ಬುಧವಾರ, ಸೆಪ್ಟೆಂಬರ್ 18, 2019
25 °C

ಪೆಟ್ರೋಲ್, ಡೀಸೆಲ್‌ ವಾಹನ ನಿಷೇಧ ಇಲ್ಲ: ಗಡ್ಕರಿ ಸ್ಪಷ್ಟನೆ

Published:
Updated:

ನವದೆಹಲಿ: ‘ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಚಾಲಿತ ವಾಹನಗಳನ್ನು ನಿಷೇಧಿಸುವ ಯಾವುದೇ ಆಲೋಚನೆ ಕೇಂದ್ರ ಸರ್ಕಾರಕ್ಕೆ ಇಲ್ಲ’ ಎಂದು  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ವಿದ್ಯುತ್‌ ಚಾಲಿತ ವಾಹನಗಳ (ಇವಿ) ತಯಾರಿಕೆಗೆ ಉತ್ತೇಜನ ದೊರೆಯುತ್ತಿರುವುದರಿಂದ ಪೆಟ್ರೋಲ್‌ ಮತ್ತು ಡೀಸೆಲ್ ವಾಹ
ನಗಳು ನಿಷೇಧವಾಗುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ಸರ್ಕಾರ ಅಂತಹ ಯಾವುದೇ ಯೋಚನೆಯನ್ನು ಹೊಂದಿಲ್ಲ’ ಎಂದಿದ್ದಾರೆ.

‘ಮಾರಾಟ ಕುಸಿತ ಎದುರಿಸುತ್ತಿರುವ ವಾಹನ ಉದ್ಯಮದ ಚೇತರಿಕೆಗೆ, ಜಿಎಸ್‌ಟಿ ತಗ್ಗಿಸುವುದನ್ನೂ ಒಳಗೊಂಡು ಅಗತ್ಯವಾದ ಎಲ್ಲಾ
ರೀತಿಯ ಬೆಂಬಲವನ್ನೂ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟದ (ಎಸ್‌ಐಎಎಂ) ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ‘ಪೆಟ್ರೋಲ್‌ ಮತ್ತು ಡೀಸೆಲ್‌ ವಾಹನಗಳ ಮೇಲಿನ ತೆರಿಗೆಯನ್ನು ತಗ್ಗಿಸಬೇಕು ಎನ್ನುವುದು ಉದ್ಯಮದ ಬೇಡಿಕೆಯಾಗಿದೆ. ಇದನ್ನು ಹಣಕಾಸು ಸಚಿವರ ಗಮನಕ್ಕೆ ತರಲಾಗುವುದು.

ಇದನ್ನೂ ಓದಿ:  ಆರ್ಥಿಕ ಕುಸಿತ: ಅರ್ಧಕ್ಕಿಳಿದ ವಾಹನ ಮಾರಾಟ

ರಸ್ತೆ ನಿರ್ಮಾಣ: ‘ಇವಿ ಮೇಲಿನ ಜಿಎಸ್‌ಟಿಯನ್ನು ಶೇ 12 ರಿಂದ ಶೇ 5ಕ್ಕೆ ಇಳಿಸಿರುವುದು ಉತ್ತಮ ನಿರ್ಧಾರ. ಇದೇ ರೀತಿಯಲ್ಲಿ ಹೈಬ್ರಿಡ್‌ ವಾಹನಗಳ ತೆರಿಗೆಯನ್ನೂ ತಗ್ಗಿಸುವಂತೆ ಪ್ರಸ್ತಾಪಿಸುತ್ತೇನೆ. ವಾಣಿಜ್ಯ ವಾಹನಗಳಿಗೆ ಬೇಡಿಕೆ ಸೃಷ್ಟಿಸಲು ಸಚಿವಾಲಯವು ಮುಂದಿನ ಮೂರು ವರ್ಷಗಳಲ್ಲಿ ₹ 5 ಲಕ್ಷ ಕೋಟಿ ಮೌಲ್ಯದ 68 ರಸ್ತೆ ನಿರ್ಮಾಣ ಯೋಜನೆಗಳನ್ನು ಜಾರಿಗೊಳಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ದೇಶಿ ಮಾರಾಟ ಕುಸಿತ ಎದುರಿಸುತ್ತಿರುವುದರಿಂದ ರಫ್ತು ವಹಿವಾಟಿಗೆ ಹೆಚ್ಚಿನ ಗಮನ ನೀಡುವಂತೆ’ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಉದಯ್‌ ಕೋಟಕ್‌ ಅವರು ವಾಹನ ತಯಾರಕರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆರ್ಥಿಕ ಹಿಂಜರಿತ: ವಾಣಿಜ್ಯ ವಾಹನ ಮಾರಾಟ ಭಾರಿ ಕುಸಿತ

ಭಾರಿ ದಂಡ: ಸಮರ್ಥನೆ

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಭಾರಿ ದಂಡ ವಿಧಿಸುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಗಡ್ಕರಿ ಸಮರ್ಥಿಸಿಕೊಂಡಿದ್ದಾರೆ.

‘ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಗಿದೆ. ಹೆಚ್ಚಿನ ದಂಡ ಸಂಗ್ರಹಿಸಲೆಂದೇ ಈ ನಿಯಮ ತರಲಾಗಿದೆ ಎನ್ನುವ ತಪ್ಪು ಭಾವನೆ ಜನರಲ್ಲಿದೆ. ಆದರೆ, ಜನರು ಸಂಚಾರ  ನಿಯಮಗಳನ್ನು ಗಂಭೀರವಾಗಿ ಪರಿಗಣಿಸಿ, ನಿಯಮ ಉಲ್ಲಂಘಿಸದೇ ಇರಲಿ ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ವಾಹನ ವಲಯದ ಷೇರುಗಳ ಜಿಗಿತ

ವಾಹನ ಉದ್ಯಮಕ್ಕೆ ಬೆಂಬಲ ನೀಡಲು ಸಿದ್ಧವಿರುವುದಾಗಿ ಗಡ್ಕರಿ ಹೇಳಿಕೆ ನೀಡಿರುವುದರಿಂದ ಷೇರುಪೇಟೆಯಲ್ಲಿ ವಾಹನ ವಲಯದ ಷೇರುಗಳು ಗುರುವಾರ ಶೇ 7.8ರವರೆಗೂ ಜಿಗಿತ ಕಂಡವು.

 

Post Comments (+)