ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನಂದನ್‌ ಭೇಟಿಯಾದ ನಿರ್ಮಲಾ ಸೀತಾರಾಮನ್‌; ಮಾರ್ಚ್‌ 3ರ ವರೆಗೂ ಆರೋಗ್ಯ ತಪಾಸಣೆ

Last Updated 2 ಮಾರ್ಚ್ 2019, 14:31 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನ ವಶದಿಂದ ಭಾರತಕ್ಕೆ ಮರಳಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್ ಅವರನ್ನು ಶನಿವಾರ ಭೇಟಿಯಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ’ನಿಮ್ಮ ಧೈರ್ಯ ಮತ್ತು ದಿಟ್ಟತನಕ್ಕೆ ಇಡೀ ರಾಷ್ಟ್ರ ಹೆಮ್ಮೆಪಡುತ್ತದೆ’ ಎಂದು ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ವಾಯುಪಡೆಯ ವೈದ್ಯಕೀಯ ಚಿಕಿತ್ಸಾ ಕೇಂದ್ರದಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಭೇಟಿಯಾಗಿ ಮಾತುಕತೆ ನಡೆಸಿದರು. ಪಾಕಿಸ್ತಾನದದಲ್ಲಿ ಕಳೆದ 60 ಗಂಟೆಗಳ ಅನುಭವ, ಆಗುಹೋಗುಗಳನ್ನು ಅಭಿನಂದನ್‌ ವಿವರಿಸಿರುವುದಾಗಿ ತಿಳಿದುಬಂದಿದೆ.

ಮಾರ್ಚ್‌ 1ರಂದು ಪಾಕಿಸ್ತಾನದಿಂದ ಅಟ್ಟಾರಿ–ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ್ದ ಅಭಿನಂದನ್‌ ಅವರನ್ನು ರಾತ್ರಿಯೇ ದೆಹಲಿಗೆ ಕರೆತರಲಾಗಿತ್ತು. ಉದ್ವೇಗ ಶಮನಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಹಲವು ವೈದ್ಯಕೀಯ‍ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್‌ 2ರಂದು ಅವರು ಕುಟುಂಬ ಸದಸ್ಯರನ್ನು ಹಾಗೂ ಭಾರತೀಯ ವಾಯು ಪಡೆಯ ಉನ್ನತ ದರ್ಜೆಯ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ.

ಮಾರ್ಚ್‌ 3ರ ವರೆಗೂ ಅಭಿನಂದನ್‌ ಅವರಿಗೆ ಉದ್ವೇಗ ಶಮನಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಚಿಕಿತ್ಸೆ ಹಾಗೂ ತಪಾಸಣೆಗಳು ಮುಂದುವರಿಯಲಿವೆ. ಆರೋಗ್ಯ ತಪಾಸಣೆಯ ಹಂತ ಪೂರ್ಣಗೊಂಡ ಬಳಿಕ, ಕಾರ್ಯಾಚರಣೆ ಮತ್ತು ನಡೆದ ಘಟನೆಗಳ ಕುರಿತಾಗಿ ಪ್ರಶ್ನಿಸಲಾಗುತ್ತದೆ ಎನ್ನಲಾಗಿದೆ. ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ದಿನ ಅವರ ಬಲಗಣ್ಣಿನ ಮೇಲ್ಭಾಗದಲ್ಲಿ ಊತ ಕಂಡು ಬಂದಿತ್ತು.

ಅಭಿನಂದನ್‌ ಮಾರ್ಚ್‌ 1ರ ರಾತ್ರಿ 11:45ಕ್ಕೆ ದೆಹಲಿಗೆ ತಲುಪಿದ್ದು, ಕೂಡಲೇ ವಾಯುಪಡೆಯ ವೈದ್ಯಕೀಯ ಕೇಂದ್ರ(ಎಎಫ್‌ಸಿಎಂಇ)ಕ್ಕೆ ಕರೆತಂದು ಚಿಕಿತ್ಸೆ, ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಪಾಕಿಸ್ತಾನ ಯುದ್ಧ ವಿಮಾನದೊಂದಿಗೆ ಕದನದಲ್ಲಿ ಮಿಗ್‌ 21 ಬೈಸನ್‌ ವಿಮಾನ ಪತನಗೊಳ್ಳುವ ಮೂಲಕ ಫೆ.27ರಂದು ಪಾಕಿಸ್ತಾನ ಸೇನೆಯ ವಶಕ್ಕೆ ಸಿಲುಕಿದ್ದರು. ಅಭಿನಂದನ್ ಕೆಳಗೆ ಜಿಗಿಯುವುದಕ್ಕೂ ಮುನ್ನ ಪಾಕಿಸ್ತಾನದ ಎಫ್‌–16 ವಿಮಾನವನ್ನು ಪತನಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT