ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಕಾಯಂ: ‘ಸುಪ್ರೀಂ’

7

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಕಾಯಂ: ‘ಸುಪ್ರೀಂ’

Published:
Updated:

ನವದೆಹಲಿ: ಗಲ್ಲು ಶಿಕ್ಷೆ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ‘ನಿರ್ಭಯಾ’ ಪ್ರಕರಣದ ನಾಲ್ವರು ತಪ್ಪಿತಸ್ಥರ ಪೈಕಿ ಮೂವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂ ಆಗಿದೆ. 

ದೆಹಲಿ ಹೈಕೋರ್ಟ್‌ ನೀಡಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ 2017ರ ಮೇ 5ರಂದು ಎತ್ತಿ ಹಿಡಿದಿತ್ತು. ಆ ತೀರ್ಪಿನಲ್ಲಿ ಯಾವುದೇ ಬದಲಾವಣೆ ಅಗತ್ಯ ಇಲ್ಲ ಎಂದು ‘ಸುಪ್ರೀಂ’ ಹೇಳಿದೆ. 2012ರ ಡಿ.16ರಂದು ಅರೆ ವೈದ್ಯಕೀಯ ವಿದ್ಯಾರ್ಥಿನಿ ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಅ‍ಪರಾಧಿಗಳಾದ ಮುಕೇಶ್‌ (29), ಪವನ್‌ ಗುಪ್ತಾ (22) ಮತ್ತು ವಿನಯ್‌ ಶರ್ಮಾ (23) ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾಧ ಆರ್‌. ಭಾನುಮತಿ ಹಾಗೂ ಅಶೋಕ್‌ ಭೂಷಣ್‌ ಅವರ ಪೀಠ ತಿರಸ್ಕರಿಸಿತು.

ತೀರ್ಪು ಮರುಪರಿಶೀಲನೆಗೆ ಅರ್ಹವಾದ ಯಾವುದೇ ಅಂಶವನ್ನು ಅರ್ಜಿಯಲ್ಲಿ ಪ್ರಸ್ತಾಪಿಸಿಲ್ಲ. ತೀರ್ಪಿನಲ್ಲಿ ಲೋಪವಾಗಿದೆ ಎಂಬುದನ್ನು ಸಾಬೀತು ಮಾಡುವುದರಲ್ಲಿಯೂ ಯಶಸ್ವಿಯಾಗಿಲ್ಲ ಎಂದು ಪೀಠ ತಿಳಿಸಿದೆ.

ಮತ್ತೊಬ್ಬ ಅಪರಾಧಿ ಅಕ್ಷಯ್‌ ಕುಮಾರ್‌ ಸಿಂಗ್‌(31) ಮರುಪರಿಶೀಲನಾ ಅರ್ಜಿ ಸಲ್ಲಿಸಿರಲಿಲ್ಲ. ಮರಣದಂಡನೆ ಶಿಕ್ಷೆಗೆ ಅನುಭವಿಸುತ್ತಿರುವ ಅಪರಾಧಿಗಳಿಗೆ ರಾಷ್ಟ್ರಪತಿಗಳಿಗೆ ದಯೆ ಅರ್ಜಿ ಸಲ್ಲಿಸುವ ಹಾಗೂ ಕ್ಯುರೇಟಿವ್‌ ಮನವಿ ಮಾಡುವ ಆಯ್ಕೆಗಳು ಉಳಿದಿವೆ. 

ಈ ನಾಲ್ವರಿಗೆ ದೆಹಲಿಗೆ ಹೈಕೋರ್ಟ್‌ 2014ರಂದು ಮರಣದಂಡನೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿಗಳು ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ದೆಹಲಿ ಹೈಕೋರ್ಟ್‌ ತೀರ್ಪನ್ನು 2017ರಲ್ಲಿ  ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು.

2012ರ ಡಿಸೆಂಬರ್ 16ರಂದು 23 ವರ್ಷ ವಯಸ್ಸಿನ ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿ ಮೇಲೆ ಚಲಿಸುವ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಡಿಸೆಂಬರ್ 29ರಂದು ವಿದ್ಯಾರ್ಥಿನಿ ಮೃತಪಟ್ಟಿದ್ದಳು. 

ಪ್ರಕರಣದ ಪ್ರಮುಖ ಆರೋಪಿ ರಾಮ್‌ ಸಿಂಗ್‌ 2013ರ ಮಾರ್ಚ್‌ನಲ್ಲಿ ತಿಹಾರ್ ಜೈಲಿನಲ್ಲಿ ಮೃತಪಟ್ಟಿದ್ದಾನೆ. 

* ನ್ಯಾಯಾಲಯದಿಂದ ನ್ಯಾಯ ಸಿಗುತ್ತದೆ ಎಂಬ ನಮ್ಮ ನಂಬಿಕೆಯನ್ನು ಈ ಆದೇಶ ಮತ್ತೆ ದೃಢೀಕರಿಸಿದೆ. 
–ಆಶಾ ದೇವಿ, ಅತ್ಯಾಚಾರ ಸಂತ್ರಸ್ತೆಯ ತಾಯಿ 

ಬರಹ ಇಷ್ಟವಾಯಿತೆ?

 • 19

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !