ಹೆತ್ತವರು, ಊರವರಿಗೆ ಸಂಭ್ರಮ

7
ನಿರ್ಭಯಾ ಪ್ರಕರಣ: ಗಲ್ಲು ಶಿಕ್ಷೆ ಕಾಯಂಗೊಳಿಸಿದ ಸುಪ್ರೀಂ ಕೋರ್ಟ್‌

ಹೆತ್ತವರು, ಊರವರಿಗೆ ಸಂಭ್ರಮ

Published:
Updated:
ಸುಪ್ರೀಂ ಕೋರ್ಟ್‌ ಮುಂದೆ ವಿಜಯ ಸಂಕೇತ ಪ್ರದರ್ಶಿಸಿದ ನಿರ್ಭಯಾ ತಂದೆ ಮತ್ತು ತಾಯಿ ಪಿಟಿಐ ಚಿತ್ರ

ಬರೇಲಿ (ಉತ್ತರ ಪ್ರದೇಶ): ನಿರ್ಭಯಾ ಮೇಲೆ ಅತ್ಯಾಚಾರ ಎಸಗಿ ಕೊಂದವರ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಸುಪ್ರೀಂ ಕೋರ್ಟ್‌ ನಿರ್ಧಾರದಿಂದಾಗಿ ‘ನಿರ್ಭಯಾ’ ಹುಟ್ಟೂರು ಬಲಿಯಾ ಜಿಲ್ಲೆಯ ಮೆಡವರ ಕೆಲನ್‌ ಗ್ರಾಮದ ಜನರು ಸಂಭ್ರಮ ಆಚರಿಸಿದ್ದಾರೆ. ನಿರ್ಭಯಾ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರನ್ನು ತಕ್ಷಣವೇ ನೇಣಿಗೆ ಹಾಕಬೇಕು ಎಂದು ಊರಿನ ಜನರು ಒತ್ತಾಯಿಸಿದ್ದಾರೆ. 

ಗ್ರಾಮದ ಜನರು ಸಿಹಿ ಹಂಚಿದರು, ಗ್ರಾಮ ದೇವತೆಗೆ ಹಾಲಿನ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. 

ನ್ಯಾಯಾಂಗದ ಮೇಲೆ ತಮ್ಮ ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ ಎಂದು ನಿರ್ಭಯಾ ಹೆತ್ತವರು ಪ್ರತಿಕ್ರಿಯೆ ನೀಡಿದ್ದಾರೆ.  

‘ಇಂತಹ ಹೀನ ಕೃತ್ಯಗಳನ್ನು ಎಸಗುವವರಿಗೆ ಸುಪ್ರೀಂ ಕೋರ್ಟ್‌ನ ನಿರ್ಧಾರ ದೃಢವಾದ ಸಂದೇಶವಾಗಿದೆ. ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಗಟ್ಟಿ ಕ್ರಮ ಕೈಗೊಳ್ಳುವಂತೆ ಪ್ರಧಾನಿಯನ್ನು ಕೋರುತ್ತೇನೆ’ ಎಂದು ನಿರ್ಭಯಾ ತಾಯಿ ಆಶಾ ದೇವಿ ಹೇಳಿದ್ದಾರೆ. 

ತಪ್ಪಿತಸ್ಥರನ್ನು ಇಷ್ಟು ಹೊತ್ತಿಗಾಗಲೇ ಗಲ್ಲಿಗೇರಿಸಿದ್ದರೆ ದೇಶದಲ್ಲಿ ಅತ್ಯಾಚಾರದಂತಹ ಹೀನ ಕೃತ್ಯಗಳು ಈಗ ನಡೆಯುತ್ತಲೇ ಇರಲಿಲ್ಲ ಎಂದು ನಿರ್ಭಯಾ ಅಜ್ಜ ಲಾಲ್‌ಜಿ ಸಿಂಗ್‌ ಹೇಳಿದರು. ಅಪರಾಧಿಗಳನ್ನು ತಕ್ಷಣವೇ ಗಲ್ಲಿಗೆ ಹಾಕಬೇಕು ಎಂದು ಅವರು ಆಗ್ರಹಿಸಿದರು.

‘ತಪ್ಪಿತಸ್ಥರನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಗಲ್ಲಿಗೆ ಏರಿಸಬೇಕು. ಒಂದಲ್ಲ ಒಂದು ನೆಪವೊಡ್ಡಿ ಅವರು ಗಲ್ಲು ಶಿಕ್ಷೆಗೆ ತಡೆ ಒಡ್ಡಲು ಅವಕಾಶ ಕೊಡಬಾರದು.
ಅವರನ್ನು ನೇಣಿಗೆ ಹಾಕಿದಾಗ ಮಾತ್ರ ನಮ್ಮ ದಿಟ್ಟ ಹುಡುಗಿಗೆ ನ್ಯಾಯ ದೊರೆಯಲು ಸಾಧ್ಯ’ ಎಂದು ಗ್ರಾಮದ ಮುಖ್ಯಸ್ಥೆ ಸವಿತಾ ದೇವಿ
ಹೇಳಿದ್ದಾರೆ. 

ಗಲ್ಲು ಲೈಂಗಿಕ ದೌರ್ಜನ್ಯ ನಿಲ್ಲಿಸದು: ಅಮ್ನೆಸ್ಟಿ
ಮಹಿಳೆಯರ ಮೇಲಿನ ದೌರ್ಜನ್ಯ ಗಲ್ಲು ಶಿಕ್ಷೆಯಿಂದಾಗಿ ನಿಲ್ಲುವುದಿಲ್ಲ ಎಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಹೇಳಿದೆ.

ಮರಣ ದಂಡನೆಯಿಂದಾಗಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಕಾನೂನುಗಳ ಪರಿಣಾಮಕಾರಿ ಜಾರಿಗೆ ಸರ್ಕಾರವು ಸಾಕಷ್ಟು ಸಂಪನ್ಮೂಲವನ್ನು ಒದಗಿಸಬೇಕು. ಅಪರಾಧ ನಿರ್ಣಯ ಪ್ರಮಾಣ ಹೆಚ್ಚಬೇಕು ಮತ್ತು ಪ್ರತಿ ಪ್ರಕರಣದಲ್ಲಿಯೂ ನ್ಯಾಯ ದೊರೆಯುತ್ತದೆ ಎಂಬ ಖಚಿತ ವಿಶ್ವಾಸ ಮೂಡಬೇಕು ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಭಾರತದ ಕಾರ್ಯಕ್ರಮಗಳ ವಿಭಾಗದ ನಿರ್ದೇಶಕಿ ಅಸ್ಮಿತಾ ಬಸು ಅಭಿಪ್ರಾಯಪಟ್ಟಿದ್ದಾರೆ.

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಕಾನೂನುಗಳ ಸುಧಾರಣೆಗೆ ಆಧಾರವಾಗಿರುವ ನ್ಯಾಯಮೂರ್ತಿ ವರ್ಮಾ ಸಮಿತಿ ಕೂಡ ಅತ್ಯಾಚಾರಕ್ಕೆ ಮರಣ ದಂಡನೆ ವಿಧಿಸುವುದನ್ನು ವಿರೋಧಿಸಿದೆ ಎಂದಿದ್ದಾರೆ. ಅಪರಾಧವನ್ನು ತಡೆಯುವ ತಮ್ಮ ಬದ್ಧತೆಗೆ ಗಲ್ಲು ಶಿಕ್ಷೆ ವಿಧಿಸುವುದೇ ಸಂಕೇತ ಎಂದು ನೀತಿನಿರೂಪಕರು ಸಾಮಾನ್ಯವಾಗಿ ಭಾವಿಸುತ್ತಾರೆ. ತನಿಖೆ, ವಿಚಾರಣೆ, ಸಂತ್ರಸ್ತರ ಕುಟುಂಬಕ್ಕೆ ಬೆಂಬಲದಂತಹ ಹೆಚ್ಚು ಕಷ್ಟಕರವಾದ ಮತ್ತು ಪರಿಣಾಮಕಾರಿಯಾದ ಕ್ರಮಗಳನ್ನು ನಿರ್ಲಕ್ಷಿಸುತ್ತಾರೆ. ದೂರಗಾಮಿ ಪ್ರಕ್ರಿಯೆಗಳು ಮತ್ತು ಸಾಂಸ್ಥಿಕ ಸುಧಾರಣೆ ಅಗತ್ಯ ಎಂದು ಬಸು ಹೇಳಿದ್ದಾರೆ.

ಕಹಿ ನೆನಪು
2012ರ ಡಿಸೆಂಬರ್‌ 16ರ ರಾತ್ರಿ 23 ವರ್ಷ ವಯಸ್ಸಿನ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಆರು ಮಂದಿ ಅತ್ಯಾಚಾರ ಎಸಗಿದ್ದರು. ತೀವ್ರವಾಗಿ ಹಲ್ಲೆ ನಡೆಸಿ ಅವರನ್ನು ಬಸ್‌ನಿಂದ ಹೊರಗೆ ಎಸೆದಿದ್ದರು. ಡಿಸೆಂಬರ್‌ 29ರಂದು ಸಿಂಗಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು.

ಆರೋಪಿಗಳಲ್ಲಿ ಒಬ್ಬನಾಗಿದ್ದ ರಾಮ್‌ ಸಿಂಗ್‌ ತಿಹಾರ್‌ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಮತ್ತೊಬ್ಬ ಆರೋಪಿ ಬಾಲಕನಾಗಿದ್ದುದರಿಂದ ಬಾಲ ನ್ಯಾಯ ಮಂಡಳಿಯು ಆತನನ್ನು ಮೂರು ವರ್ಷ ಮನಪರಿವರ್ತನಾ ಗೃಹಕ್ಕೆ ಕಳುಹಿಸಿತ್ತು. ಈಗ ಆತ ಬಿಡುಗಡೆಯಾಗಿದ್ದಾನೆ.

***
ಇಂತಹ ಹೀನ ಕೃತ್ಯಗಳನ್ನು ಎಸಗಲು ಮುಂದಾಗುವವರು ಈ ಶಿಕ್ಷೆಯನ್ನು ನೋಡಿ ಹಿಂಜರಿಯುತ್ತಾರೆ
ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

***
ಸಮಾಜವು ತನ್ನನ್ನು ತಿದ್ದಿಕೊಳ್ಳುತ್ತದೆ. ಇಂತಹ ಶಿಕ್ಷೆಗಳು ಜಾರಿಯಾಗುವಂತೆ ನೋಡಿಕೊಳ್ಳಬೇಕು
ಶೀಲಾ ದೀಕ್ಷಿತ್‌, ದೆಹಲಿಯ ಮಾಜಿ ಮುಖ್ಯಮಂತ್ರಿ

***
ವಿಳಂಬವಾದರೂ ನ್ಯಾಯ ದೊರೆಯುತ್ತದೆ ಎಂಬುದನ್ನು ಇದು ಸಾಬೀತು ಮಾಡಿದೆ. ದೇಶದಲ್ಲಿ ನ್ಯಾಯದಾನ ಆಗಿಯೇ ಆಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ
ರೇಖಾ ಶರ್ಮಾ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

***
ಈ ನಿರ್ಧಾರ ಇನ್ನೂ ಬೇಗನೆ ಬರಬೇಕಿತ್ತು. ಗಲ್ಲು ಶಿಕ್ಷೆಯನ್ನು ಬೇಗನೆ ಜಾರಿ ಮಾಡಿ ನಿರ್ಭಯಾಗೆ ನ್ಯಾಯ ಒದಗಿಸಬೇಕು
ಸ್ವಾಮಿ ಮಲಿವಾಲ್‌, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !