ಹಂತಕರು, ಅತ್ಯಾಚಾರಿಗಳು, ಭ್ರಷ್ಟರಿಗಿಲ್ಲ ಬಿಡುಗಡೆ ಭಾಗ್ಯ

7
ಮಹಾತ್ಮ ಗಾಂಧಿ 150ನೇ ಜನ್ಮದಿನ ಪ್ರಯುಕ್ತ ಕೈದಿಗಳ ಕ್ಷಮಾದಾನ ಯೋಜನೆ

ಹಂತಕರು, ಅತ್ಯಾಚಾರಿಗಳು, ಭ್ರಷ್ಟರಿಗಿಲ್ಲ ಬಿಡುಗಡೆ ಭಾಗ್ಯ

Published:
Updated:

ನವದೆಹಲಿ: ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನೋತ್ಸವದ ಭಾಗವಾಗಿ ಅಕ್ಟೋಬರ್‌ 2ರಿಂದ ಒಂದು ವರ್ಷ ಕೇಂದ್ರ ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ಕೈದಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡುವ ಯೋಜನೆಯೂ ಇದೆ. ಆದರೆ, ಕೊಲೆ, ಅತ್ಯಾಚಾರ ಅಥವಾ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿವವರಿಗೆ ಈ ಯೋಜನೆ ಅಡಿಯಲ್ಲಿ ಕ್ಷಮೆ ನೀಡಲಾಗುವುದಿಲ್ಲ. ಇದು ರಾಜಕಾರಣಿಗಳಿಗೂ ಅನ್ವಯ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 

ಈ ಯೋಜನೆಯ ಅಡಿಯಲ್ಲಿ ಕ್ಷಮೆಗೆ ಅರ್ಹರಾದ ಕೈದಿಗಳನ್ನು ಈ ಅಕ್ಟೊಬರ್‌ 2, ಮುಂದಿನ ವರ್ಷದ ‍ಏಪ್ರಿಲ್‌ 6 ಮತ್ತು ಅಕ್ಟೊಬರ್‌ 2ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ‌ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ಕ್ಷಮಾದಾನ ಪಡೆಯುವ ಅರ್ಹತೆ ಯಾರಿಗೆಲ್ಲ ಇದೆ ಎಂಬ ಮಾರ್ಗದರ್ಶಿಸೂತ್ರವನ್ನು ಕೇಂದ್ರವು ಎಲ್ಲ ರಾಜ್ಯ ಸರ್ಕಾರಗಳಿಗೆ ಈಗಾಗಲೇ ಕಳುಹಿಸಿದೆ. ಅರ್ಹ ಕೈದಿಗಳನ್ನು ಈ ಅಕ್ಟೋಬರ್‌ 2ರಂದು ಬಿಡುಗಡೆ ಮಾಡಲು ಸಾಧ್ಯವಾಗುವಂತೆ ಪಟ್ಟಿಯನ್ನು ಆಗಸ್ಟ್‌ 15ರೊಳಗೆ ಸಿದ್ಧಪಡಿಸಲು ಕೇಂದ್ರ ಸೂಚಿಸಿದೆ. 

ಕಾರಾಗೃಹಗಳು ಮತ್ತು ಕೈದಿಗಳ ನಿರ್ವಹಣೆ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ. ಹಾಗಾಗಿ ಕ್ಷಮಾದಾನಕ್ಕೆ ಅರ್ಹತೆ ಇರುವ ಕೈದಿಗಳ ಪಟ್ಟಿ ಸಿದ್ಧಪಡಿಸಲು ರಾಜ್ಯ ಮಟ್ಟದ ಸಮಿತಿ ರಚಿಸಲು ಸೂಚಿಸಲಾಗಿದೆ. ಹೀಗೆ ಸಿದ್ಧಪಡಿಸಲಾದ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ ಅವರ ಅನುಮೋದನೆ ಪಡೆಯಬೇಕಾಗುತ್ತದೆ. 

ಕೇಂದ್ರ ಸರ್ಕಾರದ ಅನುಮತಿ ಅಗತ್ಯ ಇದ್ದರೆ ಅಂಥವರ ಹೆಸರು ಇರುವ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಬೇಕಾಗುತ್ತದೆ. 

ಯಾರು ಅರ್ಹರು?
* 55 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಮಹಿಳಾ ಕೈದಿಗಳು ಮತ್ತು ತೃತೀಯ ಲಿಂಗಿ ಕೈದಿಗಳು
* 60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಪುರುಷ ಕೈದಿಗಳು
* ಶೇ 70ರಷ್ಟು ಅಂಗವೈಕಲ್ಯ ಇರುವ ಕೈದಿಗಳು (ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಸಲ್ಲಿಸಬೇಕು)
* ಮಾರಣಾಂತಿಕ ಕಾಯಿಲೆ ಹೊಂದಿರುವವರು (ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಸಲ್ಲಿಸಬೇಕು)
* ಶಿಕ್ಷೆಯ ಮೂರನೇ ಎರಡು ಭಾಗ (ಶೇ 66ರಷ್ಟು) ‍ಪೂರೈಸಿದ ಕೈದಿಗಳು
* ಒಟ್ಟು ಶಿಕ್ಷೆಯ ಅರ್ಧ ಭಾಗದಷ್ಟನ್ನು ಪೂರೈಸಿರಬೇಕು

ಯಾರಿಗೆ ಅರ್ಹತೆ ಇಲ್ಲ?
* ಮರಣ ದಂಡನೆ ನೀಡುವುದಕ್ಕೆ ಅವಕಾಶ ಇರುವ ಅಪರಾಧ ಎಸಗಿದವರು ಅಥವಾ ಮರಣ ದಂಡನೆಯಿಂದ ಕ್ಷಮಾದಾನ ಪಡೆದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವವರು
* ಮರಣ ದಂಡನೆ ನೀಡಬಹುದಾದ ಅಪರಾಧ ಎಸಗಿರುವವರು
* ಜೀವಾವಧಿ ಶಿಕ್ಷೆ ನೀಡಬಹುದಾದ ಅಪರಾಧ ಎಸಗಿರುವವರು
* ಭಯೋತ್ಪಾದನಾ ಚಟುವಟಿಕೆಗಾಗಿ ಶಿಕ್ಷೆ ಅನುಭವಿಸುತ್ತಿರುವವರು, ಟಾಡಾ, ಪೋಟಾ, ರಾಷ್ಟ್ರೀಯ ಭದ್ರತಾ ಕಾಯ್ದೆ, ಸ್ಫೋಟಕಗಳ ಕಾಯ್ದೆ ಮುಂತಾದವುಗಳ ಅಡಿಯಲ್ಲಿ ಶಿಕ್ಷೆಗೆ ಒಳಗಾದವರು
* ವರದಕ್ಷಿಣೆಗಾಗಿ ಕೊಲೆ, ಕೋಟಾ ನೋಟು ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವವರು, ಭ್ರಷ್ಟಾಚಾರ ತಡೆ ಕಾಯ್ದೆ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷೆಗೆ ಒಳಗಾಗಿರುವವರು

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !