ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರು ಆಸ್ಪತ್ರೆಯಲ್ಲೇ ಸತ್ತರೆ ಶವಪರೀಕ್ಷೆ ಬೇಡ: ಐಸಿಎಂಆರ್‌

ಐಸಿಎಂಆರ್‌ ಮಾರ್ಗದರ್ಶಿ ಕರಡು ಸೂತ್ರ: ಸಿಬ್ಬಂದಿಗೆ ಸೋಂಕು ತಗುಲುವ ಆತಂಕ
Last Updated 11 ಮೇ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯರು ಮತ್ತು ಶವಾಗಾರದ ಇತರೆ ಸಿಬ್ಬಂದಿಗೆ ಸೋಂಕು ತಗುಲುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕೋವಿಡ್‌–19 ಸಾವಿನ ಪ್ರಕರಣಗಳಲ್ಲಿ ಶವಪರೀಕ್ಷೆ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ತಿಳಿಸಿದೆ.

‘ಭಾರತದಲ್ಲಿ ಕೋವಿಡ್‌–19 ಸಾವಿನ ಪ್ರಕರಣಗಳಲ್ಲಿ ಶವಪರೀಕ್ಷೆಗೆ ಮಾರ್ಗದರ್ಶಿ ಸೂತ್ರಗಳು’ ಕುರಿತ ಅಂತಿಮ ಕರಡುಪ್ರತಿಯಲ್ಲಿ ಐಸಿಎಂಆರ್ ಈ ಅಂಶವನ್ನು ಉಲ್ಲೇಖಿಸಿದೆ.

ರೋಗಿ ಆಸ್ಪತ್ರೆಯಲ್ಲಿದ್ದಾಗಲೇ ಮೃತಪಟ್ಟರೆ, ಅದನ್ನು ಎಂಎಲ್‌ಸಿ (ಮೆಡಿಕೊ–ಲೀಗಲ್‌ ಕೇಸ್) ಎಂದು ಪರಿಗಣಿಸಲಾಗದು. ಇದಕ್ಕೆ ಶವಪರೀಕ್ಷೆ ಅಗತ್ಯವಿಲ್ಲ. ಚಿಕಿತ್ಸೆಯನ್ನು ನೀಡಿದ್ದ ವೈದ್ಯರೇ ಮರಣ ಪ್ರಮಾಣಪತ್ರವನ್ನು ದೃಢೀಕರಿಸಬಹುದು ಎಂದು ಹೇಳಿದೆ.

ಆದರೆ, ಆಸ್ಪತ್ರೆಗೆ ಕರೆತರುವಾಗ ಸತ್ತಿದ್ದು, ಕೋವಿಡ್‌ ಶಂಕೆ ಇದ್ದು ಎಂಎಲ್‌ಸಿ ಎಂದು ನಮೂದಿಸಿದ್ದರೆ ಸಾವಿನ ಕಾರಣದ ಸ್ಪಷ್ಟತೆಗಾಗಿ ಶವಪರೀಕ್ಷೆ ಅಗತ್ಯ ಎಂದು ತಿಳಿಸಲಾಗಿದೆ.

ಆದರೆ, ಅಗತ್ಯ ಪ್ರಕ್ರಿಯೆ ನಂತರ ಕೋವಿಡ್ ಶಂಕೆ ಇಲ್ಲದಿದ್ದರೆ ಎಂಎಲ್‌ಸಿ ಎಂದು ಉಲ್ಲೇಖಿಸಿದ್ದರೂ ಶವಪರೀಕ್ಷೆ ನಡೆಸುವುದನ್ನು ಕೈಬಿಡುವ ಅಧಿಕಾರ ಪೊಲೀಸರಿಗೆ ಇದೆ. ಪ್ರಸ್ತುತ ಕೋವಿಡ್‌ ಸ್ಥಿತಿ ಸಂದರ್ಭದಲ್ಲಿ ತನಿಖಾಧಿಕಾರಿಯೇ ಸ್ವಯಂ ಆಗಿ ಶವಪರೀಕ್ಷೆ ಕೈಬಿಡುವ ತೀರ್ಮಾನ ತೆಗೆದುಕೊಳ್ಳಬಹುದು ಎಂದು ವರದಿ ಪ್ರಮುಖವಾಗಿ ಉಲ್ಲೇಖಿಸಿದೆ.

ಅಂತ್ಯಕ್ರಿಯೆ: ಐಸಿಎಂಆರ್, ಕರಡು ಮಾರ್ಗದರ್ಶಿ ಸೂತ್ರಗಳ ಅನುಸಾರ ಕೋವಿಡ್ ತಪಾಸಣಾ ವರದಿ ನಿರೀಕ್ಷೆ ಇರುವ ಪ್ರಕರಣಗಳಲ್ಲಿ ವರದಿ ಕೈಸೇರುವವರೆಗೆ ಶವ ಒಯ್ಯಲು ಅವಕಾಶ ನೀಡಬಾರದು. ಅಗತ್ಯ ಪ್ರಕ್ರಿಯೆ ಬಳಿಕ ಜಿಲ್ಲಾಡಳಿತಕ್ಕೆ ಒಪ್ಪಿಸಬೇಕು.

ಯಾವುದೇ ಸಂದರ್ಭದಲ್ಲಿ ಮೃತನ ಇಬ್ಬರು ಸಂಬಂಧಿಕರಿಗಷ್ಟೇ ಹತ್ತಿರವಿರಲು ಅವಕಾಶ ಇರಬೇಕು ಹಾಗೂ ಪರಸ್ಪರ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಹೊದಿಸಿದ ಪಾರದರ್ಶಕ ಪ್ಲಾಸ್ಟಿಕ್ ಕವಚ ತೆಗೆಯದೇ ಶವ ಗುರುತಿಸುವಂತಾಗಬೇಕು ಎಂದರು.

ಸಂಬಂಧಿಸಿದ ಅಧಿಕಾರಿಗಳ ಉಪಸ್ಥಿತಿಯಲ್ಲೇ ಸ್ಮಶಾನಕ್ಕೆ ಶವ ಒಯ್ಯಬೇಕು. ಅಲ್ಲಿ, ಐವರು ಸಂಬಂಧಿಕರಿಗಷ್ಟೇ ಅವಕಾಶ ಇರಬೇಕು. ಅಂತರ ಕಾಯ್ದುಕೊಂಡಿರಬೇಕು.

ಶವವನ್ನು ಹೂಳುವ ಸಂದರ್ಭಗಳಲ್ಲಿ ಮೇಲ್ಭಾಗಕ್ಕೆ ಸಿಮೆಂಟ್‌ನಿಂದ ಮುಚ್ಚಬೇಕು ಹಾಗೂ ಆ ಜಾಗವನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ತಿಳಿಸಿದೆ. ಶವಕ್ಕೆ ಮುತ್ತಿಡುವುದು, ತಬ್ಬಿಕೊಳ್ಳುವುದು, ಶವಕ್ಕೆ ಸ್ನಾನಮಾಡಿಸುವ ಸಂಪ್ರದಾಯಗಳಿಗೆ ಯಾವುದೇ ಕಾರಣಕ್ಕೂ ಅವಕಾಶನೀಡಬಾರದು. ಸೋಂಕು ವ್ಯಾಪಿಸದಂತೆ ಎಲ್ಲ ಅಗತ್ಯ ಎಚ್ಚರಿಕೆಗಳನ್ನು ವಹಿಸಬೇಕು ಎಂದು ವರದಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT