ಹೆದ್ದಾರಿ ಬಳಕೆ ಶುಲ್ಕ ರದ್ದು ಮಾಡುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

7
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕಾರ್ಯದರ್ಶಿಯಿಂದ ಸ್ಪಷ್ಟನೆ

ಹೆದ್ದಾರಿ ಬಳಕೆ ಶುಲ್ಕ ರದ್ದು ಮಾಡುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

Published:
Updated:
ಹೆದ್ದಾರಿಯಲ್ಲಿ ಶುಲ್ಕ ಪಾವತಿ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕವನ್ನು ರದ್ದುಗೊಳಿಸುವ ಯಾವುದೇ ಚಿಂತನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

‘ಹೆದ್ದಾರಿ ಶುಲ್ಕ ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ ಮುಷ್ಕರ ನಡೆಸುತ್ತೇವೆ’ ಎಂದು ಲಾರಿ ಮಾಲೀಕರ ಸಂಘಟನೆಗಳು ಎಚ್ಚರಿಕೆ ನೀಡುತ್ತಿರುವ ಸಂದರ್ಭದಲ್ಲೇ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

‘ಸರ್ಕಾರವು ದೇಶದಾದ್ಯಂತ ಬೃಹತ್ ಹೆದ್ದಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಿದೆ. ಅದಕ್ಕೆಲ್ಲಾ ಭಾರಿ ಪ್ರಮಾಣದ ಬಂಡವಾಳ ಬೇಕಾಗುತ್ತದೆ. ಹೀಗಾಗಿ ಹೆದ್ದಾರಿ ಬಳಕೆ ಶುಲ್ಕವನ್ನು ರದ್ದುಪಡಿಸುವುದು ಹೆಚ್ಚು ಸೂಕ್ತವಾದ ಕ್ರಮವಲ್ಲ. ಆದರೆ, ಆ ಯೋಜನೆಗಳಿಂದ ಸಾರ್ವಜನಿಕರಿಗೂ ತುಂಬಾ ಅನುಕೂಲವಾಗಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕಾರ್ಯದರ್ಶಿ ಯದುವೀರ್ ಸಿಂಗ್ ಮಲಿಕ್ ಮಾಹಿತಿ ನೀಡಿದ್ದಾರೆ.

‘ಶುಲ್ಕವನ್ನು ರದ್ದುಪಡಿಸುವ ಬದಲಿಗೆ ಬೇರೊಂದು ಪರಿಹಾರ ಮಾರ್ಗವನ್ನು ಜಾರಿಗೆ ತರಲಿದ್ದೇವೆ. ಈಗ ವಾಹನಗಳು ಹೆದ್ದಾರಿಯಲ್ಲಿ ಎಷ್ಟೇ ದೂರ ಕ್ರಮಿಸಿದರೂ, ಪೂರ್ಣ ಪ್ರಮಾಣದ ಶುಲ್ಕವನ್ನೇ ಪಾವತಿ ಮಾಡಬೇಕಿದೆ. ಯಾವುದೇ ವಾಹನ ಹೆದ್ದಾರಿಯಲ್ಲಿ ಕ್ರಮಿಸಿದ ದೂರಕ್ಕಷ್ಟೇ ಶುಲ್ಕ ಪಾವತಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ. ಇದರಿಂದ ಬಳಕೆದಾರರ ಹೊರೆ ಕಡಿಮೆಯಾಗಲಿದೆ’ ಎಂದು ಅವರು ವಿವರಿಸಿದ್ದಾರೆ.

‘ಕ್ರಮಿಸಿದ ದೂರಕ್ಕಷ್ಟೇ ಶುಲ್ಕ ಪಾವತಿ ಮಾಡುವ ವ್ಯವಸ್ಥೆ ದೆಹಲಿಯ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ವೇಯಲ್ಲಿದೆ. ಅಲ್ಲಿ ನಿಯಂತ್ರಿತ ದ್ವಾರಗಳ ಮೂಲಕ ಮಾತ್ರ ವಾಹನಗಳು ಹೆದ್ದಾರಿ ಪ್ರವೇಶಿಸುತ್ತವೆ. ಹೀಗಾಗಿ ಯಾವ ವಾಹನ ಎ‌ಲ್ಲಿ ಹೆದ್ದಾರಿ ಪ್ರವೇಶಿಸಿತು ಮತ್ತು ಎಷ್ಟು ದೂರ ಕ್ರಮಿಸಿತು ಎಂಬುದರ ಮಾಹಿತಿ ಲಭ್ಯವಿರುತ್ತದೆ. ಆ ವ್ಯವಸ್ಥೆಯನ್ನೇ ಇತರ ಹೆದ್ದಾರಿಗಳಲ್ಲೂ ಅಳವಡಿಸಲು ಚಿಂತನೆ ನಡೆದಿದೆ’ ಎಂದು ಅವರು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !