ಸೋಮವಾರ, ಫೆಬ್ರವರಿ 24, 2020
19 °C

ಅವಿಶ್ವಾಸ: ನಾಯ್ಡು ಪ್ರತಿಷ್ಠೆ ಪಣಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌/ನವದೆಹಲಿ: ಆಂಧ್ರ ಪ್ರದೇಶದ ಬಗ್ಗೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸಿದೆ ಎಂಬುದರತ್ತ ಅವಿಶ್ವಾಸ ನಿರ್ಣಯದ ಚರ್ಚೆಯ ಮೂಲಕ ದೇಶದ ಗಮನ ಸೆಳೆಯಲು ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಲ್ಲ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಬೆಂಬಲ ನೀಡಬೇಕು ಎಂದು ಎಲ್ಲ ಪಕ್ಷಗಳ ಸಂಸದರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ತಮ್ಮ ಪಕ್ಷದ ಸಂಸದರನ್ನು ಸಿದ್ಧಪಡಿಸಿದ್ದಾರೆ. 

ಮುಖ್ಯಮಂತ್ರಿ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಅಮರಾವತಿಯಿಂದ ಟೆಲಿಕಾನ್ಫರೆನ್ಸ್‌ ಮೂಲಕ ಪಕ್ಷದ ಸಂಸದರ ಜತೆಗೆ ಚರ್ಚೆ ನಡೆಸಿದ್ದಾರೆ. ಟಿಡಿಪಿ ಪರವಾಗಿ ಚರ್ಚೆಯ ನೇತೃತ್ವ ವಹಿಸುವ ಮೂವರು ಸಂಸದರಿಗೆ ಬೇಕಾದ ಮಾಹಿತಿಯನ್ನು ಒದಗಿಸಲಾಗಿದೆ.

ಗುಂಟೂರು ಸಂಸದ ಗಲ್ಲಾ ಜಯದೇವ ಅವರು ಚರ್ಚೆ ಆರಂಭಿಸಲಿದ್ದಾರೆ. ರಾಜ್ಯ ವಿಭಜನೆ ಬಳಿಕ ಕೇಂದ್ರವು ಆಂಧ್ರಪ್ರದೇಶಕ್ಕೆ ಯಾವ ರೀತಿ ಅನ್ಯಾಯ ಮಾಡಿದೆ ಎಂಬುದನ್ನು ಕೇಸಿನೇನಿ ಶ್ರೀನಿವಾಸ ರಾವ್‌ ಮತ್ತು ರಾಮಮೋಹನ್‌ ನಾಯ್ಡು ಬಿಡಿಸಿಡಲಿದ್ದಾರೆ. 

ಆಂಧ್ರದ ಹಣಕಾಸು ಸಚಿವ ಯನಮಲ ರಾಮಕೃಷ್ಣುಡು ಮತ್ತು ಯೋಜನಾ ಮಂಡಳಿ ಉಪಾಧ್ಯಕ್ಷ ಕುಟುಂಬ ರಾವ್‌ ದೆಹಲಿಗೆ ಧಾವಿಸಿ
ದ್ದಾರೆ. ಪಕ್ಕದ ರಾಜ್ಯ ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್‌) ಬೆಂಬಲ ಪಡೆಯಲು ಟಿಡಿಪಿ ಯತ್ನಿಸುತ್ತಿದೆ.

ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ಎಎಪಿ ಸಂಸದರಿಗೆ ವಿಪ್‌ ನೀಡಲಾಗಿದೆ. ಲೋಕಸಭೆಯಲ್ಲಿ ಎಎಪಿಯ ನಾಲ್ವರು ಸದಸ್ಯರಿದ್ದಾರೆ.

ಬಂಡಾಯಗಾರರ ನಿಲುವೇನು?: ಪಕ್ಷ ಮತ್ತು ಸರ್ಕಾರದ ವಿರುದ್ಧ ಹಲವು ಬಾರಿ ಮಾತನಾಡಿದ್ದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಸರ್ಕಾರದ ಪರ ಮತ ಹಾಕುವುದಾಗಿ ಹೇಳಿದ್ದಾರೆ. ಶತ್ರುಘ್ನ ಸಿನ್ಹಾ ಮತ್ತು ಕೀರ್ತಿ ಆಜಾದ್‌ ಸೇರಿ ಐವರು ಬಂಡಾಯ ಸಂಸದರು ಯಾರಿಗೆ ಮತ ಹಾಕಬಹುದು ಎಂಬುದು ಭಾರಿ ಕುತೂಹಲ ಸೃಷ್ಟಿಸಿದೆ. 

ಕೇಂದ್ರ ಸಚಿವ ಅರುಣ್‌ ಜೇಟ್ಲಿ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದ ಕೀರ್ತಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಶುಕ್ರವಾರದ ಅವಿಶ್ವಾಸ ಮತದ ಸಂದರ್ಭದಲ್ಲಿ ಅವರು ಯಾರಿಗೆ ಮತ ಹಾಕಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. 

ಶತ್ರುಘ್ನ ಅವರ ಇತ್ತೀಚಿನ ನಡವಳಿಕೆ ನಿಗೂಢವಾಗಿತ್ತು. ಆರ್‌ಜೆಡಿ ಕಳೆದ ತಿಂಗಳು ಏರ್ಪಡಿಸಿದ್ದ ಇಫ್ತಾರ್‌ ಕೂಟದಲ್ಲಿ ಶತ್ರುಘ್ನ ಭಾಗವಹಿಸಿದ್ದರು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜತೆಗೂ ಅವರು ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇದೇ 12ರಂದು ಪಟ್ನಾದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶತ್ರುಘ್ನ ಅವರು ಭಾಗವಹಿಸಿರಲಿಲ್ಲ. 
***

ಎಐಎಡಿಎಂಕೆ ಗೈರುಹಾಜರು?
37 ಸಂಸದರನ್ನು ಹೊಂದಿರುವ ಲೋಕಸಭೆಯ ಮೂರನೇ ಅತ್ಯಂತ ದೊಡ್ಡ ಪಕ್ಷ ಎಐಎಡಿಎಂಕೆ ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸುವುದಿಲ್ಲ ಎಂಬ ಸುಳಿವನ್ನು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ನೀಡಿದ್ದಾರೆ. 

ಎಐಎಡಿಎಂಕೆ ಸಂಸದರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಅವರು ಮತ ಹಾಕುವ ಸಂದರ್ಭದಲ್ಲಿ ಗೈರು ಹಾಜರಾಗಲಿದ್ದಾರೆ. ಅವಿಶ್ವಾಸದ ವಿರುದ್ಧ ಹೆಚ್ಚು ಮತಗಳನ್ನು ಕ್ರೋಡೀಕರಿಸುತ್ತಿರುವ ಬಿಜೆಪಿಗೆ ಇದರಿಂದ ನೆರವಾಗಬಹುದು ಎಂದು ಪಕ್ಷದ ಮೂಲಗಳು ಹೇಳಿವೆ. 

ಅವಿಶ್ವಾಶ ಮತವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ, ಗೈರು ಹಾಜರಾಗಬೇಕೇ ಎಂಬ ಬಗ್ಗೆ ಶುಕ್ರವಾರ ಬೆಳಿಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಐಎಡಿಎಂಕೆ ಸಂಸದರೊಬ್ಬರು ಹೇಳಿದ್ದಾರೆ. 
***

ನಾನು ಬಿಜೆಪಿ ಸಂಸದ. ನಾನು ಪಕ್ಷ ಬಿಟ್ಟಿಲ್ಲ, ಪಕ್ಷವು ನನ್ನನ್ನೂ ಬಿಟ್ಟಿಲ್ಲ. ಹಾಗಾಗಿ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ.
-ಶತ್ರುಘ್ನ ಸಿನ್ಹಾ, ಬಿಜೆಪಿ ಸಂಸದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು