‘ಅಧಿಕಾರಕ್ಕೇರುವ ವಿಶ್ವಾಸವಿಲ್ಲದೆ ಸುಳ್ಳು ಭರವಸೆ’: ಹೇಳಿಕೆಗೆ ಗಡ್ಕರಿ ಸ್ಪಷ್ಟನೆ

7

‘ಅಧಿಕಾರಕ್ಕೇರುವ ವಿಶ್ವಾಸವಿಲ್ಲದೆ ಸುಳ್ಳು ಭರವಸೆ’: ಹೇಳಿಕೆಗೆ ಗಡ್ಕರಿ ಸ್ಪಷ್ಟನೆ

Published:
Updated:

ಮುಂಬೈ: ಅಧಿಕಾರಕ್ಕೇರುವ ವಿಶ್ವಾಸವಿಲ್ಲದೆ ​ಸುಳ್ಳು ಭರವಸೆಗಳನ್ನು ನೀಡಿದ್ದೆವು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಬಿಜೆಪಿ ಹಿರಿಯ ಮುಖಂಡ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಮರಾಠಿ ವಾಹಿನಿಯೊಂದು ಕೆಲವು ದಿನಗಳ ಹಿಂದೆ ಗಡ್ಕರಿ ಅವರ ಸಂದರ್ಶನ ನಡೆಸಿತ್ತು. ಅದರಲ್ಲಿ ಗಡ್ಕರಿ, ‘ನಾವು ಅಧಿಕಾರಕ್ಕೆ ಬರುವುದಿಲ್ಲ ಎಂಬ ವಿಶ್ವಾಸವಿತ್ತು. ಹಾಗಾಗಿಯೇ ದೊಡ್ಡ ಭರವಸೆಗಳನ್ನು ನೀಡುವಂತೆ ನಮ್ಮವರು ಸಲಹೆ ನೀಡಿದ್ದರು. ಇದೀಗ ನಾವು ಅಧಿಕಾರದಲ್ಲಿದ್ದೇವೆ. ನಾವು ನೀಡಿದ್ದ ಭರವಸೆಗಳನ್ನು ಜನರು ನೆನಪಿಸಿದರೆ, ಸುಮ್ಮನೆ ನಕ್ಕು ಮುಂದಕ್ಕೆ ಸಾಗುತ್ತೇವೆ’ ಎಂದು ಹೇಳಿಕೆ ನೀಡಿದ್ದರು.

ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ಸಿಗರು, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಜೊತೆಗೆ ‘ಬಿಜೆಪಿ ಸರ್ಕಾರವು ಸುಳ್ಳು ಮತ್ತು ಖಾಲಿ ಭರವಸೆಗಳ ಮೇಲೆ ರಚನೆಯಾಗಿದೆ ಎಂಬುದನ್ನು ಗಡ್ಕರಿ ಒಪ್ಪಿಕೊಂಡಿದ್ದಾರೆ’ ಎಂದು ಟೀಕಿಸಿದ್ದರು.

ವಿಡಿಯೊ ಹಂಚಿಕೊಂಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ‘ನೀವು ಹೇಳಿರುವುದು ಸರಿ. ಪಕ್ಷದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಜನರ ನಿರೀಕ್ಷೆ ಮತ್ತು ನಂಬಿಕೆಗಳನ್ನು ಬಳಸಿಕೊಂಡಿರುವುದರ ಬಗ್ಗೆ ಅವರೂ(ಜನರೂ) ಚಿಂತಿಸಲು ಆರಂಭಿಸಿದ್ದಾರೆ’ ಎಂದು ಕಾಲೆಳೆದಿದ್ದರು.

ಈ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು.

ಬಳಿಕ ಎಚ್ಚೆತ್ತುಕೊಂಡು ಮಾಧ್ಯಮಗಳ ವರದಿಗೆ ಸ್ಪಷ್ಟನೆ ನೀಡಿರುವ ಗಡ್ಕರಿಯವರು, ’ದೆಹಲಿ ಮೂಲದ ಇಂಗ್ಲಿಷ್‌ ಪತ್ರಿಕೆಯೊಂದು ನನ್ನ ಹೇಳಿಕೆಯನ್ನು ತಿರುಚಿದೆ. ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನಾಗಲೀ ಅಥವಾ ₹15 ಲಕ್ಷ ಭರವಸೆಯ ವಿಚಾರವನ್ನಾಗಲೀ ಮಾತಾನಾಡಿಲ್ಲ. ಇದೊಂದು ಸಂಪೂರ್ಣ ಸುಳ್ಳು ವರದಿಯಾಗಿದೆ’ ಎಂದಿದ್ದಾರೆ.

‘ಕಾರ್ಯಕ್ರಮವು ಮರಾಠಿಯಲ್ಲಿದೆ. ಸಂದರ್ಶನದ ನಿಜವಾದ ವಿಡಿಯೊವನ್ನು ನೋಡಿ ನನ್ನ ಹೇಳಿಕೆಯ ದಾಟಿಯನ್ನು ಅರ್ಥಮಾಡಿಕೊಳ್ಳುವಂತೆ ಎಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದಿರುವ ಗಡ್ಕರಿ, ‘ಮರಾಠಿ ಭಾಷೆಯನ್ನು ರಾಹುಲ್‌ ಗಾಂಧಿ ಅವರು ಯಾವಾಗಿನಿಂದ ಅರ್ಥಮಾಡಿಕೊಳ್ಳಲು ಆರಂಭಿಸಿದರು ಎಂಬ ಬಗ್ಗೆ ಆಶ್ಚರ್ಯ ಚಕಿತನಾಗಿದ್ದೇನೆ’ ಎಂದೂ ವ್ಯಂಗ್ಯವಾಡಿದ್ದಾರೆ.

ಜೊತೆಗೆ, ‘ಮರಾಠಿ ಭಾಷೆಯನ್ನು ಕಲಿಯುವಂತೆ ಮತ್ತು ಅರ್ಥಮಾಡಿಕೊಳ್ಳದ ಹೊರತು ಟ್ವಿಟರ್‌ನಲ್ಲಿ ಏನನ್ನೂ ಬರೆಯದಂತೆ ರಾಹುಲ್‌ ಗಾಂಧಿಯವರಲ್ಲಿಯೂ ಮನವಿ ಮಾಡಿಕೊಳ್ಳಲು ಬಯಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಏಳೆಂಟು ದಿನಗಳ ಹಿಂದೆ ಸಂದರ್ಶನದ ಸಲುವಾಗಿ ಮರಾಠಿ ವಾಹಿನಿಯೊಂದರ ಕಚೇರಿಗೆ ಹೋಗಿದ್ದೆ. ಆ ವೇಳೆ, ‘ಮಹರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ದೇವೇಂದ್ರ ಫಡಣವೀಸ್‌ ಹಾಗೂ ಗೋಪಿನಾಥ ಮುಂಡೆ ಅವರು ಚುನಾವಣಾ ಪ್ರಣಾಳಿಕೆ ವಿಚಾರವಾಗಿ ಚರ್ಚೆ ನಡೆಸುತ್ತಿದ್ದರು. ಆ ವೇಳೆ, ಹೆಚ್ಚಿನ ಭರವಸೆಗಳನ್ನು ನೀಡಿದರೆ ಅವುಗಳನ್ನು ಕಾರ್ಯರೂಪಕ್ಕೆ ತರಲು ಕಷ್ಟವಾಗಬಹುದು ಎಂದಿದ್ದೆ. ಹೆಚ್ಚಿನ ಕಾಲ ನಾವು ವಿರೋಧ ಪಕ್ಷವಾಗಿಯೇ ಉಳಿದಿರುವುದರಿಂದ ಆಡಳಿತದ ಹೆಚ್ಚು ಅನುಭವವಿಲ್ಲ. ಹೀಗಾಗಿ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಪ್ರಸ್ತಾಪಿಸಿದ್ದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 3

  Sad
 • 1

  Frustrated
 • 1

  Angry

Comments:

0 comments

Write the first review for this !