ಗುರುವಾರ , ಜನವರಿ 23, 2020
18 °C

ನಿರ್ಭಯಾ ಪ್ರಕರಣ: ಅಪರಾಧಿಗಳ ಮೇಲೆ ತೀವ್ರ ನಿಗಾ ವಹಿಸಿದ ಜೈಲು ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಮರಣ ದಂಡನೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳ ಚಟುವಟಿಕೆಗಳ ಮೇಲೆ ತಿಹಾರ್ ಜೈಲು ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ. ಮಾನಸಿಕ ಒತ್ತಡಕ್ಕೆ ಸಿಲುಕಿ ಅವರು ಆತ್ಮಹತ್ಯೆಗೆ ಶರಣಾಗದಂತೆ ಹದ್ದಿನ ಕಣ್ಣಿಟ್ಟಿದ್ದಾರೆ. 

ಕೊನೆಯ ಬಾರಿ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ದಿನಾಂಕ ತಿಳಿಸಬೇಕೆಂದು ಅಪರಾಧಿಗಳಿಗೆ ಹೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ವರು ಅಪರಾಧಿಗಳಲ್ಲಿ ಇಬ್ಬರು ತಮಗೆ ಕ್ಷಮಾದಾನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯವು ಆ ಇಬ್ಬರು ಅಪರಾಧಿಗಳ ಕ್ಷಮಾಧಾನ ಅರ್ಜಿಯನ್ನು ತಿರಸ್ಕರಿಸಿ ತೀರ್ಪು ನೀಡಿತ್ತು. 

ಮುಕೇಶ್ ಎಂಬುವವನು ದೆಹಲಿ ಸರ್ಕಾರಕ್ಕೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯು ಗುರುವಾರ ತಿರಸ್ಕೃತವಾಗಿದೆ. ಆ ಮೂಲಕ ನಾಲ್ವರು ಆರೋಪಿಗಳ ಮರಣ ದಂಡನೆ ಸನ್ನಿಹಿತವಾದಂತಾಗಿದೆ. 

ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ರಾಮ್‌ ಸಿಂಗ್‌ ಎಂಬುವವನು ಈ ಹಿಂದೆ ತಿಹಾರ್‌ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಕಾರಣ ಈಗ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ವರು ಅಪರಾಧಿಗಳಲ್ಲಿ ವಿನಯ್‌ ಶರ್ಮಾ ಎಂಬುವವನು ಖಿನ್ನತೆಗೆ ಒಳಗಾಗಿದ್ದು, ಸರಿಯಾಗಿ ಊಟ, ನಿದ್ದೆ ಮಾಡುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು