ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 4 ಸಾವಿರ ಕೋಟಿ ಮಂಜೂರು

ನಿರ್ಭಯಾ ನಿಧಿ: ಮಹಿಳಾ ಸುರಕ್ಷೆ ಯೋಜನೆಗೆ ಹಣ ಬಳಕೆ
Last Updated 26 ಏಪ್ರಿಲ್ 2019, 19:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹಿಳಾ ಸುರಕ್ಷೆಗೆಸಂಬಂಧಿಸಿ ವಿವಿಧ ಯೋಜನೆಗಳನ್ನು ಕೈಗೊಳ್ಳಲು ನಿರ್ಭಯಾ ನಿಧಿ ಅಡಿ ಕೇಂದ್ರ ಸರ್ಕಾರವು ₹ 4 ಸಾವಿರ ಕೋಟಿ ಮಂಜೂರು ಮಾಡಿದೆ.

ಅತ್ಯಾಚಾರ ಮತ್ತು ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಹಣಕಾಸು ನೆರವು ನೀಡುವುದು, ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಪೊಲೀಸ್‌ ಘಟಕಗಳನ್ನು ಸ್ಥಾಪಿಸಲು ಈ ಹಣವನ್ನು ಬಳಸಬೇಕು ಎಂದು ಕೇಂದ್ರ ಹೇಳಿದೆ.

ಗೃಹ ಸಚಿವಾಲಯದ ದಾಖಲೆಯ ಪ್ರಕಾರ, ‘ಸುರಕ್ಷಿತ ನಗರ ಯೋಜನೆ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ₹2,919.55 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆ ಅಡಿಯಲ್ಲಿ ದೇಶದ 8 ನಗರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸುವ ಯೋಜನೆಗಳನ್ನು ಕೈಗೊಳ್ಳಬೇಕು. ಈ ಸೌಲಭ್ಯ ಪಡೆದ ನಗರಗಳ ಪೈಕಿ ದೆಹಲಿ, ಕೋಲ್ಕತಾ, ಮುಂಬೈ, ಚೆನ್ನೈ, ಹೈದರಾಬಾದ್‌, ಬೆಂಗಳೂರು, ಅಹಮದಾಬಾದ್‌ ಮತ್ತು ಲಕ್ನೋ ಸೇರಿವೆ’ ಎಂದು ಹೇಳಿದೆ.

ಕೇಂದ್ರ ಸಂತ್ರಸ್ತರ ಪರಿಹಾರ ನಿಧಿ ಅಡಿ ₹ 200 ಕೋಟಿ ಬಿಡುಗಡೆ ಮಾಡಲಾಗಿದೆ. ಅತ್ಯಾಚಾರ ಸಂತ್ರಸ್ತರು, ಆ್ಯಸಿಡ್‌ ದಾಳಿಗೊಳಗಾದವರಿಗೆ ನೆರವು ನೀಡುವುದು, ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು, ಮಾನವ ಕಳ್ಳ ಸಾಗಣೆಯಂಥ ಪ್ರಕರಣಗಳನ್ನು ನಿರ್ವಹಿಸಲು ಈ ನಿಧಿ ಬಳಸಿಕೊಳ್ಳಬಹುದು ಎಂದು ಸಚಿವಾಲಯ ಹೇಳಿದೆ.

2012ರಲ್ಲಿ ದೆಹಲಿಯಲ್ಲಿ ಸರಣಿ ಅತ್ಯಾಚಾರಕ್ಕೊಳಗಾಗಿ ಯುವತಿ ಸಾವಿಗೀಡಾದ ಹಿನ್ನೆಲೆಯಲ್ಲಿ ಈ ನಿಧಿಗೆ ‘ನಿರ್ಭಯಾ ನಿಧಿ’ ಎಂದು ಹೆಸರಿಡಲಾಗಿದೆ.

ತುರ್ತು ಪ್ರತಿಕ್ರಿಯೆ ಮತ್ತು ಬೆಂಬಲ ವ್ಯವಸ್ಥೆ (ಎಮರ್ಜೆನ್ಸಿ ರೆಸ್ಪಾನ್ಸ್‌ ಸಪೋರ್ಟ್‌ ಸಿಸ್ಟಂ) ಸ್ಥಾಪಿಸಲು ₹ 321.69 ಕೋಟಿ ಬಿಡುಗಡೆ ಮಾಡಲಾಗಿದೆ. ದೇಶದಾದ್ಯಂತ ಒಂದೇ ಸಂಖ್ಯೆಯ ತುರ್ತು ಸಹಾಯವಾಣಿ (112) ಸ್ಥಾಪಿಸಲು ಈ ಹಣ ಬಿಡುಗಡೆಯಾಗಿದೆ.

ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಪೊಲೀಸ್‌ ಘಟಕ ತೆರೆಯಲು ₹ 23.53 ಕೋಟಿ ಮಂಜೂರಾಗಿದೆ. ದೆಹಲಿಯ ಈಶಾನ್ಯ ಭಾಗದ ನಾನಕ್‌ಪುರದಲ್ಲಿ ಈ ಘಟಕ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.

ಚಂಡೀಗಡದ ಕೇಂದ್ರೀಯ ಅಪರಾಧ ವಿಜ್ಞಾನ ಪ್ರಯೋಗಾಲಯದಲ್ಲಿ ಡಿಎನ್‌ಎ ಪ್ರಯೋಗಾಲಯ ₹ 99.76 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇಂಥ ಪ್ರಯೋಗಾಲಯವನ್ನು 12 ರಾಜ್ಯಗಳಲ್ಲಿ ಸ್ಥಾಪಿಸಲು ₹ 131.09 ಕೋಟಿ ಮಂಜೂರಾಗಿದೆ.

ಅಪರಾಧ ತನಿಖೆ, ವಿಚಾರಣೆ ಪ್ರಕ್ರಿಯೆ, ವೈದ್ಯಕೀಯ ಅಧಿಕಾರಿಗಳಿಗೆ ತರಬೇತಿ ಸಂಬಂಧಿಸಿ ₹ 7.09 ಕೋಟಿ ಬಿಡುಗಡೆ ಮಾಡಲಾಗಿದೆ. ದೆಹಲಿಯ ಜಿಲ್ಲೆ ಮತ್ತು ಉಪವಿಭಾಗಗಳಲ್ಲಿ ಆಪ್ತ ಸಮಾಲೋಚಕರು, ಸಾಮಾಜಿಕ ಕಾರ್ಯಕರ್ತರಿಗೆ ಸೌಲಭ್ಯ ಕಲ್ಪಿಸಲು ₹5.07 ಕೋಟಿ ಮಂಜೂರು ಮಾಡಲಾಗಿದೆ ಎಂದು ಸಚಿವಾಲಯದ ದಾಖಲೆಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT