ಬುಧವಾರ, ಜನವರಿ 22, 2020
22 °C

ನಿರ್ಭಯಾ ಪ್ರಕರಣದ ದೋಷಿಯಿಂದ ಪರಿಹಾರಾತ್ಮಕ ಅರ್ಜಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಿರ್ಭಯಾ ಅತ್ಯಾಚಾರಿಗಳಲ್ಲಿ ಒಬ್ಬನಾದ ವಿನಯ್‌ ಶರ್ಮಾ ಗಲ್ಲು ಶಿಕ್ಷೆಯಿಂದ ಪಾರಾಗಲು ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಪರಿಹಾರಾತ್ಮಕ ಅರ್ಜಿ (ಪರಿಹಾರಾತ್ಮಕ ಅರ್ಜಿ) ಸಲ್ಲಿಸಿದ್ದಾನೆ. 

ಪರಿಹಾರಾತ್ಮಕ ಅರ್ಜಿ ಮತ್ತು ರಾಷ್ಟ್ರಪತಿಗಳ ಮೊರೆ ಹೋಗುವುದು ಗಲ್ಲು ಶಿಕ್ಷೆಗೆ ಗುರಿಯಾದ ಆಪರಾಧಿಗಳಿಗೆ ಇರುವ ಕಡೆ ಮಾರ್ಗ. ಸದ್ಯ ವಿನಯ್‌ ಶರ್ಮಾ ಪರ ವಕೀಲರು ಪರಿಹಾರಾತ್ಮಕ ಅರ್ಜಿಯ ಮೂಲಕ ಪ್ರಯತ್ನಕ್ಕೆ ಮುಂದಾಗಿದ್ದಾರೆ.  

ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಇದೇ 22ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ಪಟಿಯಾಲಾ ಹೌಸ್ ನ್ಯಾಯಾಲಯ ಇದೇ 7ರಂದು ವಾರಂಟ್‌ ಜಾರಿ ಮಾಡಿತ್ತು. ಅಲ್ಲದೆ, ಅಪರಾಧಿಗಳು 14 ದಿನಗಳಲ್ಲಿ ಕಾನೂನು ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದೂ ನ್ಯಾಯಾಲಯ ಹೇಳಿತ್ತು. ಆದೇಶದ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಲಾಗುವುದು ಎಂದು ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ತಿಳಿಸಿದ್ದರು.

ಏಳು ವರ್ಷಗಳ ಹಿಂದೆ, ಅಂದರೆ, 2012ರ ಡಿ. 16ರಂದು ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ನಿರ್ಭಯಾಳ ಮೇಲೆ ಚಲಿಸುವ ಬಸ್‌ನಲ್ಲೇ ಅತ್ಯಾಚಾರ ಮಾಡಿದ್ದ ದುಷ್ಕರ್ಮಿಗಳು, ನಂತರ ಕಬ್ಬಿಣದ ಸಲಾಕೆಯ ಮೂಲಕ ಹಲ್ಲೆ ನಡೆಸಿ ತೀವ್ರ ಸ್ವರೂಪದ ಹಾನಿಯುಂಟು ಮಾಡಿದ್ದರು. ನಂತರ ಬಸ್‌ನಿಂದ ಹೊರದಬ್ಬಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿದ್ದ ಆಕೆಯನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರ್‌ಗೆ ಕರೆದೊಯ್ಯಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ 2012ರ ಡಿ. 22ರಂದು ನಿರ್ಭಯಾ ಕೊನೆಯುಸಿರೆಳೆದಿದ್ದರು. 

ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಅಪರಾಧಿಗಳನ್ನಾಗಿ ತೀರ್ಪು ನೀಡಲಾಗಿತ್ತು. ಇವರಲ್ಲೊಬ್ಬ ಅಪ್ರಾಪ್ತ ಜೈಲು ಶಿಕ್ಷೆಯನ್ನು ಅನುಭವಿಸಿ ನಂತರ ಬಿಡುಗಡೆಯಾಗಿದ್ದ‌. ಮತ್ತೊಬ್ಬ ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ. ಉಳಿದ ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು. ಈ ಪೈಕಿ ಅಪರಾಧಿ ಅಕ್ಷಯ್ ಸಿಂಗ್ ಹೊರತುಪಡಿಸಿ ಇತರ ಅಪರಾಧಿಗಳಾದ ಮುಕೇಶ್ ಸಿಂಗ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾನ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಹಿಂದೆಯೇ ತಿರಸ್ಕರಿಸಿತ್ತು. ಅಕ್ಷಯ್ ಸಿಂಗ್‌ನ ಮರುಪರಿಶೀಲನಾ ಅರ್ಜಿಯನ್ನು 2019ರ ಡಿಸೆಂಬರ್ 18ರಂದು ತಿರಸ್ಕರಿಸಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು