ಗುರುವಾರ , ಡಿಸೆಂಬರ್ 3, 2020
20 °C

ಬಿಹಾರಕ್ಕೆ ವಿಶೇಷ ಸ್ಥಾನಮಾನ ಬೇಡಿಕೆ: ಚುನಾವಣೆ ಮುನ್ನ ನಿತೀಶ್‌ ಪುನರುಚ್ಚಾರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪಾಟ್ನ: ಬಿಹಾರ ‘ವಿಶೇಷ ಸ್ಥಾನಮಾನ’ಕ್ಕೆ ಅರ್ಹವಾಗಿದೆ ಎಂದು ಪ್ರತಿಪಾದಿಸಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಹಾರಕ್ಕೆ ‘ಹೆಚ್ಚುವರಿ ಸಹಾಯ’ ಒದಗಿಸಬೇಕು ಎಂದು ಪುನರುಚ್ಚರಿಸಿದ್ದಾರೆ.

ವಿಶೇಷ ಸ್ಥಾನಮಾನದ ತಮ್ಮ ಬೇಡಿಕೆಯನ್ನು ಜೆಡಿ(ಯು)ನ ನಾಯಕರೂ ಆಗಿರುವ ನಿತೀಶ್‌ ಕುಮಾರ್‌ ಸಮರ್ಥಿಸಿಕೊಂಡಿದ್ದಾರೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬಹು ವರ್ಷಗಳ ಬೇಡಿಕೆಯನ್ನು ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮತ್ತೆ ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.

ಇದರ ಜತೆಗೆ, ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಜತೆ ನಿತೀಶ್‌ ಕುಮಾರ್‌ ಮಾತುಕತೆ ನಡೆಸಿದ್ದಾರೆ. ಇದು ರಾಜಕಾರಣದ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.

ಈ ಹಿಂದೆ 15ನೇ ಹಣಕಾಸು ಆಯೋಗದಲ್ಲಿ ವಿಶೇಷ ಸ್ಥಾನ ನೀಡುವಂತೆ ಕೋರಲಾಗಿತ್ತು. ‘ವಿಶೇಷ ಸ್ಥಾನಮಾನ‘ದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದಾಗ ಹೆಚ್ಚಿನ ಅನುಕೂಲಗಳು ರಾಜ್ಯಕ್ಕೆ ಸಿಗುತ್ತವೆ. ಕೇಂದ್ರ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಅನುದಾನ ಲಭ್ಯವಾಗುತ್ತದೆ.

ಸೋಮವಾರ ‘ಲೋಕ್‌ ಸಂವಾದ’ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್‌ ಕುಮಾರ್‌, ಬಿಹಾರ ಸಮುದ್ರ ಸಂಪರ್ಕವಿಲ್ಲದ, ಭೂ ಸಾರಿಗೆಯನ್ನೇ ಅವಲಂಭಿಸಿರುವ ರಾಜ್ಯ. ಇಲ್ಲಿಗೆ ಬರುವ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ನೀಡದೇ ಇದ್ದರೆ ಆಸಕ್ತಿ ತೋರುವುದಿಲ್ಲ. ತೆರಿಗೆ ವಿನಾಯ್ತಿ ನೀಡಬೇಕಿರುವುದರಿಂದ ವಿಶೇಷ ನೆರವಿನ ಅಗತ್ಯವಿದೆ ಎಂದು ಹೇಳಿದ್ದಾರೆ.

‘ವಿಶೇಷ ಸ್ಥಾನಮಾನ’ದ ತಮ್ಮ ಬೇಡಿಕೆಯನ್ನು ಸಮರ್ಥಿಸಿಕೊಂಡ ನಿತೀಶ್‌ ಕುಮಾರ್‌, ನೇಪಾಳದಲ್ಲಿ ಹುಟ್ಟುವ ನದಿಗಳು ಉಂಟುಮಾಡುವ ಪ್ರವಾಹಕ್ಕೆ ಪ್ರತಿ ವರ್ಷ ಬಿಹಾರ ಸಂಕಷ್ಟ ಎದುರಿಸುತ್ತದೆ. ಜಾರ್ಖಾಂಡ್‌ ಮತ್ತು ಉತ್ತರ ಬಿಹಾರ ನೈಸರ್ಗಿಕ ಸಂಪತ್ತಿನಿಂದ ವಂಚಿತವಾಗಿವೆ. ಆದ್ದರಿಂದ, ನೆರವು ಬೇಕು ಎಂದಿದ್ದಾರೆ.

ಆಂಧ್ರ ಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಿಗೆ ವಿಶೇಷ ಸ್ಥಾನ ಕಲ್ಪಿಸಬೇಕು ಎಂಬ ಬೇಡಿಕೆ 14ನೇ ಹಣಕಾಸು ಆಯೋಗದಲ್ಲಿ ಈಡೇರಲಿದೆ ಎಂಬ ಭವರಸೆ ಕೈಗೂಡಲಿಲ್ಲ.

‌‌ವಿಶೇಷ ಪ್ಯಾಕೇಜ್‌ ಕೇಳಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿತೀಶ್‌ ಕುಮಾರ್, ಕೇಂದ್ರ ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದೆ. ಆದರೆ, ಬಿಹಾರದ ಅಭಿವೃದ್ಧಿಯೊಂದು ಸಂಕೀರ್ಣವಾದುದಾಗಿದೆ. ಆದ್ದರಿಂದ, ವಿಶೇಷ ಸ್ಥಾನಮಾನದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತ ಬೇಡಿಕೆಯನ್ನು ಮುಂದುವರಿಸಿರುವ ನಿತೀಶ್‌ ಕುಮಾರ್‌, ಇದಕ್ಕಾಗಿ 2012ರ ಅಕ್ಟೋಬರ್‌ನಲ್ಲಿ ಪಾಟ್ನಾದಲ್ಲಿ ಬೆಂಬಲಿಗರೊಂದಿಗೆ ಬೇಡಿಕೆ ಇಟ್ಟಿದ್ದರು. ಇದೇ ವಿಷಯಕ್ಕಾಗಿ 2013ರ ಮಾರ್ಚ್‌ನಲ್ಲಿ ದೆಯಲಿಯಲ್ಲಿಯೂ ಒತ್ತಾಯ ಮಾಡಿದ್ದರು.

ಪ್ರಸ್ತುತ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ನಿತೀಶ್ ಕುಮಾರ್‌ ಈ ಬೇಡಿಕೆ ಇಟ್ಟಿರುವುದು, ಅದಕ್ಕೆ ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದರ ಮೇಲೆ ಮುಂದಿನ ರಾಜಕೀಯ ನಡೆ ತಿರುವು ಪಡೆದುಕೊಳ್ಳಲಿದೆ ಎಂಬುದು ರಾಜಕೀಯ ವಿಶ್ಲೇಷಣೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು