ಉತ್ತರ ಪ್ರದೇಶದಲ್ಲಿ ಮುರಿದು ಬಿದ್ದ ಮೈತ್ರಿ: ಕಾಂಗ್ರೆಸ್ ಸ್ವತಂತ್ರ ಸ್ಪರ್ಧೆ

7

ಉತ್ತರ ಪ್ರದೇಶದಲ್ಲಿ ಮುರಿದು ಬಿದ್ದ ಮೈತ್ರಿ: ಕಾಂಗ್ರೆಸ್ ಸ್ವತಂತ್ರ ಸ್ಪರ್ಧೆ

Published:
Updated:

ಲಖನೌ: ‘ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಲೆಕ್ಕಕ್ಕಿಲ್ಲ’ ಎನ್ನುವಂತೆ ವರ್ತಿಸುತ್ತಿರುವ ಮಾಯಾವತಿ–ಅಖಿಲೇಶ್ ಯಾದವ್ ಜೋಡಿಗೆ ಸಡ್ಡು ಹೊಡೆದಿರುವ ರಾಹುಲ್, ರಾಜ್ಯದ ಎಲ್ಲ 80 ಲೋಕಸಭಾ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ. ಫೆಬ್ರುವರಿ ತಿಂಗಳಲ್ಲಿ ರಾಜ್ಯದಲ್ಲಿ 13 ದೊಡ್ಡ ರ್‍ಯಾಲಿಗಳನ್ನೂ ಆಯೋಜಿಸಲು ಪಕ್ಷ ಚಿಂತನೆ ನಡೆಸಿದೆ.

ಉತ್ತರಪ್ರದೇಶದ ಎಲ್ಲ 13 ವಿಭಾಗಳಲ್ಲಿಯೂ ಕಾಂಗ್ರೆಸ್‌ ನಡೆಸಲಿರುವ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಪಕ್ಷದ ಉನ್ನತ ನಾಯಕ ಗುಲಾಂ ನಬಿ ಆಜಾದ್ ಮತ್ತು ಪಕ್ಷದ ಉತ್ತರ ಪ್ರದೇಶ ಉಸ್ತುವಾರಿ ರಾಜ್‌ಬಬ್ಬಾರ್ ಭಾನುವಾರ ಭೇಟಿಯಾಗಿ ಈ ಸಂಬಂಧ ಚರ್ಚಿಸಿ ಯೋಜನೆಗೆ ಅಂತಿಮ ರೂಪುರೇಷೆ ನೀಡಿದರು ಎಂದು ಮೂಲಗಳ ಮಾಹಿತಿ ಅಧರಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಪಶ್ಚಿಮ ಉತ್ತರ ಪ್ರದೇಶದಿಂದ ರ‍್ಯಾಲಿಗಳು ಆರಂಭವಾಗಲಿವೆ. ಹಾಪುರ್, ಮೊರಾದಾಬಾದ್ ಮತ್ತು ಸಹರಾನ್‌ಪುರ್‌ಗಳಲ್ಲಿ ಮೊದಲ ಹಂತದ ರ‍್ಯಾಲಿಗಳು ನಡೆಯಲಿವೆ.

ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಕುರಿತು ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರ ಹೇಳಿಕೆ ಹೊರಬಿದ್ದ ನಂತರ ದುಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ‘ನಾವು ಉತ್ತರಪ್ರದೇಶದ ಜನರಿಗೆ ಕೊಡಬೇಕಾದ್ದು ಸಾಕಷ್ಟು ಇದೆ. ಈ ಬಗ್ಗೆ ನಮ್ಮದೇ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಘೋಷಿಸಿದ್ದರು.

ಉತ್ತರ ಪ್ರದೇಶದಲ್ಲಿ ಸಮಾಜಾವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಕ್ಷ ತಲಾ 38 ಸ್ಥಾನಗಳನ್ನು ಹಂಚಿಕೊಂಡಿವೆ. ಉಳಿದ ನಾಲ್ಕು ಸ್ಥಾನಗಳ ಪೈಕಿ ಎರಡನ್ನು ಕಾಂಗ್ರೆಸ್‌ಗೆ ಮತ್ತು ಉಳಿದ ಎರಡನ್ನು ರಾಷ್ಟ್ರೀಯ ಲೋಕದಳದ ಅಜಿತ್‌ ಸಿಂಗ್ ಅವರಿಗೆ ಬಿಟ್ಟುಕೊಡಲು ಎಸ್‌ಪಿ–ಬಿಎಸ್‌ಪಿ ನಿರ್ಧರಿಸಿವೆ. ಕಾಂಗ್ರೆಸ್‌ಗೆ ಬಿಟ್ಟುಕೊಡಲು ಉದ್ದೇಶಿಸಿರುವ ಸ್ಥಾನಗಳಲ್ಲಿ ರಾಹುಲ್‌ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಕ್ಷೇತ್ರಗಳಾದ ಅಮೇಥಿ ಮತ್ತು ರಾಯ್‌ಬರೇಲಿ ಸೇರಿವೆ.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡಗಳಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಈಡೇರಲಿಲ್ಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣವಿಲ್ಲ ಎಂಬ ನಿಲುವಿಗೆ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಬಿಗಿಯಾಗಿ ಅಂಟಿಕೊಂಡಿದ್ದೂ ಇದಕ್ಕೆ ಕಾರಣ.

‘ಬಿಎಸ್‌ಪಿ ಮತ್ತು ಎಸ್‌ಪಿ ನಾಯಕರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರಿಗೆ ಏನು ಸರಿ ಎನಿಸುತ್ತದೆಯೋ ಅದನ್ನು ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ, ನಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದು ಅವರು ನುಡಿದರು.

1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ನಂತರ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿಲ್ಲ. ಬಿಎಸ್‌ಪಿ ಮತ್ತು ಎಸ್‌ಪಿ ಒಂದಾದ ನಂತರ ಒಂದರಂತೆ ಅಧಿಕಾರ ನಡೆಸುತ್ತಿವೆ. ಕಳೆದ ವರ್ಷ ಬಿಜೆಪಿ ರಾಜ್ಯದಲ್ಲಿ ವಿಜಯಪತಾಕೆ ಹಾರಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 71 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಉಪಚುನಾವಣೆಗಳಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಮಾಡಿಕೊಂಡು ಬಿಜೆಪಿಯ ಗೆಲುವಿನ ಓಟಕ್ಕೆ ತಡೆಯೊಡ್ಡಿದವು. ಬಿಜೆಪಿಯ ಭದ್ರನೆಲೆಗಳೆನಿಸಿದ ಗೋರಖ್‌ಪುರ್ ಮತ್ತು ಫುಲ್‌ಪುರ್‌ಗಳಲ್ಲಿ ಬಿಜೆಪಿ ಸೋಲನುಭವಿಸಿತು.

ಇದೀಗ ಕಾಂಗ್ರೆಸ್‌ ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದೆ. ಈ ಬೆಳವಣಿಗೆಯು ಜಾತ್ಯತೀಯ ಮತಗಳನ್ನು ಒಡೆಯುವ ಭೀತಿಯನ್ನೂ ಹುಟ್ಟುಹಾಕಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬೆಂಬಲಿಸಿರುವ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರಿಗೆ ಈ ಬೆಳವಣಿಗೆ ಸಿಟ್ಟು ತರಿಸುವ ಸಾಧ್ಯತೆಯೂ ಇದೆ. ಆದರೆ ಈವರೆಗೆ ಯಾರೊಬ್ಬರೂ ಕಾಂಗ್ರೆಸ್ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿಲ್ಲ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !