ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವಿಲ್ಲದಿದ್ದರೆ ವಾಹನಕ್ಕೆ ವಿಮೆ ಇಲ್ಲ!

ನವದೆಹಲಿ: ಇನ್ನು ನಿಮ್ಮ ವಾಹನಕ್ಕೆ ವಿಮೆ ಪಡೆಯಬೇಕೆಂದಿದ್ದರೆ ಮಾಲಿನ್ಯ ನಿಯಂತ್ರಣದಲ್ಲಿರುವುದನ್ನು ಖಾತರಿ ಪಡಿಸುವ ಪ್ರಮಾಣ ಪತ್ರ (ಪಿಯುಸಿ) ಕಡ್ಡಾಯ. ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಈ ಕುರಿತಂತೆ ಈಗಾಗಲೇ ಸುತ್ತೋಲೆಯೊಂದನ್ನು ಹೊರಡಿಸಿ ಎಲ್ಲಾ ವಿಮಾ ಕಂಪೆನಿಗಳಿಗೂ ಹೊಸ ನಿಯಮವನ್ನು ಪಾಲಿಸುವಂತೆ ಸೂಚಿಸಿದೆ.
ಆದರೆ ಈ ಹೊಸ ನಿಯಮ ವಿಮಾ ಕಂಪೆನಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ವಿಮಾ ಕಾಯ್ದೆಯ ಅನ್ವಯ ವಿಮಾ ಕಂಪೆನಿಗಳು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ನಿರಾಕರಿಸಲು ಸಾಧ್ಯವಿಲ್ಲ. ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಪಡೆದಿಲ್ಲ ಎಂಬ ಕಾರಣಕ್ಕೆ ವಿಮಾ ಕಂಪೆನಿಗಳು ವಿಮೆಯನ್ನು ನಿರಾಕರಿಸಿದರೆ ಅದು ವಿಮಾ ಕಾಯ್ದೆಯ ಉಲ್ಲಂಘನೆಯಾಗುತ್ತದೆ.
ಮೋಟಾರು ವಾಹನಗಳ ಅಧಿನಿಯಮದಂತೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಹೊಂದಿರುವುದು ಈಗ ಕಡ್ಡಾಯ. ಅಧಿಕೃತ ಪರಿಶೀಲನಾ ಏಜನ್ಸಿಗಳು ನೀಡುವ ಈ ಪ್ರಮಾಣ ಪತ್ರದ ಅವಧಿ ಆರು ತಿಂಗಳು. ಇಲ್ಲಿಯ ತನಕ ಈ ಪ್ರಮಾಣ ಪತ್ರಕ್ಕೂ ವಾಹನ ವಿಮೆಗೂ ಸಂಬಂಧ ಕಲ್ಪಿಸಲಾಗಿರಲಿಲ್ಲ. ಕಳೆದ ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವನ್ನು ಹೊಂದಿಲ್ಲದೇ ಇರುವ ವಾಹನಗಳ ವಿಮೆಯನ್ನು ನವೀಕರಿಸ ಕೂಡದು ಎಂದು ಆದೇಶಿಸಿತ್ತು. ಈ ತೀರ್ಪನ್ನು ಉಲ್ಲೇಖಿಸಿ ಈಗ ಐಆರ್ಡಿಎಐ ಕೂಡಾ ಸುತ್ತೋಲೆ ಹೊರಡಿಸಿದೆ.
ವಿಮಾ ಕಂಪನಿಗಳ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸುವುದಾಗಿ ಜನರಲ್ ಇನ್ಶೂರೆನ್ಸ್ ಕೌನ್ಸಿಲ್ನ ಕಾರ್ಯದರ್ಶಿ ಆರ್. ಚಂದ್ರಶೇಖರನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅನುಷ್ಠಾನದ ಸಮಸ್ಯೆ
ಅನೇಕ ಪಟ್ಟಣಗಳಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ನೀಡುವ ಏಜನ್ಸಿಗಳೇ ಇರುವುದಿಲ್ಲ. ಇದರ ಪರಿಶೀಲನೆಯೂ ಹೆಚ್ಚಿನ ಪಟ್ಟಣಗಳಲ್ಲಿ ಕಟ್ಟುನಿಟ್ಟಾಗಿ ನಡೆಯುವುದಿಲ್ಲ. ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಎಂಬುದು ಇಲ್ಲಿಯ ತನಕ ಮಹಾನಗರಗಳಿಗೆ ಸೀಮಿತವಾಗಿರುವ ವ್ಯವಹಾರವಾಗಿಯಷ್ಟೇ ಉಳಿದಿದೆ. ಪರಿಣಾಮವಾಗಿ ಇದನ್ನು ಸುಪ್ರೀಂ ಕೋರ್ಟ್ನ ತೀರ್ಪನ್ನು ಅನುಷ್ಠಾನಗೊಳಿಸುವುದಕ್ಕೆ ವಿಮಾ ಕಂಪೆನಿಗಳು ದೊಡ್ಡ ಸವಾಲು ಎದುರಿಸಬೇಕಾಗುತ್ತದೆ.
ಪ್ರಸ್ತುತ ಆನ್ಲೈನ್ನಲ್ಲಿ ವಿಮೆಯನ್ನು ನವೀಕರಿಸುವ ವ್ಯವಸ್ಥೆ ಇದೆ. ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳಲ್ಲಿ ಅನ್ಲೈನ್ ಪರಿಶೀಲನೆಯ ಅನುಕೂಲವಿರುವಂತೆ ನೀಡಲಾಗುವುದಿಲ್ಲ. ಇದು ವಿಮಾ ಕಂಪೆನಿಗಳಿಗೆ ಮಟ್ಟಿಗೆ ಮತ್ತೊಂದು ಸವಾಲಾಗಿಬಿಡುತ್ತದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.