ಮಂಗಳವಾರ, ಮೇ 18, 2021
23 °C
‘ಇದು ನಮ್ಮ ಶಾಪ’ ಎಂದು ಟಿಡಿಪಿ ಹೇಳಿದ್ದೇಕೆ?

ಅವಿಶ್ವಾಸ ನಿರ್ಣಯ, ಆಂಧ್ರ ರಾಜಕಾರಣ ಮತ್ತು ಮೋದಿ ಭಾಷಣ

ಶಿವಕುಮಾರ ಜಿ.ಎನ್. Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯದ ಪರೀಕ್ಷೆ ಎದುರಾಗಿದ್ದು ತೆಲುಗು ದೇಶಂ ಪಾರ್ಟಿಯಿಂದ (ಟಿಡಿಪಿ). ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಪಟ್ಟು ಹಿಡಿದಿದ್ದಾರೆ. ಆಂಧ್ರದ ಸಂಸದರು ಇದೊಂದು ‘ಧರ್ಮಯುದ್ಧ’ ಎಂದು ಕರೆದಿದ್ದಾರೆ.

ಆಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ದೂರಿದ ಟಿಡಿಪಿ ಮಾರ್ಚ್‌ನಲ್ಲಿ ಎನ್‌ಡಿಎ ಮೈತ್ರಿಯಿಂದ ಹೊರನಡೆದಿತ್ತು. ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ 2019ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಹೇಗಾದರೂ ಮಾಡಿ ಮೋದಿಯನ್ನು ರಾಜಕೀಯವಾಗಿ ಹಣಿಯಬೇಕು ಎಂದು ತಂತ್ರ ಹೆಣೆಯಲಾರಂಭಿಸಿತು. ಆಗ ಕಾಂಗ್ರೆಸ್‌ಗೆ ಆಧಾರವಾಗಿ ಸಿಕ್ಕಿದ್ದು ಟಿಡಿಪಿ. ಇದೇ ಹೊತ್ತಿಗೆ ಕರ್ನಾಟಕದಲ್ಲಿ ನಡೆದ ಜೆಡಿಎಸ್‌ ಜೊತೆಗಿನ ಹೊಂದಾಣಿಕೆಯೂ ಉಲ್ಲೇಖನೀಯ.

ಕಾಂಗ್ರೆಸ್‌, ಟಿಡಿಪಿ, ಎನ್‌ಸಿಪಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾದವು. ಇದಕ್ಕಾಗಿ ಸಂಸತ್‌ನ ಮುಂಗಾರು ಅಧಿವೇಶನದ ಮೊದಲ ದಿನವೇ ಈ ಪಕ್ಷಗಳು ಅವಿಶ್ವಾಸ ಗೊತ್ತುವಳಿಗೆ ಸ್ಪೀಕರ್‌ ಬಳಿ ಅರ್ಜಿ ಸಲ್ಲಿಸಿದವು. ಅರ್ಜಿಯನ್ನು ಅಂಗೀಕರಿಸಿದ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಜುಲೈ 20ರಂದು(ಬುಧವಾರ) ಅವಿಶ್ವಾಸ ನಿರ್ಣಯ ಮಂಡನೆ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಿದರು. ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿತು. ಅಂತಿಮವಾಗಿ ಪ್ರಧಾನಿ ಭಾಷಣದ ಬಳಿಕ ಸ್ವೀಕರ್‌ ಮತಕ್ಕೂ ಹಾಕಿದರು. ಈ ಎಲ್ಲಾ ಅಡೆತಡೆಗಳನ್ನು ತೊಡೆದು ನಿಂತ ಎನ್‌ಡಿಎ 325 ಮತ ಪಡೆದು 199 ಮತಗಳ ಅಂತರದಲ್ಲಿ ಅವಿಶ್ವಾಸ ನಿರ್ಣಯದ ವಿರುದ್ಧ ಗೆಲುವು ಸಾಧಿಸಿತು.

ಧರ್ಮಯುದ್ಧ

ಅವಿಶ್ವಾಸ ನಿರ್ಣಯ ಮಂಡಿಸಿದ ಟಿಡಿಪಿ ಸದಸ್ಯ ಜಯದೇವ್‌ ಗಲ್ಲಾ, ‘ಇದು ಬಿಜೆಪಿ ಮತ್ತು ಟಿಡಿಪಿ ನಡುವಿನ ಹೋರಾಟವಲ್ಲ. ಆಂಧ್ರದ ಜನರು ಮತ್ತು ಕೇಂದ್ರ ನಡುವಿನ ‘ಧರ್ಮಯುದ್ಧ’ ಎಂದು ವ್ಯಾಖ್ಯಾನಿಸಿದರು. ಆಂಧ್ರದ ಐದು ಕೋಟಿ ಜನರಿಗೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ’ ಎಂದು ಅಂಕಿ ಅಂಶಗಳನ್ನು ನೀಡಿ ಪ್ರತಿಪಾದಿಸಿದರು.

ಪ್ರಧಾನಿ ಅವರು ಸೀಮಾಂಧ್ರವನ್ನು ‘ಸ್ಕ್ಯಾಮ್‌ ಆಂಧ್ರ’ ಎಂದು ಟೀಕಿಸಿದ್ದರು. ಆದರೆ, ಬಿಜೆಪಿ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿದೆ. ಆಂಧ್ರದಲ್ಲಿ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಜನಾರ್ದನರೆಡ್ಡಿಯನ್ನು ನೀವು ಕರ್ನಾಟಕದಲ್ಲಿ ರಕ್ಷಿಸುತ್ತಿದ್ದೀರಿ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಪಾದಿಸಿದ ಜಯದೇವ ಗಲ್ಲಾ, ‘ಭರತ್‌ ಆನೇ ನೇನು‘ ಚಲನಚಿತ್ರವನ್ನು ಪ್ರಸ್ತಾಪಿಸಿ, ಸರ್ಕಾರ ಕೆಲವರ ಹಿತಕ್ಕಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂದೂ ಟೀಕಿಸಿದರು.

‘2016ರಲ್ಲಿ ಆಂಧ್ರಕ್ಕೆ ವಿಶೇಷ ಪ್ಯಾಕೇಜ್‌ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ನಾವಿನ್ನೂ ಭರವಸೆ ಈಡೇರಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿಗೆ ನಾವು ಬೆದರಿಕೆ ಹಾಕುತ್ತಿಲ್ಲ. ಶಾಪ ನೀಡುತ್ತಿದ್ದೇವೆ. ಇದು ಪ್ರಜಾಪ್ರಭುತ್ವ ಮತ್ತು ಸರ್ಕಾರದ ನಡುವಿನ ಹೋರಾಟ’ ಎಂದು ಜಯದೇವ್‌ ಗಲ್ಲಾ ಪ್ರತಿಪಾದಿಸಿದರು.

ಆಂಧ್ರದ ರಾಜಧಾನಿ ನಿರ್ಮಾಣದ ಯೋಜನೆಗಳಿಗೆ ಅನುದಾನ ನೀಡದ ಕೇಂದ್ರ ಸರ್ಕಾರವು ಸರ್ಧಾರ್‌ ವಲ್ಲಬಾಭಾಯಿ ಪಟೇಲ್‌ ಮತ್ತು ಛತ್ರಪತಿ ಶಿವಾಜಿ ಮಾಹಾರಾಜರ ಪ್ರತಿಮೆಗಳ ನಿರ್ಮಾಣಕ್ಕೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಿದೆ. ಇದು ವಿರ್ಯಾಸದ ಸಂಗತಿ ಎಂದು ಅವರು ಕುಟುಕಿದರು.


ಟಿಡಿಪಿ ಸಂಸದ ಜಯದೇವ್‌ ಗಲ್ಲಾ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದರು.

ವಿಶೇಷ ಸ್ಥಾನಮಾನ ಬೇಡಿಕೆ

2014ರ ಲೋಕಸಭಾ ಚುನಾವಣೆ ಬಳಿಕ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳನ್ನು ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಡವಿದರೆ ಎಂಬ ಪ್ರಶ್ನೆಗಳು ಇದೀಗ ಕೇಳಿ ಬರುತ್ತಿವೆ. ಶಿವಸೇನಾ ಮತ್ತು ತೆಲುಗು ದೇಶಂ ಪಾರ್ಟಿಯ ವಿಚಾರದಲ್ಲಿ ಮೋದಿ ಅವರು ತಳೆದ ನಿಲುವು ಈ ಪ್ರಶ್ನೆಗಳಿಗೆ ಕಾರಣ.

ಆಂಧ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ರಾಜ್ಯ ಉದಯವಾಯಿತು. ಆಂಧ್ರದ ರಾಜಧಾನಿಯಾಗಿದ್ದ ಹೈದರಾಬಾದ್‌ ತೆಲಂಗಾಣದ ವ್ಯಾಪ್ತಿಗೆ ಸೇರಿದ್ದರಿಂದ ಅದು ತೆಲಂಗಾಣದ ರಾಜಧಾನಿಯಾಯಿತು. ಬಳಿಕ, ಆಂಧ್ರದಲ್ಲಿ ಹೊಸ ರಾಜಧಾನಿ ನಿರ್ಮಾಣದ ಕನಸು ಚಿಗುರೊಡೆಯಿತು ಹಾಗೂ ಅನಿವಾರ್ಯವೂ ಆಯಿತು. ಆಗ, ಸುಸಜ್ಜಿತ ರಾಜಧಾನಿಯಾಗಿ ಅಮರಾವತಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಆರ್ಥಿಕವಾಗಿ ಹೆಚ್ಚಿನ ನೆರವು ಬೇಕು ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದರು.

ಎನ್‌ಡಿಎ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಅಗತ್ಯ ಆರ್ಥಿಕ ನೆರವು ಮತ್ತು ಯೋಜನೆಗಳನ್ನು ವಿಶೇಷ ಸ್ಥಾನಮಾನದ ಅಡಿ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸುತ್ತಿಲ್ಲ ಎಂದು ದೂರಿದ ಚಂದ್ರಬಾಬು ನಾಯ್ಡು ಅವರು ಪಕ್ಷದ ಸಂಸದರಿಂದ ರಾಜೀನಾಮೆ ಕೊಡಿಸುವ ಮೂಲಕ ಪ್ರತಿಭಟನೆ ದಾಖಲಿಸಿದರು. ಟಿಡಿಪಿ ಜತೆಗೂಡಿದ ವಿವಿಧ ಸಂಘಟನೆಗಳೂ ರಸ್ತೆಗಿಳಿದು ಪ್ರತಿಭಟನೆ ನಡೆಸಿದವು. ಮೋದಿ ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿದರೂ ಟಿಡಿಪಿ ಸಂಸದರು ರಾಜೀನಾಮೆ ನೀಡುವದನ್ನು ತಡೆಯಲಾಗಲಿಲ್ಲ.

‘ಚಂದ್ರಬಾಬು ನಾಯ್ಡು ಅವರ ನಿರಂತರ ಒತ್ತಡಕ್ಕೆ ಮಣಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದೇ ಟಿಡಿಪಿ ಮತ್ತು ಬಿಜೆಪಿಯ ನಡುವಣ ಮೈತ್ರಿ ಮುರಿಯುವುದಕ್ಕೆ ಇರುವ ಮುಖ್ಯ ಕಾರಣ. ಆರ್ಥಿಕ ಶಿಸ್ತು ಮತ್ತು ಔಚಿತ್ಯ ಮರೆತು ನಾಯ್ಡು ಅವರು ಹಣಕ್ಕಾಗಿ ನಿರಂತರವಾಗಿ ಬೇಡಿಕೆ ಇರಿಸುತ್ತಿದ್ದರು. ಈ ಕುರಿತು ಪ್ರಧಾನಿಗೆ ಅಸಮಾಧಾನವೂ ಇತ್ತು’ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಆಂಧ್ರ ವಿಭಜನೆ, ತೆಲಂಗಾಣ ಉದಯ

ತೆಲಂಗಾಣ ರಾಜ್ಯ ರಚನೆಯಾಗಬೇಕು ಎಂಬುದು 40 ವರ್ಷಗಳ ಸುಧೀರ್ಘ ಹೋರಾಟ. 1969ರಲ್ಲಿ ಆರಂಭವಾದ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಆಗ ಕಾಂಗ್ರೆಸ್‌ ತಣ್ಣೀರೆರಚಿತು. ಈ ವೇಳೆ ಕಾಂಗ್ರೆಸ್‌ನಿಂದ ಹೊರ ಬಂದ ಬಲಿಷ್ಠ ನಾಯಕ ಎಂ.ಚನ್ನಾರೆಡ್ಡಿ ತೆಲಂಗಾಣ ಪ್ರಜಾ ಸಮಿತಿ ರಚಿಸಿದರು. ಆದರೆ, ಪ್ರತಿಯಾಗಿ 1971ರಲ್ಲಿ ‘ಜೈ ಆಂಧ್ರ’ ಘೋಷಣೆ ಮೊಳಗಿ ತೆಲಂಗಾಣದ ಕನಸು ಕಮರಿತು. 2001ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಚನೆಯಾದ ಬಳಿಕ ಪ್ರತ್ಯೇಕ ರಾಜ್ಯದ ಹೋರಾಟ ಚುರುಕಾಯಿತು. ತೆಲುಗುದೇಶಂ ಪಕ್ಷವು 2004ರಲ್ಲಿ ತೆಲಂಗಾಣ ರಾಜ್ಯ ರಚನೆ ಬೇಡಿಕೆಯನ್ನು ಬೆಂಬಲಿಸಿತ್ತು.

ಆದರೆ 2014ರಲ್ಲಿ ಯುಪಿಎ ಸರ್ಕಾರವು ಪ್ರತ್ಯೇಕ ರಾಜ್ಯ ರಚನೆಗೆ ಮುಂದಡಿ ಇಟ್ಟಾಗ ಅಂದಿನ ಆಂಧ್ರದ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ (ಕಾಂಗ್ರೆಸ್) ವಿರೋಧಿಸಿದ್ದರು. ಪ್ರತ್ಯೇಕ ರಾಜ್ಯ ರಚನೆ ವಿರೋಧಿಸಿ ನಡೆದ ಬಂದ್‌, ಪ್ರತಿಭಟನೆಗಳಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ‘ರಾಜ್ಯ ವಿಭಜನೆಯಂಥ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯದಲ್ಲಿ ಕೀಳು ರಾಜಕೀಯ ಸಲ್ಲದು’ ಎನ್ನುವ ಮೂಲಕ ಕೇಂದ್ರದ ನಡೆಗೆ ಮುಖ್ಯಮಂತ್ರಿ ಕಿರಣ್‌ಕುಮಾರ್ ವಿರೋಧ ವ್ಯಕ್ತಪಡಿಸಿದ್ದ ಕಾರಣ ರಾಜ್ಯ ಸರ್ಕಾರದ ಭವಿಷ್ಯವೂ ಡೋಲಾಯಮಾನವಾಗಿತ್ತು.

’ಆಡಳಿತಾರೂಢ ಕಾಂಗ್ರೆಸ್‌ ವಿಷ ಬೀಜ ಬಿತ್ತುತ್ತಿದೆ ಎಂಬುದಕ್ಕೆ ಆಂಧ್ರ ವಿಭಜನೆ ಅತ್ಯಂತ ಸೂಕ್ತ ಉದಾಹರಣೆ’ ಎಂದು ಅಂದು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಟೀಕಿಸಿದ್ದರು. ಜತೆಗೆ, ಕಾಂಗ್ರೆಸ್ ವೋಟ್‌ ಬ್ಯಾಂಕ್‌ ರಾಜಕಾರಣದಲ್ಲಿ ತೊಡಗಿದೆ ಎಂದೂ ಆಪಾದಿಸಿದ್ದರು.

ಸತತವಾಗಿ ಎರಡು ಚುನಾವಣೆಗಳಲ್ಲಿ ಸೋಲುಂಡಿದ್ದ ಚಂದ್ರಬಾಬು ಅವರಿಗೆ ಹಾಗೂ ಅವರ ಪಕ್ಷಕ್ಕೆ 2014ರ ಚುನಾವಣೆಯು ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿತ್ತು. ‘ಮುಂಬರುವ  ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಗೆಲುವು ಚಾರಿತ್ರಿಕ ಅಗತ್ಯ’ ಎಂದು ಚಂದ್ರಬಾಬು ಅವರೇ ಹೇಳಿದ್ದರು. ವಿಭಜನೆಯ ವಿಚಾರವನ್ನೇ ಜನರ ಮುಂದಿಟ್ಟು ಗೆದ್ದೂ ಬಂದರು.

‘ಅಮರಾವತಿ’ಗೆ ಅಡಿಗಲ್ಲು, ಮೋದಿ ಭರವಸೆಯೂ...

ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ, ವಿಶ್ವದರ್ಜೆಯ ಸುಸಜ್ಜಿತ ನಗರವಾಗಿ ತಲೆ ಎತ್ತಲಿರುವ ಅಮರಾವತಿ ನಿರ್ಮಾಣಕ್ಕೆ 2015ರ ಅಕ್ಟೋಬರ್‌ನಲ್ಲಿ ನವರಾತ್ರಿಯ ಆಯುಧಪೂಜೆ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಗಲ್ಲು ಹಾಕಿದ್ದರು.
ಆಂಧ್ರ ವಿಭಜನೆಯ ನಂತರ ಮಹತ್ವಾಕಾಂಕ್ಷೆಯ ರಾಜಧಾನಿ ನಿರ್ಮಾಣ ಕಾರ್ಯಕ್ರಮಕ್ಕೆ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ಬೃಹತ್ ಸಮಾರಂಭ ನೆರವೇರಿತ್ತು. ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಮೋದಿ ಅವರು, ಪೂಜಾ ವಿಧಿ ವಿಧಾನ ನೆರವೇರಿಸಿ, ಅಡಿಗಲ್ಲು ಹಾಕಿ, ಬಳಿಕ ಶಿಲಾನ್ಯಾಸ ಫಲಕವನ್ನು ಅನಾವರಣಗೊಳಿಸಿದ್ದರು.   

ವಿಭಜನೆಯ ನಂತರ ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ. ಅಭಿವೃದ್ಧಿ ಕಾರ್ಯಗಳಾಗಬೇಕಿದೆ. ಹೀಗಾಗಿ, ರಾಜ್ಯಕ್ಕೆ ಕೇಂದ್ರದಿಂದ ವಿಶೇಷ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೋದಿ ಅವರನ್ನು ಇದೇ ವೇಳೆ ಕೋರಿದ್ದರು. 
ಈ ವೇಳೆ ಮಾತನಾಡಿದ್ದ ನರೇಂದ್ರ ಮೋದಿ ಅವರು, ‘ರಾಜಕೀಯ ಸ್ವಾರ್ಥ ಆಂಧ್ರ ಪ್ರದೇಶದ ಆತುರದ ವಿಭಜನೆಗೆ ಕಾರಣವಾಯಿತು. ಆಂಧ್ರ ವಿಭಜನೆಯಾಗಿ ತೆಲಂಗಾಣ ರಚನೆಯಾಗಲು ಯುವ ಸಮೂಹವನ್ನು ಪ್ರಚೋದಿಸುವಂಥ ವಿಷ ಹರಡುವ ಕೆಲಸನ್ನು ಹಿಂದಿನ ಸರ್ಕಾರ ಮಾಡಿತು’ ಎಂದು ಕಾಂಗ್ರೆಸ್‌ನತ್ತ ಬೊಟ್ಟು ಮಾಡಿದ್ದರು.

ಅಡಿಗಲ್ಲು ಸಮಾರಂಭಕ್ಕೆ ರಾಷ್ಟ್ರದ ಮೂಲೆ ಮೂಲೆಯಿಂದ ಪವಿತ್ರ ಮಣ್ಣು ಹಾಗೂ ಪವಿತ್ರ ಜಲವನ್ನು ತರಲಾಗಿದೆ ಎಂದು ನಾಯ್ಡು ಅವರು ಹೇಳಿದ್ದರು. ಅದು ಮೆಚ್ಚುಗೆಯಾಗಿ ನಾನು ಅಡಿಗಲ್ಲು ಸಮಾರಂಭಕ್ಕೆ ದೆಹಲಿಯ ಸಂಸತ್ ಆವರಣದ ಮಣ್ಣು ಹಾಗೂ ಯಮುನಾ ನದಿಯ ನೀರನ್ನು ತಂದುಕೊಟ್ಟಿದ್ದೇನೆ. ಇದು ದೆಹಲಿಯೇ ಅಮರಾವತಿಯತ್ತ ಬಂದಂತಾಗಿದೆ. ಸರ್ವರಿಗೂ ಸಮಾನತೆ ಕೊಟ್ಟ ಕೇಂದ್ರ ಸಂಸತ್. ಅದು ಇಲ್ಲಿಯೂ ನೆರವೇರಲಿದೆ ಎಂಬುದು ನಮ್ಮ ವಿಶ್ವಾಸ ಎನ್ನುವ ಮೂಲಕ ಪ್ರಧಾನಿ ರಾಜ್ಯಕ್ಕೆ ಅಗತ್ಯ ನೆರವು ಒದಗಿಸುವ ಭರವಸೆಯಿತ್ತಿದ್ದರು.

ಯುವಶಕ್ತಿಯನ್ನು ಬಳಸಿಕೊಂಡು ಆಂಧ್ರ ‘ಮೇಕ್ ಇನ್ ಇಂಡಿಯಾ’ ಅಡಿ ‘ಸ್ಟಾರ್ಟ್ ಅಪ್’ಗೆ ಒತ್ತು ನೀಡಬೇಕು ಎಂದು ಸಲಹೆ ಮಾಡಿದ್ದ ಮೋದಿ, ಎರಡೂ ರಾಜ್ಯಗಳು ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಲು ಇದೊಂದು ಸದಾವಕಾಶ ಎಂದು ಅಲ್ಲಿನ ಜನರಿಗೆ ನೀಡಿದ್ದ ಸಲಹೆಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಬಂಡಾರು ದತ್ತಾತ್ರೇಯ, ನಿರ್ಮಲಾ ಸೀತಾರಾಮನ್, ವೈ.ಎಸ್. ಚೌಧರಿ, ರಾಜ್ಯಪಾಲ ರೋಸಯ್ಯ, ಸಿಂಗಪುರದ ಸಚಿವ ಈಶ್ವರನ್, ಜಪಾನ್ ನ ಸಚಿವ ಯಸುಕಿ ತಕಗಿ ಸಾಕ್ಷಿಯಾಗಿದ್ದರು.

ನಾಯ್ಡು ಕನಸೇನು?

ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿ ಕಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಂಕುಸ್ಥಾಪನೆ ನೆರವೇರಿಸಿದ್ದ ಚಂದ್ರಬಾಬು ನಾಯ್ಡು, 18 ಶತಮಾನಗಳ ಹಿಂದೆ ಅಮರಾವತಿ ಕಳೆದುಕೊಂಡಿದ್ದ ‘ರಾಜಧಾನಿ’ಯ ಸ್ಥಾನಮಾನವನ್ನು ಮತ್ತೆ ಗಳಿಸಿಕೊಳ್ಳುವ ಹೆಮ್ಮೆಯ ಪಟ್ಟಣವಾಗಿಸುವ ಹಾಗೂ ಶಾತವಾಹನರ ರಾಜಧಾನಿಯಾಗಿದ್ದ ಅಮರಾವತಿ ಪಟ್ಟಣ ಮತ್ತೆ ತನ್ನ ಐತಿಹಾಸಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಗತ ವೈಭವವನ್ನು ಮರಳಿ ಪಡೆಯಬೇಕು ಎಂಬ ಕನಸು ಹೊತ್ತಿದ್ದರು.

ಸಾಮ್ರಾಟ ಅಶೋಕನ ಕಾಲಕ್ಕೆ ಸೇರಿದ್ದ ಧ್ಯಾನಸ್ಥ ಬುದ್ಧನ ಸ್ತೂಪಕ್ಕೆ ಅಮರಾವತಿ ಖ್ಯಾತಿ ಪಡೆದಿದೆ. ಗುಂಟೂರು ಜಿಲ್ಲೆಯ ಈ ಪಟ್ಟಣಕ್ಕೆ ಐತಿಹಾಸಿಕ ಮಹತ್ವ ಇರುವುದರ ಜತೆಗೆ ರಾಜ್ಯದ ಮಧ್ಯಭಾಗದಲ್ಲಿ ಇರುವುದೂ ಇದರ ಇನ್ನೊಂದು ಹೆಚ್ಚುಗಾರಿಕೆಯಾಗಿದೆ. ಅಮರಾವತಿ ಈ ಹಿಂದೆ ಆಂಧ್ರ ನಗರಿ ಎಂದೂ ಖ್ಯಾತವಾಗಿತ್ತು. ಹೊಸ ರಾಜಧಾನಿಯನ್ನು ಸರ್ಕಾರಿ, ಖಾಸಗಿ ಪಾಲುದಾರಿಕೆಯಡಿ ನಿರ್ಮಾಣ ಮಾಡಲಾಗುತ್ತಿದೆ.

ಹೊಸ ರಾಜಧಾನಿ ಕಟ್ಟುವ ಕೆಲಸಕ್ಕೆ ಪರಿಸರ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಮತ್ತಿತರ ಅಡಚಣೆಗಳ, ಹಲವಾರು ಪ್ರತಿಕೂಲತೆಗಳ ಮಧ್ಯೆಯೇ, ತಮ್ಮ ಕನಸು ನನಸಾಗಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು  ಪಣತೊಟ್ಟಿದ್ದಾರೆ. ಆದರೆ, ಭಾರಿ ಮೊತ್ತದ ಬಂಡವಾಳ ಹೊಂದಿಸುವುದು ಚಂದ್ರಬಾಬು ನಾಯ್ಡು ಅವರಿಗೆ ಸವಾಲಾಗಿದೆ. ರಾಜ್ಯ ವಿಭಜನೆ ನಂತರ ₹ 18 ಸಾವಿರ ಕೋಟಿಗಳಷ್ಟು ವಿತ್ತೀಯ ಕೊರತೆ ಎದುರಿಸುತ್ತಿರುವ ಆಂಧ್ರ ಸರ್ಕಾರ ರಾಜಧಾನಿ ಕಟ್ಟಲು ಎಲ್ಲಿಂದ ಹಣ ತರಲಿದೆ ಎನ್ನುವುದು ನಿಗೂಢವಾಗಿ ಉಳಿದೆ. ಈ ಕಾರಣಕ್ಕಾಗಿಯೇ ನಾಯ್ಡು ರಾಜ್ಯಕ್ಕೆ ವಿಶೇಷ ಸ್ಥಾನ ಮಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಆಂಧ್ರ ಜನರಿಗೆ ಮೋದಿ ಮತ್ತೆ ಭರವಸೆ

ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕೊನೆಗೆ ಸುಧೀರ್ಘ ಭಾಷಣ ಮಾಡಿದ ನರೇಂದ್ರ ಮೋದಿ, ಆಂಧ್ರದ ತೆಲುಗು ನನ್ನ ತಾಯಿ ಇದ್ದಂತೆ. ಆಂಧ್ರ ವಿಭಜನೆ ಮಾಡಿದ್ದು ಹಿಂದಿನ ಯುಪಿಎ ಸರ್ಕಾರದ ಕೆಲಸ. ಯುಪಿಎ ಸರ್ಕಾರ ತಾಯಿಯನ್ನು ಉಳಿಸಲು ಹೋಗಿ ಮಕ್ಕಳಿಗೆ ಅನ್ಯಾಯ ಮಾಡಿದೆ. ಆ ತಾಯಿ ಮಡಿಲ ಮಕ್ಕಳಿಗೆ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ರಾಜ್ಯದ ಅಭಿವೃದ್ಧಿ ಮತ್ತು ಜನಕಲ್ಯಾಣ ಕಾರ್ಯಕ್ರಮಗಳನ್ನು ನೀಡುತ್ತೇವೆ ಎಂದು ಮತ್ತೆ ಭರವಸೆ ನೀಡಿದರು.

ಆಂಧ್ರಕ್ಕೆ ವಿಶೇಷ ಪ್ಯಾಕೇಜ್‌ ನೀಡಲು 14ನೇ ಹಣಕಾಸು ಆಯೋಗದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ಸಿಎಂ ಚಂದ್ರಬಾಬು ನಾಯ್ಡು ಅವರ ಜತೆ ದೂರವಾಣಿಯಲ್ಲಿ ಮಾತೂ ಆಡಿದ್ದೆ. ಆದರೆ, ಅವರು ಬೇರೊಂದು ಪಕ್ಷದ ಮುಖಂಡರ ಜತೆಗೂಡಿ ಕೇಂದ್ರ ಸರ್ಕಾರ ನೀಡಬೇಕೆಂದಿದ್ದ ಪ್ಯಾಕೇಜ್‌ ಅನ್ನು ತಿರಸ್ಕರಿಸಿದರು. ಆದರೆ, ಕೇಂದ್ರ ಸರ್ಕಾರ ಆಂಧ್ರದ ಜನರಿಗೆ ಯಾವತ್ತೂ ಅನ್ಯಾಯ ಮಾಡುವುದಿಲ್ಲ. ನಿಮ್ಮ ಶ್ರೇಯಸ್ಸಿಗೆ ನಾವು ಬದ್ಧರಾಗಿದ್ದೇವೆ ಎಂಬ ಭರವಸೆಯ ಮಾತನನ್ನು ಸದನದಲ್ಲಿ ನೀಡಿದರು.


ಎನ್‌. ಚಂದ್ರಬಾಬು ನಾಯ್ಡು

ಚಂದ್ರಬಾಬು ನಾಯ್ಡು ಆರೋಪವೇನು?

ಸಂಸತ್‌ನಲ್ಲಿ ನಡೆದ ಬೆಳವಣಿಗೆ ಮತ್ತು ಫಲಿತಾಂಶ ನಿರಾಶೆ ಮೂಡಿಸಿದೆ. ಇಡೀ ಆಂಧ್ರ ಪ್ರದೇಶ ಮತ್ತು ನ್ಯಾಯಕ್ಕಾಗಿ ಕಾಯುತ್ತಿದೆ. ಮತ್ತೆ ಮತ್ತೆ ನಿರಾಶೆಗೊಳಿಸಲು ಅವರು ಬಹುಮತ ಪಡೆದಿದ್ದಾರೆ. ಅವರು (ಮೋದಿ) ನೀತಿಯನ್ನು ಉಲ್ಲಂಘಿಸಿದ್ದಾರೆ. ಅವರ ಭಾಷಣ ನೋವುಂಟು ಮಾಡಿದೆ ಎಂದು ಚಂದ್ರಬಾಬು ನಾಯ್ಡು ಆಪಾದಿಸಿದ್ದಾರೆ.

ನಾಲ್ಕು ವರ್ಷಗಳಲ್ಲಿ ನಾವು 29 ಬಾರಿ ದೆಹಲಿಗೆ ಹೋಗಿದ್ದೇವೆ. ಆಂಧ್ರ ಪ್ರದೇಶಕ್ಕೆ ನ್ಯಾಯವನ್ನು ಕಲ್ಪಿಸಿಕೊಡುವ ಬದಲಿಗೆ ನಾನು ಯು–ಟರ್ನ್‌ ತೆಗೆದುಕೊಂಡಿದ್ದೇನೆಂದು ಆಪಾದಿಸಿ, ನನ್ನ ಮೇಳೆ ರಾಜಕೀಯ ಪ್ರಹಾರ ನಡೆಸುತ್ತಿದ್ದಾರೆ. ಆಂಧ್ರಕ್ಕೆ ನ್ಯಾಯ ನೀಡುವ ಬದಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪ್ರಧಾನಿ ನಿರಂಕುಶಾಧಿಕಾರಿ. ಅವರು ಬೇಜವಾಬ್ದಾರಿ ಮತ್ತು ಹಗುರವಾಗಿ ಮಾತನಾಡುತ್ತಾರೆ ಎಂದು ನಾಯ್ಡು ದೂರಿದ್ದಾರೆ.

ಟಿಡಿಪಿ ಕಡಿಮೆ ಸದಸ್ಯ ಬಲ ಹೊಂದಿದೆ ಎಂಬ ಕಾರಣಕ್ಕೆ ಅವರು ನಮ್ಮ ಬೇಡಿಕೆಗಳು ಮತ್ತು ಅಗತ್ಯಗಳನ್ನು ಈಡೇರಿಸುತ್ತಿಲ್ಲ. ನಿರ್ಲಕ್ಷ್ಯ ತೋರುತ್ತಿದೆ ಎಂದೂ ಆಪಾದಿಸಿದ್ದಾರೆ. ಜತೆಗೆ, ರಾಜ್ಯದ ಜನರು ಮತ್ತು ಎಲ್ಲಾ ಪಕ್ಷಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರೆಕೊಟ್ಟಿದ್ದಾರೆ.

ಮೋದಿ ಭಾಷಣ ‘ಬಾಲಿವುಡ್‌ ಬ್ಲಾಕ್ ಬಸ್ಟರ್‌ ಮೂವಿ’

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಬಳಿಕ ಸದನದಲ್ಲಿ ಮಾತನಾಡಿದ ಟಿಡಿಪಿ ಸಂಸದ ಕೆಸಿನೇನಿ ಶ್ರೀನಿವಾಸ್‌, ‘ನನಗೆ ಒಂದುವರೆ ಗಂಟೆ ಕಾಲ ‘ಬಾಲಿವುಡ್‌ ಬ್ಲಾಕ್‌ ಬಸ್ಟರ್‌ ಮೂವಿ’ ನೋಡಿದಂತಾಯಿತು ಎಂದು ಮೋದಿ ಅವರ ಸುಧೀರ್ಗ ಭಾಷಣಕ್ಕೆ ಟೀಕೆ ಮಾಡಿದರು.

ನಾಯ್ಡು ದೂರವಿಡಲು ಮೋದಿ ತಂತ್ರ?

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಪ್ರಧಾನಿ ನರೇಂದ್ರ ಮೊದಿ ಅವರ ಭಾಷಣವನ್ನು ಆಂಧ್ರದ ಮಾಧ್ಯಮಗಳು ‘ಮೋದಿ ಅವರ ಈ ಬಗೆಯ ಹೇಳಿಕೆ ನಾಯ್ಡು ಅವರನ್ನು ದೂರವಿಡುವ ತಂತ್ರವಾ? ಎಂದು ವರದಿ ಮಾಡಿವೆ.

* ಇದನ್ನೂ ಓದಿ...

‘ಮಾತು ಉಳಿಸಿಕೊಳ್ಳದವರು ಮನುಷ್ಯರೇ ಅಲ್ಲ’ ಎಂದು ದೇಶದ ಗಮನ ಸೆಳೆದ ಜಯದೇವ ಗಲ್ಲ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು