ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ವಿಚಾರ ಎತ್ತಬೇಡಿ: ಉಮಾಭಾರತಿ

Last Updated 4 ನವೆಂಬರ್ 2018, 20:31 IST
ಅಕ್ಷರ ಗಾತ್ರ

ಲಖಿಂಪುರ್ ಖೇರಿ (ಉತ್ತರಪ್ರದೇಶ):‘ಹಿಂದೂಗಳು ವಿಶ್ವದಲ್ಲೇ ಅತ್ಯಂತ ಸಹಿಷ್ಣುತೆ ಉಳ್ಳವರು. ಆದರೆ ಆಯೋಧ್ಯೆಯಲ್ಲಿ ರಾಮ ಮಂದಿರದ ಸಮೀಪ ಮಸೀದಿ ನಿರ್ಮಿಸುತ್ತೇವೆ ಎಂದರೆ, ಹಿಂದೂಗಳು ಅಸಹಿಷ್ಣುಗಳಾಗುತ್ತಾರೆ’ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಎಚ್ಚರಿಕೆ ನೀಡಿದ್ದಾರೆ.

‘ಪವಿತ್ರ ನಗರಿಗಳಾದ ಮೆಕ್ಕಾದಲ್ಲಿ ದೇವಾಲಯ ಮತ್ತು ವ್ಯಾಟಿಕನ್ ಸಿಟಿಯಲ್ಲಿ ಮಸೀದಿ ಇಲ್ಲ. ಹೀಗಿದ್ದ ಮೇಲೆ ಅಯೋಧ್ಯೆಯಲ್ಲಿ ಮಸೀದಿಯೂ ಇರಬೇಕು ಎಂಬುದು ಎಷ್ಟು ಸಮಂಜಸ. ಈ ವಿಚಾರದಲ್ಲಿ ರಾಜಕಾರಣಿಗಳು ರಾಜಕೀಯ ಮಾಡಬಾರದು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಎಲ್ಲ ಪಕ್ಷಗಳೂ ಬೆಂಬಲ ನೀಡಬೇಕು’ ಎಂದು ಅವರು ಕರೆ ನೀಡಿದ್ದಾರೆ.

‘ರಾಮ ಮಂದಿರ ನಿರ್ಮಾಣಕ್ಕೆ ಈ ಹಿಂದೆ ಹಲವು ಬಾರಿ ತಡೆ ಒಡ್ಡಿದ್ದರಿಂದ ಕಾಂಗ್ರೆಸ್‌ನ ಪಾಪ ಹೆಚ್ಚಾಗಿದೆ. ರಾಮ ಮಂದಿರ ಶಿಲಾನ್ಯಾಸಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನನ್ನ ಜತೆ ಅಯೋಧ್ಯೆಗೆ ಬರಲಿ. ಆಗ ಕಾಂಗ್ರೆಸ್‌ನ ಪಾಪವೆಲ್ಲಾ ಕಳೆಯುತ್ತದೆ’ ಎಂದು ಅವರು ಹೇಳಿದ್ದಾರೆ.

ಮಂದಿರ ತಡೆಯಲಾಗದು:‘ಅಯೋಧ್ಯೆಯಲ್ಲಿ ರಾಮನ ಮಹಾ ಮಂದಿರ ನಿರ್ಮಾಣವನ್ನು ಯಾವ ಶಕ್ತಿಯೂ ತಡೆಯಲಾಗದು’ ಎಂದು ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಘೋಷಿಸಿದ್ದಾರೆ.

‘ಬಿಜೆಪಿಯುರಾಮ ಮಂದಿರ ನಿರ್ಮಾಣವನ್ನು ಮೊದಲೂ ಬೆಂಬಲಿಸಿತ್ತು, ಈಗಲೂ ಬೆಂಬಲಿಸುತ್ತದೆ, ಮುಂದೆಯೂ ಬೆಂಬಲಿಸಲಿದೆ. ಆದರೆ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಆ ಬಗ್ಗೆ ಹೆಚ್ಚು ಮಾತನಾಡಲಾರೆ’ ಎಂದು ಅವರು ಹೇಳಿದ್ದಾರೆ.

‘ಆದರೆ ಒಂದಂತೂ ನಿಜ. ರಾಮ ಮಂದಿರವನ್ನು ನಿರ್ಮಿಸದೇ ಇರುವುದಿಲ್ಲ. ಆ ಸಮಯ ಬಂದೇ ಬರುತ್ತದೆ’ ಎಂದು ಅವರು ಹೇಳಿದ್ದಾರೆ.

**

ಸರಯೂ ತಟದಲ್ಲಿ ರಾಮನ ಪ್ರತಿಮೆ

ಲಖನೌ: ಅಯೋಧ್ಯೆಯಲ್ಲಿ ಸರಯೂ ನದಿಯ ತಟದಲ್ಲಿ ರಾಮನ151 ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ಸುಗ್ರೀವಾಜ್ಞೆ ತಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವಂತೆ ಒತ್ತಡ ಹೇರುತ್ತಿರುವ ಸಾಧುಸಂತರನ್ನು ತಕ್ಷಣಕ್ಕೆ ಸಮಾಧಾನಪಡಿಸಲು ರಾಜ್ಯ ಸರ್ಕಾರ ರಾಮನ ಪ್ರತಿಮೆಯ ಮೊರೆ ಹೋಗಿದೆ ಎಂದು ಮೂಲಗಳು ಹೇಳಿವೆ.

ಈ ಸಂಬಂಧ ಸರ್ಕಾರವು ಈಗಾಗಲೇ ಟೆಂಡರ್ ಕರೆದಿದೆ. ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ನಡೆಯಲಿರುವ ಮಹಾ ದೀಪೋತ್ಸವದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ವಿಚಾರವನ್ನು ಘೋಷಿಸುವ ಸಾಧ್ಯತೆ ಇದೆ. ಅಲ್ಲದೆ ಅಯೋಧ್ಯೆಯ ಸುಧಾರೀಕರಣ ಮತ್ತು ಸೌಂದರ್ಯೀಕರಣ ಯೋಜನೆಗಳನ್ನೂ ಘೋಷಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಎಲ್ಲಕ್ಕಿಂತ ದೊಡ್ಡ ಪ್ರತಿಮೆಯಾಗಬೇಕು:ಗುಜರಾತ್‌ನಲ್ಲಿ ನಿರ್ಮಿಸಿರುವ ಸರ್ದಾರ್ ಪಟೇಲರ ‘ಏಕತಾ ಪ್ರತಿಮೆ’ ಜಗತ್ತಿನಲ್ಲೇ ಅತ್ಯಂತ ಎತ್ತರದ್ದು. ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮನ ಪ್ರತಿಮೆ ಅದಕ್ಕಿಂತಲೂ ಎತ್ತರವಾಗಿರಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

**

‘ಅಪಾಯಕಾರಿ ಬೆಳವಣಿಗೆ’

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಹೋರಾಟ ಆರಂಭಿಸುತ್ತೇವೆ ಎಂದು ಆರ್‌ಎಸ್‌ಎಸ್‌ ಹೇಳಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಭಿಪ್ರಾಯಪಟ್ಟಿದೆ.

‘ಈ ಬೆಳವಣಿಗೆಗಳೆಲ್ಲವೂ ರಾಜಕೀಯ ಪ್ರೇರಿತವಾದದ್ದು. 2019ರ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರಲು ಹೀಗೆ ಮಾಡಲಾಗುತ್ತಿದೆ’ ಎಂದು ಅದು ಆರೋಪಿಸಿದೆ.

‘1992ರಲ್ಲಿ ಬಾಬರಿ ಮಸೀದಿ ಗಲಾಟೆ ನಡೆದಾಗ ಹಿಂದೂ–ಮುಸ್ಲಿಮರ ಮಧ್ಯೆ ಸಂಘರ್ಷ ದೊಡ್ಡದಿರಲಿಲ್ಲ. ಆದರೆ ಈಗ ಎರಡೂ ಸಮುದಾಯಗಳ ಮಧ್ಯೆ ಅಂತರ ಮತ್ತು ದ್ವೇಷ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಎಸ್‌ಎಸ್ ಹೋರಾಟ ನಡೆಸಿದರೆ ಅದು ಹಿಂಸಾಚಾರಕ್ಕೆ ದಾರಿಮಾಡಿಕೊಡುತ್ತದೆ’ ಎಂದು ಮಂಡಳಿಯು ಆತಂಕ ವ್ಯಕ್ತಪಡಿಸಿದೆ.

**

ರಾಮಜನ್ಮ ಭೂಮಿಯಲ್ಲಿ ಬಾಬರ್‌ನ ಹೆಸರಿನಲ್ಲಿ ಒಂದೇ ಒಂದು ಇಟ್ಟಿಗೆಯನ್ನು ಇಡಲೂ ನಾವು ಬಿಡುವುದಿಲ್ಲ ಎಂದು ನಾನು ಜನರಿಗೆ ದೃಢ ಭರವಸೆ ನೀಡುತ್ತೇನೆ
-ಕೇಶವ್ ಪ್ರಸಾದ್ ಮೌರ್ಯ, ಉತ್ತರಪ್ರದೇಶ ಉಪಮುಖ್ಯಮಂತ್ರಿ

**

ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ನಾವೆಲ್ಲರೂ ತಾಳ್ಮೆಯಿಂದ ಕಾಯಬೇಕು. ತೀರ್ಪು ಏನೇ ಆಗಿರಲಿ, ಎಲ್ಲರೂ ಅದಕ್ಕೆ ಬದ್ಧವಾಗಿರಲೇಬೇಕು. ಇದರಿಂದ ದೇಶದಲ್ಲಿನ ಶಾಂತಿ ಕಾಪಾಡಿಕೊಳ್ಳಬಹುದು
-ಮೌಲಾನಾ ವಾಲಿ ರಹಮಾನಿ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT