ಹೆದ್ದಾರಿ ಟೋಲ್‌ ರದ್ದತಿ ಪ್ರಶ್ನೆಯೇ ಇಲ್ಲ: ಕೇಂದ್ರ

7

ಹೆದ್ದಾರಿ ಟೋಲ್‌ ರದ್ದತಿ ಪ್ರಶ್ನೆಯೇ ಇಲ್ಲ: ಕೇಂದ್ರ

Published:
Updated:
ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಸಂಗ್ರಹ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಶುಲ್ಕ ಪಾವತಿ ಸಮಯವನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದೂ ಹೆದ್ದಾರಿ ಸಚಿವಾಲಯ ಹೇಳಿದೆ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕವನ್ನು (ಟೋಲ್‌) ರದ್ದುಗೊಳಿಸುವ ಯಾವುದೇ ಚಿಂತನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

‘ಹೆದ್ದಾರಿ ಶುಲ್ಕ ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ ಮುಷ್ಕರ ನಡೆಸುತ್ತೇವೆ’ ಎಂದು ಲಾರಿ ಮಾಲೀಕರ ಸಂಘಟನೆಗಳು ಎಚ್ಚರಿಕೆ ನೀಡುತ್ತಿರುವ ಸಂದರ್ಭದಲ್ಲೇ ಸರ್ಕಾರ ತನ್ನ ನಿಲುವನ್ನು ತಿಳಿಸಿದೆ.

‘ಸರ್ಕಾರವು ದೇಶದಾದ್ಯಂತ ಬೃಹತ್ ಹೆದ್ದಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಿದೆ. ಅದಕ್ಕೆಲ್ಲಾ ಭಾರಿ ಪ್ರಮಾಣದ ಬಂಡವಾಳ ಬೇಕಾಗುತ್ತದೆ. ಹೀಗಾಗಿ ಹೆದ್ದಾರಿ ಬಳಕೆ ಶುಲ್ಕವನ್ನು ರದ್ದುಪಡಿಸುವುದು ಸೂಕ್ತವಾದ ಕ್ರಮವಲ್ಲ. ಆದರೆ, ಆ ಯೋಜನೆಗಳಿಂದ ಸಾರ್ವಜನಿಕರಿಗೂ ತುಂಬಾ ಅನುಕೂಲವಾಗಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕಾರ್ಯದರ್ಶಿ ಯದುವೀರ್ ಸಿಂಗ್ ಮಲಿಕ್ ಮಾಹಿತಿ ನೀಡಿದ್ದಾರೆ.

‘ಶುಲ್ಕವನ್ನು ರದ್ದುಪಡಿಸುವ ಬದಲಿಗೆ ಬೇರೊಂದು ಪರಿಹಾರ ಮಾರ್ಗವನ್ನು ಜಾರಿಗೆ ತರಲಿದ್ದೇವೆ. ಈಗ ವಾಹನಗಳು ಹೆದ್ದಾರಿಯಲ್ಲಿ ಎಷ್ಟೇ ದೂರ
ಕ್ರಮಿಸಿದರೂ, ಪೂರ್ಣ ಪ್ರಮಾಣದ ಶುಲ್ಕವನ್ನೇ ಪಾವತಿ ಮಾಡಬೇಕಿದೆ. ಯಾವುದೇ ವಾಹನ ಹೆದ್ದಾರಿಯಲ್ಲಿ ಕ್ರಮಿಸಿದ ದೂರಕ್ಕಷ್ಟೇ ಶುಲ್ಕ ಪಾವತಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ. ಇದರಿಂದ ಬಳಕೆದಾರರ ಹೊರೆ ಕಡಿಮೆಯಾಗಲಿದೆ’ ಎಂದು ಅವರು ವಿವರಿಸಿದ್ದಾರೆ.

‘ಕ್ರಮಿಸಿದ ದೂರಕ್ಕಷ್ಟೇ ಶುಲ್ಕ ಪಾವತಿ ಮಾಡುವ ವ್ಯವಸ್ಥೆ ದೆಹಲಿಯ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ವೇಯಲ್ಲಿದೆ. ಅಲ್ಲಿ ನಿಯಂತ್ರಿತ ದ್ವಾರಗಳ ಮೂಲಕ ಮಾತ್ರ ವಾಹನಗಳು ಹೆದ್ದಾರಿ ಪ್ರವೇಶಿಸುತ್ತವೆ. ಹೀಗಾಗಿ ಯಾವ ವಾಹನ ಎ‌ಲ್ಲಿ ಹೆದ್ದಾರಿ ಪ್ರವೇಶಿಸಿತು ಮತ್ತು ಎಷ್ಟು ದೂರ ಕ್ರಮಿಸಿತು ಎಂಬುದರ ಮಾಹಿತಿ ಲಭ್ಯವಿರುತ್ತದೆ. ಆ ವ್ಯವಸ್ಥೆಯನ್ನೇ ಇತರ ಹೆದ್ದಾರಿಗಳಲ್ಲೂ ಅಳವಡಿಸಲು ಚಿಂತನೆ ನಡೆದಿದೆ’ ಎಂದು ಅವರು ವಿವರಿಸಿದ್ದಾರೆ.

‘ಈ ವ್ಯವಸ್ಥೆಯನ್ನು ಎಲ್ಲೆಡೆ ಅಳವಡಿಸಲು ಸಾಧ್ಯವೇ? ಅದಕ್ಕೆಲ್ಲಾ ಎಷ್ಟು ವೆಚ್ಚವಾಗು ತ್ತದೆ ಎಂಬುದರ ಬಗ್ಗೆ ವಿವರ ಲಭ್ಯವಿಲ್ಲ. ಪ್ರತಿ ಹೆದ್ದಾರಿಯ ಪರಿಸ್ಥಿತಿಯೂ ಭಿನ್ನವಾಗಿದೆ. ಪೂರ್ಣಪ್ರಮಾಣದ ವಾಸ್ತವ ಚಿತ್ರವನ್ನು ಕಟ್ಟಿಕೊಡುವ ವಿಸ್ತೃತ ಯೋಜನಾ ವರದಿಯ (ಡಿಪಿಆರ್‌) ಅವಶ್ಯಕತೆ ಇದೆ. ಗೂಗಲ್ ನಕ್ಷೆಯನ್ನು ಆಧಾರವಾಗಿಟ್ಟುಕೊಂಡು ವರದಿ ಸಿದ್ಧಪಡಿಸುವವರಿಗಿಂತ, ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸುವ ತಜ್ಞರ ಅವಶ್ಯಕತೆ ಇದೆ’ ಎಂದು ಮಲಿಕ್ ಹೇಳಿದ್ದಾರೆ.

412 -ದೇಶದಾದ್ಯಂತ ಹೆದ್ದಾರಿಗಳಲ್ಲಿ ಇರುವ ಶುಲ್ಕ ಪಾವತಿ ಕೇಂದ್ರಗಳು (ಟೋಲ್‌ ಪ್ಲಾಜಾ)

220 -ಟೋಲ್ ಪ್ಲಾಜಾಗಳು ‘ನಿರ್ಮಾಣ–ನಿರ್ವಹಣೆ–ವರ್ಗಾವಣೆ’ ವ್ಯವಸ್ಥೆ ಅಡಿ ನಿರ್ಮಿಸಲಾದ ಹೆದ್ದಾರಿಗಳಲ್ಲಿವೆ

₹ 1.2 ಲಕ್ಷ ಕೋಟಿ -ಶುಲ್ಕ ರದ್ದುಪಡಿಸಿದರೆ, ಹೆದ್ದಾರಿ ನಿರ್ಮಿಸಿದ ಸಂಸ್ಥೆಗೆ ಸರ್ಕಾರ ನೀಡಬೇಕಾಗುವ ಪರಿಹಾರದ ಮೊತ್ತ

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 1

    Sad
  • 0

    Frustrated
  • 1

    Angry

Comments:

0 comments

Write the first review for this !