ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪು: ವಕ್ಫ್‌ ಸದಸ್ಯರಲ್ಲಿ ಭಿನ್ನಮತ

Last Updated 20 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆ ತೀರ್ಪು ಮರುಪರಿಶೀಲನೆ ಅರ್ಜಿ ಸಲ್ಲಿಸುವ ವಿಚಾರದಲ್ಲಿ ಸುನ್ನಿ ಕೇಂದ್ರ ವಕ್ಫ್‌ ಮಂಡಳಿಯ ಸದಸ್ಯರ ನಡುವೆ ತೀವ್ರ ಭಿನ್ನಮತ ಉಂಟಾಗಿದೆ.

ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ವಿವಾದಿತ ಸ್ಥಳವನ್ನು ಹಿಂದೂಗಳಿಗೆ ನೀಡಿದೆ. ಪ್ರಕರಣದ ಮುಖ್ಯ ಕಕ್ಷಿದಾರರಾಗಿದ್ದ ಸುನ್ನಿ ಕೇಂದ್ರ ವಕ್ಫ್‌ ಮಂಡಳಿಗೆ ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಜಮೀನು ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಈ ಜಮೀನು ಪಡೆದುಕೊಳ್ಳುವ ವಿಷಯದಲ್ಲಿಯೂ ಮಂಡಳಿಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ.

ಇದೇ 26ರಂದು ಮಂಡಳಿಯ ಸಭೆ ಕರೆಯಲಾಗಿದೆ.

ಬಾಬರಿ ಮಸೀದಿಯ ಬದಲಿಗೆ ಐದು ಎಕರೆ ಜಮೀನು ಪಡೆಯುವುದಕ್ಕೆ ಮಂಡಳಿಯ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡಳಿಯು ಮರುಪರಿಶೀಲನೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಅಧ್ಯಕ್ಷ ಝಫರ್‌ ಫರೂಕಿ ಅವರು ಹೇಳಿದ್ದಾರೆ. ಈ ಹೇಳಿಕೆಯನ್ನು ಕೆಲವು ಸದಸ್ಯರು ಟೀಕಿಸಿದ್ದಾರೆ. ಹಾಗಾಗಿ, 26ರಂದು ನಡೆಯುವ ಸಭೆಯಲ್ಲಿ ಗದ್ದಲ ಉಂಟಾಗುವ ಸಾಧ್ಯತೆ ಇದೆ.

ತೀರ್ಪು ಮರುಪರಿಶೀಲನೆ ಅರ್ಜಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿದೆ.

ವಕ್ಫ್‌ ಮಂಡಳಿಗೆ ಜಮೀನು ಖರೀದಿಸುವಾಗ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪ ಫರೂಕಿ ಅವರ ಮೇಲೆ ಇದೆ. ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಶಿಫಾರಸನ್ನೂ ಮಾಡಿದೆ.

ಈ ಆರೋಪ‍ದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸರ್ಕಾರದ ಜತೆ ಉತ್ತಮ ಸಂಬಂಧ ಉಳಿಸಿಕೊಳ್ಳಲು ಫರೂಕಿ ಬಯಸಿದ್ದಾರೆ. ಹಾಗಾಗಿಯೇ ಪುನರ್‌ ವಿಮರ್ಶೆ ಅರ್ಜಿ ಸಲ್ಲಿಸದಿರಲು ಮತ್ತು ಐದು ಎಕರೆ ಜಮೀನು ಪಡೆದುಕೊಳ್ಳಲು ಅವರು ನಿರ್ಧರಿಸಿದ್ದಾರೆ ಎಂದು ಅವರ ವಿರೋಧಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT