ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸೇನಾಧಿಕಾರಿ ನಿರ್ಮಲಾ ಸೀತಾರಾಮನ್ ಮಗಳಲ್ಲ: ರಕ್ಷಣಾ ಸಚಿವಾಲಯ ಸ್ಪಷ್ಟನೆ

ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವುದು ಸುಳ್ಳು ಸುದ್ದಿ
Last Updated 5 ಜನವರಿ 2019, 7:56 IST
ಅಕ್ಷರ ಗಾತ್ರ

ಬೆಂಗಳೂರು:ಸೇನಾಧಿಕಾರಿಯೊಬ್ಬರ ಜತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಿಂತಿರುವ ಫೋಟೊವೊಂದು ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಕ್ಷಣಾ ಸಚಿವರು ತಮ್ಮ ಮಗಳ ಜತೆ ನಿಂತಿರುವ ಫೋಟೊ ಎಂಬ ಅಡಿಬರಹಗಳುಳ್ಳ ಸಂದೇಶಗಳು ವ್ಯಾಪಕವಾಗಿ ಹರಡಿವೆ. ಆದರೆ, ಆ ಫೋಟೊ ನಿರ್ಮಲಾ ಸೀತಾರಾಮನ್ ಮಗಳದ್ದಲ್ಲ ಎಂಬುದನ್ನು ರಕ್ಷಣಾಸಚಿವಾಲಯವೇ ಸ್ಪಷ್ಟಪಡಿಸಿದ್ದು, ವೈರಲ್ ಆಗಿರುವುದು ಸುಳ್ಳು ಸುದ್ದಿ ಎಂಬುದು ಬಯಲಾಗಿದೆ.

‘ವಿ ಸಪೋರ್ಟ್‌ ನರೇಂದ್ರ ಮೋದಿ’ ಎಂಬ ಫೇಸ್‌ಬುಕ್‌ ಗ್ರೂಪ್‌ನಲ್ಲಿ ‘ಮಗಳ ಜತೆ ನಿಂತಿರುವ ನಿರ್ಮಲಾ ಸೀತಾರಾಮನ್’ ಎಂಬ ಬರಹದ ಜತೆ ಈ ಫೋಟೊವನ್ನು ಡಿಸೆಂಬರ್ 30ರಂದು ಪೋಸ್ಟ್ ಮಾಡಲಾಗಿತ್ತು. ಈ ಸಂದೇಶ ಸುಮಾರು 890ಕ್ಕೂ ಹೆಚ್ಚು ಶೇರ್ ಆಗಿದ್ದು, 15 ಸಾವಿರ ಲೈಕ್‌ ಪಡೆದಿದೆ.

‘ಭಾ.ಜ.ಪಾ. ಮಿಷನ್ 2019’ ಎಂಬ ಮತ್ತೊಂದು ಫೇಸ್‌ಬುಕ್ ಪುಟದಲ್ಲಿಯೂ ಇದೇ ಸಂದೇಶ ಪೋಸ್ಟ್ ಮಾಡಲಾಗಿದ್ದು, 730ಕ್ಕೂ ಹೆಚ್ಚು ಶೇರ್ ಆಗಿದೆ. 7,000ಕ್ಕೂ ಹೆಚ್ಚು ಲೈಕ್ ದೊರೆತಿದೆ.

‘ಇಂಡಿಯನ್ ಆರ್ಮಿ ಪ್ರೊಟೆಕ್ಟ್ ಅಸ್’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿಯೂ ಫೋಟೊ ಶೇರ್ ಮಾಡಲಾಗಿದ್ದು, ‘ಉತ್ತಮ ಚಿತ್ರ, ತಾಯಿ ಮತ್ತು ಮಗಳು’ ಎಂದು ಬರೆಯಲಾಗಿದೆ. ಈ ಸಂದೇಶ 5,000ಕ್ಕೂ ಹೆಚ್ಚು ಶೇರ್ ಆಗಿದ್ದು, 25 ಸಾವಿರ ಲೈಕ್ ಗಳಿಸಿದೆ.

ಟ್ವಿಟರ್‌ನಲ್ಲಿಯೂ ಫೋಟೊ ವೈರಲ್ ಆಗಿದೆ. @Ashok6510 ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ ಆದ ಸಂದೇಶ 400 ಬಾರಿ ರಿಟ್ವೀಟ್ ಆಗಿದ್ದು, 900ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿಯೂ ಈ ಫೋಟೊ ವೈರಲ್ ಆಗಿದೆ.

‘ಮಗಳ ಜತೆ ನಿಂತಿರುವ ನಿರ್ಮಲಾ ಸೀತಾರಾಮನ್’ ಎಂಬ ಬರಹದ ಜತೆ ಫೋಟೊ ಪೋಸ್ಟ್ ಮಾಡಿದ ಬಹುತೇಕ ಮಂದಿಯನ್ನು ಹಿರಿಯ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿದ್ದಾರೆ ಎಂಬುದೂ ತಿಳಿದುಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರೈಲ್ವೆ ಸಚಿವ ಪೀಯೂಷ್ ಗೋಯಲ್, ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಫಾಲೋ ಮಾಡುತ್ತಿರುವವರೂ ಸುಳ್ಳು ಸುದ್ದಿ ಹರಡಿದವರಲ್ಲಿ ಸೇರಿದ್ದಾರೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ಬಿಜೆಪಿ ಯುವ ಮೋರ್ಚಾ ಸದಸ್ಯ ಎಂದು ಹೇಳಿಕೊಂಡಿರುವ ರೂಪ್ ದಾರಕ್ ಎಂಬುವವರೂ ಟ್ವಿಟರ್‌ನಲ್ಲಿ ಸುಳ್ಳು ಸಂದೇಶ ಹರಡಿದ್ದು, 140ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.

ರಕ್ಷಣಾ ಸಚಿವರ ಮಗಳಲ್ಲ: ಸಚಿವಾಲಯ ಸ್ಪಷ್ಟನೆ

ನಕಲಿ ಸಂದೇಶವುಳ್ಳ ಫೋಟೊ ವೈರಲ್ ಆಗುತ್ತಿದ್ದಂತೆಯೇ ರಕ್ಷಣಾ ಸಚಿವಾಲಯ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದೆ.

‘ಸ್ಪಷ್ಟೀಕರಣ: ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕವಾಗಿರುವ ಸೇನಾಧಿಕಾರಿಯ ಮನವಿಯ ಮೇರೆಗೆ ಈ ಫೋಟೊ ತೆಗೆಯಲಾಗಿದೆ. ಸೇನಾಧಿಕಾರಿಯು ರಕ್ಷಣಾ ಸಚಿವರ ಮಗಳು ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಉಲ್ಲೇಖವಾಗಿದೆ. ಆದರೆ, ಫೊಟೊದಲ್ಲಿರುವುದು ರಕ್ಷಣಾ ಸಚಿವರ ಮಗಳಲ್ಲ’ ಎಂದು ರಕ್ಷಣಾ ಸಚಿವಾಲಯ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ.

ಫೊಟೊದಲ್ಲಿರುವುದು ಈಚೆಗೆಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕವಾಗಿರುವ ನಿಖಿತಾ ವೀರಯ್ಯ ಎಂಬುವವರು. ನಿರ್ಮಲಾ ಸೀತಾರಾಮನ್ ಮಗಳ ಹೆಸರು ವಾಙ್ಮಯಿ ಪರಕಲ ಎಂದು ಬೂಮ್‌ಲೈವ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT