ಸೋಮವಾರ, ಜನವರಿ 20, 2020
18 °C
ನಿರ್ಭಯಾ ತಾಯಿಗೆ ನ್ಯಾಯಾಧೀಶರಿಂದ ಸಾಂತ್ವನ l ಕ್ಷಮಾದಾನ ಅರ್ಜಿ: ಮಾಹಿತಿ ಕೇಳಿದ ಕೋರ್ಟ್‌

ಗಲ್ಲು ಶಿಕ್ಷೆ ಜಾರಿ: ಜ. 7ಕ್ಕೆ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ(ಪಿಟಿಐ): ‘ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಶೀಘ್ರ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ದೆಹಲಿ ಸರ್ಕಾರವು ಮಾಡಿದ್ದ ಮನವಿಯ ವಿಚಾರಣೆಯನ್ನು ದೆಹಲಿಯ ಪಟಿಯಾಲಾಹೌಸ್‌ ಕೋರ್ಟ್‌ ಜ. 7ಕ್ಕೆ ಮುಂದೂಡಿದೆ.

2017ರ ತೀರ್ಪಿನ ಮರು ವಿಚಾರಣೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ಕೆಲವೇ ಕ್ಷಣಗಳಲ್ಲಿ ಈ ಅರ್ಜಿಯನ್ನು ಕೈಗೆತ್ತಿಕೊಂಡ ಹೆಚ್ಚುವರಿ ಸೆಶನ್ಸ್‌ ನ್ಯಾಯಾಧೀಶ ಸತೀಶ್‌ ಕುಮಾರ್‌ ಅರೋರ ಅವರು, ಮರಣದಂಡನೆಯ ವಿರುದ್ಧ ಅಪರಾಧಿಗಳು ರಾಷ್ಟ್ರಪತಿ ಮುಂದೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಲು ಇಚ್ಛಿಸುತ್ತಾರೆಯೇ ಎಂಬ ಬಗ್ಗೆ ಅವರ ಅಭಿಪ್ರಾಯ ಪಡೆದು ಒಂದು ವಾರದೊಳಗೆ ಮಾಹಿತಿ ನೀಡುವಂತೆ ತಿಹಾರ್‌ ಜೈಲು ಸಿಬ್ಬಂದಿಗೆ ಸೂಚಿಸಿದರು.

ವಿಚಾರಣೆಯನ್ನು ಜ.7ಕ್ಕೆ ಮುಂದೂಡಿರುವುದಾಗಿ ನ್ಯಾಯಾಧೀಶರು ಹೇಳುತ್ತಿದ್ದಂತೆಯೇ ನಿರ್ಭಯಾ ಅವರ ತಾಯಿ ಕಣ್ಣೀರಿಟ್ಟರು. ‘ಈ ನಿರ್ಧಾರದಿಂದ ಅಪರಾಧಿಗಳಿಗೆ ಇನ್ನೊಂದು ಅವಕಾಶ ಲಭಿಸಿದಂತಾಗಿದೆ’ ಎಂದರು.

‘ಏಳು ವರ್ಷಗಳಿಂದ ನಾವು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಹಕ್ಕುಗಳ ಬಗ್ಗೆ ಯಾರೂ ಗಮನ ಹರಿಸಿಲ್ಲ. ಮುಂದಿನ ವಿಚಾರಣೆಯ ವೇಳೆಗೂ ಅಂತಿಮ ತೀರ್ಮಾನ ಬರುವುದೆಂಬ ಭರವಸೆ ಇಲ್ಲ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಮುಂದೆ ಅವರು ಕಣ್ಣೀರಿಟ್ಟರು.

ನ್ಯಾಯಾಲಯದ ಒಳಗೂ ಅವರು ಕಣ್ಣೀರಿಟ್ಟಿದ್ದರು. ಆ ಸಂದರ್ಭದಲ್ಲಿ ಅವರಿಗೆ ಸಾಂತ್ವನ ಹೇಳಿದ ನ್ಯಾಯಾಧೀಶರು, ‘ನಿಮ್ಮ ಬಗ್ಗೆ ನನಗೆ ಅನುಕಂಪವಿದೆ. ಒಂದು ಜೀವಹಾನಿಯಾಗಿದೆ ಎಂಬುದೂ ತಿಳಿದಿದೆ. ಆದರೆ ಅಪರಾಧಿಗಳಿಗೆ ಅವರದ್ದೇ ಆದ ಕೆಲವು ಹಕ್ಕುಗಳಿವೆ. ನಿಮ್ಮ ನೋವನ್ನು ಕೇಳುವುದಕ್ಕಾಗಿಯೇ ನಾವು ಇಲ್ಲಿದ್ದೇವೆ. ಜತೆಗೆ ನಾವು ಕಾನೂನಿನಿಂದಲೂ ಬಂಧಿಸಲ್ಪಟ್ಟಿದ್ದೇವೆ’ ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲೂ ಹಾಜರಿದ್ದ ಅವರು, ಅಪರಾಧಿಯ ಅರ್ಜಿಯನ್ನು ತಳ್ಳಿಹಾಕಿದ್ದ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ. ಮರಣದಂಡನೆ ಜಾರಿಯಾಗುವವರೆಗೂ ನಮಗೆ ನೆಮ್ಮದಿ ಇಲ್ಲ.

- ನಿರ್ಭಯಾ ತಂದೆ

ನಾವು ಎಲ್ಲೇ ಹೋದರೂ ‘ಅಪರಾಧಿಗಳಿಗೆ ಕಾನೂನಾತ್ಮಕ ಹಕ್ಕುಗಳಿವೆ’ ಎಂದು ಹೇಳುತ್ತಾರೆ. ಹಾಗಾದರೆ ನಮಗೆ ಯಾವ ಹಕ್ಕೂ ಇಲ್ಲವೇ?.

- ನಿರ್ಭಯಾ ತಾಯಿ

ಅಪರಾಧಿಗಳ ಮೇಲೆ ಸತತ ನಿಗಾ

ತಮಗೆ ಮರಣದಂಡನೆ ಸಮೀಪಿಸುತ್ತಿದೆ ಎಂಬುದನ್ನು ಮನಗಂಡಿರುವ ನಾಲ್ವರು ಅತ್ಯಾಚಾರಿಗಳಲ್ಲಿ ಖಿನ್ನತೆಯ ಲಕ್ಷಣಗಳು ಕಾಣಿಸಲಾರಂಭಿಸಿವೆ. ಪರಿಣಾಮವಾಗಿ, ಜೈಲು ಅಧಿಕಾರಿಗಳು ಅವರ ಮೇಲೆ ಸತತವಾಗಿ ನಿಗಾ ಇಡುತ್ತಿದ್ದಾರೆ.

ಗಲ್ಲು ಶಿಕ್ಷೆಯಿಂದ ಪಾರಾಗಲು ಇರುವ ಕೊನೆಯ ಆಯ್ಕೆಯನ್ನು ಬಳಸಿಕೊಳ್ಳಲು ಅಪರಾಧಿಗಳು ಮುಂದಾಗುತ್ತಿದ್ದಾರೆ. ಈಗ ಪರಿಹಾರಾತ್ಮಕ ಅರ್ಜಿ ಸಲ್ಲಿಕೆಯ ಅವಕಾಶ ಅವರಿಗೆ ಇದೆ. ಕ್ಷಮಾದಾನಕ್ಕಾಗಿ ಒಬ್ಬ ಅಪರಾಧಿಯು ಸಲ್ಲಿಸಿರುವ ಅರ್ಜಿಯು ರಾಷ್ಟ್ರಪತಿಯ ಮುಂದಿದೆ. ಈ ಅರ್ಜಿಯನ್ನು ರಾಷ್ಟ್ರಪತಿ ನಿರಾಕರಿಸಿದರೆ, ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ.

ಮಾಹಿತಿ ಕೊಡಿ: ರಾಜ್ಯಗಳಿಗೆ ಸೂಚನೆ

ಅತ್ಯಾಚಾರ ಪ್ರಕರಣಗಳ ನ್ಯಾಯದಾನದಲ್ಲಿ ವಿಳಂಬವಾಗುತ್ತಿರುವುದರಿಂದ ಜನರಲ್ಲಿ ಆತಂಕ, ಅಶಾಂತಿಯ ಭಾವನೆ ಹೆಚ್ಚಾಗುತ್ತಿರುವುದನ್ನು ಮನಗಂಡ ಸುಪ್ರೀಂ ಕೋರ್ಟ್‌, ಈ ಬಗ್ಗೆ ಸ್ವಯಂ ಪ್ರೇರಣೆಯಿಂದ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇತ್ಯರ್ಥವಾಗದೆ ಬಾಕಿ ಇರುವ ಇಂಥ ಪ್ರಕರಣಗಳ ಬಗ್ಗೆ 2020ರ ಫೆಬ್ರುವರಿ 7ರೊಳಗೆ ಸಮಗ್ರ ಮಾಹಿತಿ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಹೈಕೋರ್ಟ್‌ಗಳಿಗೆ ಸೂಚನೆ ನೀಡಿದೆ.

ಇಂಥ ಪ್ರಕರಣಗಳನ್ನು ಕುರಿತಂತೆ, ನಿರ್ಭಯಾ ನಿಧಿಯ ಬಳಕೆ, ತ್ವರಿಯ ತನಿಖೆ ಮತ್ತು ವಿಚಾರಣೆ, ಸಾಕ್ಷ್ಯಗಳ ಸಂಗ್ರಹ, ವಿಧಿವಿಜ್ಞಾನ ಮತ್ತು ವೈದ್ಯಕೀಯ ಸಾಕ್ಷ್ಯಗಳ ಸಂಗ್ರಹ, ಹೇಳಿಕೆಗಳ ದಾಖಲೆ, ಸಂತ್ರಸ್ತರಿಗೆ ಪರಿಹಾರ ನೀಡಿಕೆ ಮುಂತಾದ ಎಲ್ಲಾ ಮಾಹಿತಿಗಳನ್ನೂ ನೀಡಬೇಕು ಎಂದು ಕೋರ್ಟ್‌ ಸೂಚಿಸಿದೆ.

ಈ ವಿಚಾರದಲ್ಲಿ ರಾಜ್ಯಗಳಿಗೆ ನೆರವು ನೀಡಲು ಹಿರಿಯ ಕ್ರಿಮಿನಲ್ ವಕೀಲ ಸಿದ್ಧಾರ್ಥ ಲೂಥ್ರಾ ಅವರನ್ನು ಕೋರ್ಟ್‌ ನೇಮಕ ಮಾಡಿದೆ. ಎಲ್ಲಾ ಅಗತ್ಯ ನೆರವು ನೀಡುವಂತೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಸೂಚನೆಯನ್ನೂ ನೀಡಿದೆ.

‘ಅವಕಾಶ ಮುಗಿದಿಲ್ಲ’

‘ಅಪರಾಧಿಗಳೆನಿಸಿಕೊಂಡವರಿಗೆ ನ್ಯಾಯ ಪಡೆಯಲು ಇನ್ನೂ ಮಾರ್ಗಗಳಿವೆ. ದಯಾ ಅರ್ಜಿಯನ್ನು ರಾಷ್ಟ್ರಪತಿಗೆ ಸಲ್ಲಿಸುವುದಕ್ಕೂ ಮುನ್ನ, ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಸುಪ್ರೀಂ ಕೋರ್ಟ್‌ ತೀರ್ಪಿನ ಮೇಲೆ ಪರಿಹಾರಾತ್ಮಕ ಅರ್ಜಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್‌ ಕುಮಾರ್‌ ಪರ ವಕೀಲ ಎಂ.ಎಲ್‌. ಶರ್ಮಾ ಹೇಳಿದ್ದಾರೆ.

‘ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆಬೇರೆ ಕಡೆಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪರಿಹಾರಾತ್ಮಕ ಅರ್ಜಿಯು ಅಪರಾಧಿಗೆ ಲಭ್ಯವಿರುವ ಕೊನೆಯ ಅವಕಾಶ. ಇದರ ವಿಚಾರಣೆಯನ್ನು ಸಾಮಾನ್ಯವಾಗಿ ನ್ಯಾಯಾಧೀಶರ ಕೊಠಡಿಯಲ್ಲೇ ನಡೆಸಲಾಗುತ್ತದೆ. ಈ  ಅವಕಾಶ ಮುಗಿದ ನಂತರ ದಯಾ ಅರ್ಜಿ ಸಲ್ಲಿಸಲು ಅವಕಾಶ ಇದೆ’ ಎಂದು ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು