ಗುರುವಾರ , ನವೆಂಬರ್ 21, 2019
20 °C
ಕರ್ತಾರ್‌ಪುರ ಕಾರಿಡಾರ್ ತರಾತುರಿಯಲ್ಲಿ ಪೂರ್ಣ; ಪಾಕ್ ನಡೆಯ ಹಿಂದೆ ರಹಸ್ಯ ಕಾರ್ಯಸೂಚಿ

ಪ್ರತ್ಯೇಕತಾವಾದಕ್ಕೆ ಪಾಕ್ ಕುಮ್ಮಕ್ಕು? ಭಾರತ ಶಂಕೆ

Published:
Updated:
Prajavani

ನವದೆಹಲಿ: ಪಂಜಾಬ್‌ನಲ್ಲಿ ಪ್ರತ್ಯೇಕತಾವಾದವನ್ನು ಪ್ರೋತ್ಸಾಹಿಸಲು ಪಾಕಿಸ್ತಾನದ ಸೇನೆಯು ಕರ್ತಾರ್‌ಪುರ ಕಾರಿಡಾರ್ ಯೋಜನೆಯನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಒಂದು ವೇಳೆ ಪಾಕಿಸ್ತಾನವು ಗುಪ್ತ ಕಾರ್ಯಸೂಚಿಯನ್ನು ಹೊಂದಿದ್ದಲ್ಲಿ, ಭದ್ರತಾ ಪಡೆಗಳು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾರತ ಬುಧವಾರ ಸ್ಪಷ್ಟಪಡಿಸಿದೆ. 

ಖಲಿಸ್ತಾನ್ ಪ್ರತ್ಯೇಕತಾವಾದಿಗಳನ್ನು ಒಳಗೊಂಡ ವಿಡಿಯೊವನ್ನು ಪಾಕಿಸ್ತಾನ ಬಿಡುಗಡೆ ಮಾಡಿದ್ದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‌

ಸೇನೆಯ ನೇತೃತ್ವದಲ್ಲಿ ಯೋಜನೆಯನ್ನು ಅತ್ಯಂತ ಉತ್ಸಾಹ ಹಾಗೂ ಸಮರೋಪಾದಿಯಲ್ಲಿ ಪೂರ್ಣಗೊಳಿಸಿದ ಪಾಕಿಸ್ತಾನದ ನಡೆಯ ಹಿಂದೆ ಪ್ರತ್ಯೇಕತಾವಾದವನ್ನು ಪ್ರೋತ್ಸಾಹಿಸುವ ಕಾರ್ಯಸೂಚಿ ಇದೆ ಎಂದು ಭಾರತ ಸಂಶಯ ವ್ಯಕ್ತಪಡಿಸಿದೆ. ಸಿಖ್ ಮತ್ತು ಹಿಂದೂ ಸಮುದಾಯದ ನಡುವೆ ಬಿಕ್ಕಟ್ಟ ಸೃಷ್ಟಿಸುವ ಯತ್ನ ಮಾಡಲಾಗುತ್ತಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ. 

ನವೆಂಬರ್ 9ರಂದು ಕಾರಿಡಾರ್ ಉದ್ಘಾಟನೆಯಾಗಲಿದ್ದು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸೇರಿದಂತೆ ಗಣ್ಯರನ್ನೊಳಗೊಂಡ 550 ಸಿಖ್ ಯಾತ್ರಿಕರ ನಿಯೋಗ ಶನಿವಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್, ಶಾಸಕರು, ಗಣ್ಯರು ಗುರುದ್ವಾರಕ್ಕೆ ಭೇಟಿ ನೀಡಲಿದ್ದಾರೆ. 

ಭಾರತ ವಿರೋಧಿ ಶಕ್ತಿಗಳು ಯಾತ್ರಾರ್ಥಿಗಳ ತಂಡವನ್ನು ಗುರಿಯಾಗಿಸುವ ಸಾಧ್ಯತೆ ಇದ್ದು, ತಂಡಕ್ಕೆ ಗರಿಷ್ಠ ಭದ್ರತೆ ಒದಗಿಸುವಂತೆ ಪಾಕಿಸ್ತಾನವನ್ನು ಭಾರತ ಕೋರಿದೆ. 

ಕರ್ತಾರ್‌ಪುರ ಸಾಹಿಬ್‌ ಭೇಟಿಗೆ ಪಾಸ್‌ಪೋರ್ಟ್ ಅಗತ್ಯವೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಭಾರತವು ಕೇಳಿಕೊಂಡಿದೆ. 

ಪಾಕ್‌ ವಿಡಿಯೊದಲ್ಲಿ ಪ್ರತ್ಯೇಕತಾವಾದಿಗಳು!
ಚಂಡೀಗಡ: ಐತಿಹಾಸಿಕ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಗೂ ಮುನ್ನ ಪಾಕಿಸ್ತಾನ ಸರ್ಕಾರ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ, ಜರ್ನೈಲ್ ಸಿಂಗ್ ಬಿಂದ್ರನ್‌ವಾಲಾ ಸೇರಿದಂತೆ ಖಲಿಸ್ತಾನ ಪ್ರತ್ಯೇಕತಾವಾದಿ ಹೋರಾಟಗಾರರ ಚಿತ್ರ ಪ್ರದರ್ಶಿಸಿರುವುದು ವಿವಾದ ಸೃಷ್ಟಿಸಿದೆ. 

ವಿಡಿಯೊದಲ್ಲಿ, ‘1984ರ ಆಪರೇಷನ್ ಬ್ಲೂಸ್ಟಾರ್‌’ನಲ್ಲಿ ಹತ್ಯೆಯಾಗಿದ್ದ ಮೇಜರ್ ಜನರಲ್ ಸುಬೇಗ್ ಸಿಂಗ್ ಮತ್ತು ಅಮ್ರಿಕ್ ಸಿಂಗ್ ಖಲ್ಸಾ ಅವರ ಚಿತ್ರಗಳನ್ನೂ ಬಳಸಿಕೊಳ್ಳಲಾಗಿದೆ. ಅಮೃತಸರದಲ್ಲಿರುವ ಪ್ರಸಿದ್ಧ ಸ್ವರ್ಣಮಂದಿರದಲ್ಲಿ ಅಡಗಿದ್ದ ಈ ಮೂವರನ್ನು ಸೇನಾ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು. 

ವಿಡಿಯೊದಲ್ಲಿ ಏನಿದೆ: ಸಿಧು ಅವರ ಚಿತ್ರದೊಂದಿಗೆ ವಿಡಿಯೊ ಆರಂಭವಾಗುತ್ತದೆ. ಹಾಡಿನ ಹಿನ್ನೆಲೆಯಲ್ಲಿ, ಸಿಖ್ ಸಮುದಾಯದ ಯಾತ್ರಾರ್ಥಿಗಳು ಪಾಕಿಸ್ತಾನದ ಗುರುದ್ವಾರಕ್ಕೆ ಭೇಟಿ ನೀಡುತ್ತಿರುವ ದೃಶ್ಯಗಳಿವೆ. ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಕಳೆದ ನವೆಂಬರ್‌ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ದೃಶ್ಯವನ್ನೂ ಬಳಸಿಕೊಳ್ಳಲಾಗಿದೆ. 

ಪೋಸ್ಟರ್ ವಿವಾದ: ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ನಿಮಿತ್ತ ಅಮೃತಸರದಲ್ಲಿ ತಲೆಎತ್ತಿದ್ದ ಬೃಹತ್ ಪೋಸ್ಟರ್‌ನಲ್ಲಿ ನವಜೋತ್ ಸಿಂಗ್ ಸಿಧು ಜೊತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಣಿಸಿಕೊಂಡಿರುವ ಚಿತ್ರ ಆಕ್ಷೇಪಕ್ಕೆ ಕಾರಣವಾಗಿದೆ. ಇಮ್ರಾನ್ ಹಾಗೂ ಸಿಧು ಅವರು ಕಾರಿಡಾರ್ ಸಾಕಾರಗೊಳಿಸಿದ ‘ಹೀರೋಗಳು’ ಎಂದು ಉಲ್ಲೇಖಿಸಲಾಗಿತ್ತು.

ಬುಧವಾರ ಈ ಪೋಸ್ಟರ್‌ ತೆರವುಗೊಳಿಸ ಲಾಯಿತು. ಕಾರಿಡಾರ್ ಉದ್ಘಾಟನೆಗೆ ಬರುವಂತೆ ಸಿಧು ಅವರಿಗೆ ಇಮ್ರಾನ್ ಖಾನ್ ಆಹ್ವಾನ ನೀಡಿದ್ದಾರೆ.

ಸಿಧು ಅವರು ವಿದೇಶಾಂಗ ಇಲಾಖೆಯಿಂದ ಅನುಮತಿ ಕೋರಿ ಎರಡು ಬಾರಿ ಪತ್ರ ಬರೆದಿದ್ದಾರೆ. ಇದಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.

ಪ್ರತಿಕ್ರಿಯಿಸಿ (+)