ಲಿರುವ ವಾಂಡ್ಸ್‌ವರ್ಥ್ ಬಂದೀಖಾನೆಯಲ್ಲಿಯೇ ನೀರವ್‌ ಮಾರ್ಚ್‌ 29ರ‌ವರೆಗೆ ಕಾಲಕಳೆಯಬೇಕಿದೆ. ವಾಂಡ್ಸ್‌ವರ್ಥ್‌ ಜೈಲಿನಲ್ಲಿ 1,430ಕ್ಕೂ ಅಧಿಕ ಕೈದಿಗಳಿದ್ದಾರೆ. ಅವರ ಅಪರಾಧಿಕ ಹಿನ್ನೆಲೆಯೂ ಒಂದೊಂದು ರೀತಿ. ಇವರ ಪೈಕಿ ಯಾರಾದರೊಬ್ಬರೊಂದಿಗೆ ಕೋಣೆ ಹಂಚಿಕೊಳ್ಳಬೇಕಾದ ಸ್ಥಿತಿ ಈ ವಜ್ರವ್ಯಾಪಾರಿಯದು!

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !