ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ತೆರೆಯದ ಜಿಲ್ಲಾಸ್ಪತ್ರೆ ಕ್ಯಾಂಟೀನ್!

ಉದ್ಘಾಟನೆ ದಿನ ಮಾತ್ರ ಕಾರ್ಯನಿರ್ವಹಣೆ; ರಿಯಾಯಿತಿ ದರದ ಊಟೋಪಚಾರ ಮತ್ತೆ ಮರೀಚಿಕೆ
Last Updated 30 ಮಾರ್ಚ್ 2018, 5:33 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ನವನಗರದ ಜಿಲ್ಲಾ ಆಸ್ಪತ್ರೆಯ ಆವರಣದ ನಾಗರಿಕ ಸೌಲಭ್ಯಗಳ ಸಂಕೀರ್ಣದಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ರಿಯಾಯಿತಿ ದರದಲ್ಲಿ ಊಟೋಪಚಾರ ಒದಗಿಸಲು ಆರಂಭಿಸಲಾಗಿದ್ದ ಕ್ಯಾಂಟೀನ್ ಒಂದು ದಿನ ಮಾತ್ರ ಕಾರ್ಯನಿರ್ವಹಿಸಿದೆ.ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿಂದಿನ ದಿನ ಮಾರ್ಚ್‌ 26ರಂದು ಶಾಸಕ ಎಚ್.ವೈ.ಮೇಟಿ ಕ್ಯಾಂಟೀನ್‌ಗೆ ಚಾಲನೆ ನೀಡಿದ್ದರು. ಅಂದು ಮಾತ್ರ ಕಾರ್ಯನಿರ್ವಹಿಸಿದ್ದ ಕ್ಯಾಂಟೀನ್ ಮರುದಿನದಿಂದ ಬಾಗಿಲು ಮುಚ್ಚಿದೆ. ಇದರಿಂದ ರೋಗಿಗಳು ದುಬಾರಿ ಹಣ ತೆತ್ತು ಮತ್ತೆ ಹೊರಗಿನಿಂದ ಊಟೋಪಹಾರ ತರಬೇಕಿದೆ.

ನಾಗರಿಕ ಸೌಲಭ್ಯಗಳ ಸಂಕೀರ್ಣದಲ್ಲಿ ಕ್ಯಾಂಟೀನ್, ಹಾಲಿನಬೂತ್, ಹಣ್ಣಿನ ಅಂಗಡಿ ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅದರಲ್ಲಿ ಮೊದಲ ಹಂತವಾಗಿ ಕ್ಯಾಂಟೀನ್ ಹಾಗೂ ಹಾಲಿನ ಬೂತ್ ಆರಂಭಿಸಲಾಗಿತ್ತು. ದಿನಕ್ಕೆ ಒಂದು ಸಾವಿರ ಜನರಿಗೆ ಇಲ್ಲಿ ರಿಯಾಯಿತಿ ದರದಲ್ಲಿ ಊಟೋಪಹಾರ ಕಲ್ಪಿಸಬೇಕಿದೆ. ಈಗ ಕ್ಯಾಂಟೀನ್ ಬಾಗಿಲು ಮುಚ್ಚಿದೆ. ಹಾಲಿನ ಬೂತ್ ಮಾತ್ರ ಈಗ ಕಾರ್ಯನಿರ್ವಹಿಸುತ್ತಿದೆ.

ಚುನಾವಣೆ ಗಿಮಿಕ್: ‘ಯಾವುದೇ ಕ್ಷಣದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಬಹುದು ಎಂಬ ಕಾರಣಕ್ಕೆ ಶಾಸಕರು ತರಾತುರಿಯಲ್ಲಿ ಕ್ಯಾಂಟೀನ್ ಉದ್ಘಾಟಿಸಿದರು. ಇದರಿಂದ ಪ್ರಚಾರ ಮಾತ್ರ ದೊರೆಯಿತು. ರೋಗಿಗಳಿಗೆ ಯಾವುದೇ ಉಪಯೋಗವಾಗಲಿಲ್ಲ’ ಎಂದು ನವನಗರದ ನಿವಾಸಿ ಮಹಾಂ ತಪ್ಪ ಜೋಗಿನ ಆರೋಪಿಸುತ್ತಾರೆ. ಪಾತ್ರೆ–ಪಡಗ ತರಲು ಹೋಗಿದ್ದಾರೆ: ‘ಕ್ಯಾಂಟೀನ್ ಬಾಗಿಲು ಹಾಕಿರುವ ಬಗ್ಗೆ ಗುತ್ತಿಗೆದಾರರನ್ನು ವಿಚಾರಿಸಿ ದ್ದೇನೆ. ಅವರು ಪಾತ್ರೆ–ಪಡಗ ತರಬೇಕಿರುವು ದರಿಂದ ಹುಬ್ಬಳ್ಳಿಗೆ ಹೋಗಬೇಕಿದೆ. ದಿನ ಚಲೋ ಇದ್ದ ಕಾರಣ ಅಂದು ಉದ್ಘಾಟನೆ ಮಾಡಲಾಗಿತ್ತು ಎಂದು ಹೇಳಿದ್ದಾಗಿ’ ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಅನಂತರಡ್ಡಿ ರಡ್ಡೇರ ‘ಪ್ರಜಾವಾಣಿ’ಗೆ ತಿಳಿಸಿದರು.‘ಗುತ್ತಿಗೆದಾರರಿಗೆ ಕ್ಯಾಂಟೀನ್‌ ಗುತ್ತಿಗೆ ಸರಿಯಾಗಿ ನಡೆಸಿಕೊಂಡು ಹೋಗಬೇಕಿದೆ. ಸೂಕ್ತ ಕಾರಣ ಇದ್ದರೆ ಮಾತ್ರ ಬಾಗಿಲು ಹಾಕಲಿ. ಇಲ್ಲದಿದ್ದರೆ ನೋಟಿಸ್ ನೀಡಿ ಬದ ಲಾವಣೆ ಮಾಡಲಾಗುವುದು’ ಎಂದು ರಡ್ಡೇರ ತಿಳಿಸಿದರು.

ಆರು ತಿಂಗಳು ಖಾಲಿ ಬಿದ್ದಿತ್ತು..

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರ ನಾಗರಿಕ ಸೌಲಭ್ಯಗಳ ಸಂಕೀರ್ಣ ನಿರ್ಮಿಸಿ ಆರು ತಿಂಗಳು ಕಳೆದರೂ ಅದನ್ನು ಉದ್ಘಾಟಿಸುವ, ಕ್ಯಾಂಟೀನ್ ಆರಂಭಿಸುವ ಗೋಜಿಗೆ ಹೋಗಿರಲಿಲ್ಲ. ಸುತ್ತಲಿನ ಹೋಟೆಲ್, ಅಂಗಡಿಗಳ ಮಾಲೀಕರ ಒತ್ತಡದ ಕಾರಣ ಕ್ಯಾಂಟೀನ್ ಆರಂಭ ತಡವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು.

ಅದನ್ನು ತಳ್ಳಿ ಹಾಕಿದ್ದ ಜಿಲ್ಲಾ ಆಸ್ಪತ್ರೆ ಆಡಳಿತ, ರಾಜ್ಯಮಟ್ಟದಲ್ಲಿ ಗುತ್ತಿಗೆ ನೀಡಿಕೆ ಪ್ರಕ್ರಿಯೆಯಲ್ಲಿ ಆದ ವಿಳಂಬ ಕ್ಯಾಂಟೀನ್ ಉದ್ಘಾಟನೆ ತಡವಾಗಲು ಕಾರಣ ಎಂದು ಸ್ಪಷ್ಟಪಡಿಸಿತ್ತು.ಈ ಬಗ್ಗೆ ಮಾರ್ಚ್ 18ರಂದು ಪ್ರಜಾವಾಣಿ ವಿಶೇಷ ವರದಿ ಪ್ರಕಟಿಸಿತ್ತು.

**

ಕ್ಯಾಂಟೀನ್ ಮತ್ತೆ ಯಾವಾಗ ಶುರುವಾಗಲಿದೆ ಎಂದರೆ ಆಸ್ಪತ್ರೆ ಸಿಬ್ಬಂದಿ ಗೊತ್ತಿಲ್ಲ ಎನ್ನುತ್ತಾರೆ. ಪಕ್ಕದ ಹಾಲಿನ ಬೂತ್‌ನವರ ಬಳಿ ಕೇಳಿದರೆ ಸೋಮವಾರ ಬರುವುದಾಗಿ ಹೇಳಿದ್ದಾರೆ – ಮಹಾಂತಪ್ಪ ಜೋಗಿನ, ಸ್ಥಳೀಯ ನಿವಾಸಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT