ನಿತೀಶ್‌ ಭಿನ್ನರಾಗ: ಎನ್‌ಡಿಎಗೆ ಆತಂಕ

7

ನಿತೀಶ್‌ ಭಿನ್ನರಾಗ: ಎನ್‌ಡಿಎಗೆ ಆತಂಕ

Published:
Updated:

ಪಟ್ನಾ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರಗಳ ವಿರುದ್ಧ ಧ್ವನಿ ಎತ್ತಿರುವ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್‌ ಕುಮಾರ್‌ ಮತ್ತೆ ಎನ್‌ಡಿಎದಿಂದ ಹೊರ ಬರುತ್ತಾರೆಯೇ?

ಲೋಕಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗ ಇಂಥದೊಂದು ಸುದ್ದಿ  ಬಿಹಾರ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಪೌರತ್ವ ಮಸೂದೆ, ತ್ರಿವಳಿ ತಲಾಖ್‌ ನಿಷೇಧ ವಿಷಯದಲ್ಲಿ ನಿತೀಶ್‌ ರಾಜಕೀಯ ನಡೆ ಇಂಥದ್ದೊಂದು ಊಹಾಪೋಹಕ್ಕೆ ಕಾರಣವಾಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಸಂವಿಧಾನದ ಏಕರೂಪ ನಾಗರಿಕ ಸಂಹಿತೆ ಮತ್ತು 370ನೇ ವಿಧಿ ವಿಷಯದಲ್ಲೂ ಅವರು ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ.

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ನಿತೀಶ್‌ ಎರಡು ದಿನಗಳ ಹಿಂದೆ ಧ್ವನಿ ಎತ್ತಿದ್ದಾರೆ. ಅಸ್ಸಾಂ ಮೂಲನಿವಾಸಿಗಳ ಭಾಷೆ ಮತ್ತು ಸಂಸ್ಕೃತಿಗೆ ವಿವಾದಿತ ಪೌರತ್ವ ಮಸೂದೆ ಧಕ್ಕೆ ತರಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಜತೆ ಇತ್ತೀಚೆಗೆ ನಂಟು ಕಡಿದುಕೊಂಡಿರುವ ಅಸ್ಸಾಂ ಗಣ ಪರಿಷತ್‌ಗೆ (ಎಜಿಪಿ) ಬೆಂಬಲವಾಗಿ ಅಸ್ಸಾಂಗೆ ಜೆಡಿಯು ನಿಯೋಗವನ್ನು ಕಳಿಸುತ್ತಿದ್ದಾರೆ.

‘ಒಂದು ನಿರ್ದಿಷ್ಟ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅದಕ್ಕೆ ಸಂಬಂಧಿಸಿದ ಕಾನೂನು ತಿದ್ದುಪಡಿ ಮಾಡುವುದು ಸರಿಯಲ್ಲ’ ಎಂದು ಅವರು ತ್ರಿವಳಿ ತಲಾಖ್‌ ನಿಷೇಧ ಮಸೂದೆಗೆ ಅಪಸ್ವರ ತೆಗೆದಿದ್ದಾರೆ.

ಲೋಕಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಜತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿರುವ ನಿತೀಶ್‌ ಹಾಡುತ್ತಿರುವ ಭಿನ್ನರಾಗ ಮಿತ್ರಪಕ್ಷ ಬಿಜೆಪಿಗೆ ಪರೋಕ್ಷ ಎಚ್ಚರಿಕೆಯ ಗಂಟೆ ಎಂದು ವಿಶ್ಲೇಷಿಸಲಾಗುತ್ತಿದೆ.

ಗೆಲ್ಲುವ ಕುದುರೆ ಏರುವ ನಿತೀಶ್‌

2012ರಲ್ಲಿ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಎ. ಸಂಗ್ಮಾ ಬದಲು ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರನ್ನು ಎನ್‌ಡಿಎ ಭಾಗವಾಗಿದ್ದ ಜೆಡಿಯು ಬೆಂಬಲಿಸಿತ್ತು.

2017ರಲ್ಲಿ ಬಿಜೆಪಿ ವಿರೋಧಿ ಮಹಾಮೈತ್ರಿಕೂಟ ಸೇರಿದ್ದ ನಿತೀಶ್‌, ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೀರಾ ಕುಮಾರ್‌ ಬದಲು ಬಿಜೆಪಿ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರನ್ನು ಬೆಂಬಲಿಸಿದ್ದರು.

2005, 2009 ಮತ್ತು 2010ರಲ್ಲಿ ಬಿಜೆಪಿ ಜತೆ ಸೇರಿ ಆರ್‌ಜೆಡಿಯನ್ನು ಸೋಲಿಸಿದ್ದರು. 2015ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡು ಬಿಜೆಪಿಗೆ ಸೋಲಿನ ರುಚಿ ಉಣಿಸಿದ್ದರು.

ಮೇಲ್ಜಾತಿ ಮೀಸಲು: ಬಿಜೆಪಿಗೆ ತಿರುಗುಬಾಣ’

ನವದೆಹಲಿ (ಪಿಟಿಐ): ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ನಿರ್ಧಾರ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹೇಳಿದ್ದಾರೆ. ತಮ್ಮನ್ನು ವಂಚಿಸಲಾಗಿದೆ ಎಂಬ ಭಾವ ಬಹುಸಂಖ್ಯಾತ ಜನರಲ್ಲಿ ಇರುವುದೇ ಇದಕ್ಕೆ ಕಾರಣ ಎಂದು ಅವರು ವಿವರಿಸಿದ್ದಾರೆ. 

ಇದೊಂದು ಆತುರದ ನಿರ್ಧಾರ. ನೋಟು ರದ್ದತಿಯ ರೀತಿಯಲ್ಲಿಯೇ ಮೀಸಲಾತಿ ನಿರ್ಧಾರವನ್ನು ತರಾತುರಿಯಿಂದ ಜಾರಿ ಮಾಡಲಾಗಿದೆ. ಮೀಸಲಾತಿ ನೀಡಿಕೆ ಎಂಬುದು ಬಡತನ ನಿರ್ಮೂಲನ ಕಾರ್ಯಕ್ರಮ ಅಲ್ಲ ಎಂದು ಅವರು ಅಭಿಪ‍್ರಾಯಪಟ್ಟಿದ್ದಾರೆ. 

ಯಾವುದೇ ಆಯೋಗ ಅಥವಾ ಸಾಮಾಜಿಕ–ಆರ್ಥಿಕ ಸಮೀಕ್ಷಾ ವರದಿಯ ಆಧಾರ ಇಲ್ಲದೆಯೇ ಸಂವಿಧಾನ ತಿದ್ದುಪಡಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 30

  Happy
 • 2

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !