ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷಾದ್ ಸಮುದಾಯದ ಒಲವು ಯಾರ ಕಡೆ?

ಉತ್ತರ ಪ್ರದೇಶದ 10ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಭಾವ
Last Updated 4 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಬೇರಾವ ಸಮುದಾಯಕ್ಕೂ ಸಿಗದಷ್ಟು ಮಾನ್ಯತೆ ಈ ಬಾರಿಯ ಚುನಾವಣೆಯಲ್ಲಿ ನಿಷಾದ್ ಸಮುದಾಯಕ್ಕೆ (ಮೀನುಗಾರರು) ಸಿಕ್ಕಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತವರು ಗೋರಖಪುರ ಸೇರಿದಂತೆ 10ಕ್ಕೂ ಲೋಕಸಭಾ ಮತಕ್ಷೇತ್ರಗಳಲ್ಲಿ ಈ ಸಮುದಾಯದವರು ಹರಡಿದ್ದು, ಶೇ 12ರಷ್ಟು ಮತದಾರರಿದ್ದಾರೆ.

ನಿಷಾದ್‌ ಸಮುದಾಯದ ಮತಗಳನ್ನು ಪಡೆಯುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಬಿಎಸ್‌ಪಿ–ಎಸ್‌ಪಿ–ಆರ್‌ಎಲ್‌ಡಿ ಮಹಾಮೈತ್ರಿಕೂಟವು ಆ ಸಮುದಾಯದ ಮನವೊಲಿಕೆ ಮಾಡಬಹುದು ಎಂಬ ಚಿತ್ರಣ ಆರಂಭದಲ್ಲಿ ಇತ್ತು.

ಇದಕ್ಕೆಲ್ಲಾ ಕಾರಣ ಪ್ರವೀಣ್ ನಿಷಾದ್. ಕಳೆದ ವರ್ಷ ನಡೆದ ಗೋರಖಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ
ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದವರು ಇದೇ ನಿಷಾದ್.

ಪ್ರವೀಣ್ ಅವರ ತಂದೆ ಸಂಜಯ್ ನಿಷಾದ್ ಅವರು ‘ನಿಷಾದ್ ಪಕ್ಷ’ದ ಮುಖ್ಯಸ್ಥರು. ಪ್ರವೀಣ್ ಈ ಬಾರಿಯೂ ಗೋರಖಪುರದಿಂದ ಮರು ಆಯ್ಕೆ ಬಯಸಿದ್ದರು. ಮಹಾಮೈತ್ರಿಕೂಟವನ್ನು ಸೇರಿರುವ ನಿಷಾದ್ ಪಕ್ಷಕ್ಕೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಒಂದು ಲೋಕಸಭಾ ಸ್ಥಾವನನ್ನೂ ನೀಡಿದ್ದರು.

ಈ ಬೆಳವಣಿಗೆಯನ್ನು ಮನಗಂಡ ಬಿಜೆಪಿ, ಸಂಜಯ್ ನಿಷಾದ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಯಿತು. ಮಹಾಮೈತ್ರಿಕೂಟವನ್ನು ತೊರೆದ ನಿಷಾದ್ ಪಕ್ಷ, ಗುರುವಾರ ಎನ್‌ಡಿಎ ತೆಕ್ಕೆಗೆ ಸೇರಿತು.

ಆದರೆ ಇದರಿಂದ ವಿಚಲಿತರಾಗದ ಅಖಿಲೇಶ್, ಬಿಜೆಪಿಗೆ ತಿರುಗೇಟು ನೀಡಿದ್ದಾರೆ, ನಿಷಾದ್ ಸಮುದಾಯದ ಮತ್ತೊಬ್ಬ ಪ್ರಭಾವಿ ವ್ಯಕ್ತಿ ಜಮುನಾ ನಿಷಾದ್ ಅವರ ಹೆಸರನ್ನು ಗೋರಖಪುರ ಕ್ಷೇತ್ರದ ಉಮೇದುವಾರರನ್ನಾಗಿ ಘೋಷಿಸುವ ಮೂಲಕ ಸಡ್ಡು ಹೊಡೆದಿದ್ದಾರೆ.

ಉತ್ತರ ಪ್ರದೇಶದ ಬಲಿಯಾ, ಭದೋಯಿ, ಗೋರಖಪುರ, ಗಾಜಿಪುರ, ಮೀರಜ್‌ಪುರ, ವಾರಾಣಸಿ, ಅಲಹಾಬಾದ್, ಫತೇಪುರ
ಕ್ಷೇತ್ರಗಳಲ್ಲಿ ಈ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಡಕಾಯಿತರ ರಾಣಿ ಎನಿಸಿಕೊಂಡಿದ್ದ ಪೂಲನ್‌ದೇವಿ ಅವರು ನಿಷಾದ್‌ ಸಮುದಾಯಕ್ಕೆ ಸೇರಿದವರು. ಸಮುದಾಯದ ಬಲದಿಂದಾಗಿ ಅವರು ಎರಡು ಬಾರಿ ಲೋಕಸಭಾ ಸದಸ್ಯರಾಗಿ ಗೆದ್ದು ಬಂದಿದ್ದರು.

ಮಹಾಮೈತ್ರಿಕೂಟದ ನಿಷಾದ್ ಮತ್ತು ಬಿಜೆಪಿಯ ನಿಷಾದ್ ಮಧ್ಯೆ ಹಣಾಹಣಿಗೆ ಈಗ ವೇದಿಕೆ ಸಿದ್ಧವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಜೆ.ಪಿ. ಶುಕ್ಲಾ. ಈ ಸಮುದಾಯದ ಮತಗಳು ಬಿಜೆಪಿ ಹಾಗೂ ಮೈತ್ರಿಕೂಟದ ನಡುವೆ ವಿಭಜನೆಯಾಗಲಿವೆ ಎಂಬುದು ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT