ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಬೆವರಿಳಿಸಿ

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಈಗೊಂದು ಎರಡು ವರ್ಷದ ಹಿಂದೆ ಪಾವಗಡದಿಂದ ಒಬ್ಬರು ನಮ್ಮ ಚಿಕಿತ್ಸಾಲಯಕ್ಕೆ ಬಂದು ತಮಗೆ ಆಗುತ್ತಿರುವ ಕಾಲುನೋವಿನ ವಿವರಗಳನ್ನು ಹೇಳುತ್ತಾ ಅಳಲು ಪ್ರಾರಂಭಿಸಿದರು. ನನಗೆ ಈ ನೋವನ್ನು ನೀವು ಹೇಗಾದರೂ ಗುಣ ಮಾಡಿ ಕೊಡಲೇಬೇಕು. ನಿಮ್ಮನ್ನೇ ನಂಬಿ ಬಂದಿದ್ದೇನೆ ಎಂದರು.

ಸರಿ, ನಮ್ಮ ಕ್ರಮದಂತೆ ಅವರ ಕಥೆ ಎಲ್ಲ ಕೇಳಿದ ನಂತರ ಔಷಧವೇನೋ ಕೊಟ್ಟೆವು; ಆದರೆ ಅವರಿಗೆ ಸೀಲಿಂಗ್‌ ಫ್ಯಾನ್‌ ಹಾಕಬಾರದು, ಎ.ಸಿ. 24 ಡಿಗ್ರಿ ಉಷ್ಣತೆಯಲ್ಲಿರಬೇಕು; ಅದನ್ನು ಪಾಲಿಸಲು ಸಾಧ್ಯವಾದರೆ ಮಾತ್ರ ಔಷಧ ಕೆಲಸ ಮಾಡುತ್ತದೆ, ಇಲ್ಲದಿದ್ದರೆ ಅದು ಕೆಲಸ ಮಾಡುವುದಿಲ್ಲ – ಎಂದು ಹೇಳಿದೆವು. ಇದನ್ನು ಪಾಲಿಸಲು ಪಾವಗಡದಲ್ಲಿ ಕಷ್ಟ, ಎಂದು ಅವರು ಹೇಳಿದರು. ಇದನ್ನು ಪಾಲಿಸದೆ ಸಾಧ್ಯವೇ ಇಲ್ಲ ಎಂದು ಅವರಿಗೆ ಖಡಾಖಂಡಿತವಾಗಿ ಹೇಳಿದ್ದಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡು ಹೋದರು. ಇದು ನಡೆದದ್ದು ಶನಿವಾರ; ಸೋಮವಾರ ಬೆಳಗ್ಗೆ ಅವರು ಫೋನ್ ಮಾಡಿ, ‘ಡಾಕ್ಟ್ರೇ! ನಾನೀಗ ಸುಖವಾಗಿ ನಡೆಯುತ್ತಿದ್ದೇನೆ; ಔಷಧವನ್ನು ತೆಗೆದುಕೊಳ್ಳಲೇಬೇಕಾ?’ ಎಂದು ಕೇಳಿದರು. ‘ಏಕಮ್ಮಾ? ಏನಾಯಿತು?’ ಎಂದದ್ದಕ್ಕೆ ‘ಒಂದು ದಿನ ನಾನು ಫ್ಯಾನ್ ಉಪಯೋಗಿಸಲಿಲ್ಲ, ಎಸಿಯನ್ನು ನೀವು ಹೇಳಿದಂತೆ 24 ಡಿಗ್ರಿಗೆ ಇಟ್ಟುಕೊಂಡೆ, ಸೆಕೆಯೇನೋ ಆಯಿತು; ಬೆವರಿಳಿಯಿತು. ಆದರೆ ಕಾಲುನೋವು ಶೇ 90ರಷ್ಟು ಕಡಿಮೆಯಾಗಿದೆ. ಬೆವರುವುದರಿಂದ ಇಷ್ಟೆಲ್ಲಾ ಅನುಕೂಲವಿದೆ ಎಂದು ತಿಳಿದಿರಲಿಲ್ಲ, ಒಂದೋ ಎಸಿ, ಇಲ್ಲ ಫ್ಯಾನ್ ಇಲ್ಲದೆ ಇರುತ್ತಿರಲಿಲ್ಲ, ಇನ್ನು ಮುಂದೆ ಹಾಗೆ ಮಾಡುವುದಿಲ್ಲ’ ಎಂದು ಧನ್ಯವಾದಗಳನ್ನು ಅರ್ಪಿಸಿದರು.

ಈ ವಿಷಯ ಹೇಳಲು ಕಾರಣವಿಷ್ಟೆ: ಬೆವರುವುದು ದೇಹಕ್ಕೆ ಎಷ್ಟು ಅವಶ್ಯಕ ಎಂದು ತಿಳಿಸಲು. ಬೆವರುವಿಕೆ ದೇಹದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ದೇಹವೇ ಮಾಡಿಕೊಂಡಿರುವ ಉಪಾಯ ಅದು. ’ಅತಿ ಸರ್ವತ್ರ ವರ್ಜಯೇತ್’ ಎನ್ನುವಂತೆ ಅತಿಯಾಗಿ ಬೆವರುವುದು ಅನಾರೋಗ್ಯದ ಲಕ್ಷಣವೂ ಆಗಿರಬಹುದಾದರೂ, ಬೆವರದೇ ಇರುವುದೇ ಅನೇಕ ರೋಗಗಳ ಮೂಲವಾಗುತ್ತದೆ. ಆಯುರ್ವೇದದ ಪ್ರಕಾರ – ಸ್ವೇದಾವರೋಧ ಅಥವಾ ಸ್ವೇದಾಬಾಧಾ, ಎಂದರೆ ಬೆವರು ಬಾರದಿರುವುದು ಅಥವಾ ಬೆವರನ್ನು ತಡೆಯುವುದು, ಮೈನೆವೆ, ಚರ್ಮ ಕೆಂಪಗಾಗುವುದು, ದಮ್ಮು, ಅಮ್ಲಪಿತ್ತ, ಅಜೀರ್ಣ, ಹೊಟ್ಟೆಯುಬ್ಬರ – ಮೊದಲಾದ ರೋಗ ಹಾಗೂ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಬೆವರುವಿಕೆ ಎನ್ನುವುದು ಚರ್ಮದ ಮುಖಾಂತರ ದೇಹದಲ್ಲಿರುವ ನೀರಿನಂಶವನ್ನು ಹೊರಹಾಕುವ ಒಂದು ಪ್ರಕ್ರಿಯೆ. ಇದರಿಂದ ಚರ್ಮದ ಮೇಲಿನ ತೇವಾಂಶವು ಚರ್ಮವನ್ನು ತಂಪಾಗಿ ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ ಬೆವರುವಾಗ ಚರ್ಮದಲ್ಲಿರುವ ರೋಮಕೂಪಗಳು, ಅತಿ ಸಣ್ಣ ರಕ್ತನಾಳಗಳು ವಿಶಾಲವಾಗುತ್ತವೆ. ಇದರಿಂದ ಅವು ವಾತಾವರಣದಲ್ಲಿಯ ತೇವಾಂಶವನ್ನೂ ಒಳಗೆ ಎಳೆದುಕೊಂಡು ಹೋಗುವುದರಿಂದ, ದೇಹದ ಆಂತರಿಕ ಉಷ್ಣಾಂಶವೂ ಕಡಿಮೆಯಾಗುತ್ತದೆ. ಆದ್ದರಿಂದ ತೇವಾಂಶ ಕಡಿಮೆ ಇರುವ ವಾತಾವರಣದಲ್ಲಿರುವವರು ಬೆವರಿದರೆ ಮೈಉರಿ, ಉರಿಶೀತ - ಮೊದಲಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಕಾರಣದಿಂದಲೇ, ಕರಾವಳಿಯಲ್ಲಿ ಬೆವರಿದರೆ ತೊಂದರೆ ಅನುಭವಿಸದವರು ಬೆಂಗಳೂರಿನಲ್ಲಿ ಬೆವರಿದರೆ ಅಥವಾ ಬೆಂಗಳೂರಿಗೆ ಬಂದರೆ ನಮಗೆ ಅಲರ್ಜಿ ಆಗುತ್ತದೆ ಎಂದು ಹೇಳುವುದು.

ಇತ್ತೀಚಿನ ದಿನಗಳಲ್ಲಿ ಅಮ್ಲಪಿತ್ತರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಖಾರ ಅಥವಾ ಹಸಿಮೆಣಸಿನಕಾಯಿಯ ಪದಾರ್ಥಗಳನ್ನು ತಿನ್ನಲು ಸಾಧ್ಯವೇ ಆಗದಿರುವಷ್ಟು ತೊಂದರೆ ಅನುಭವಿಸುತ್ತಿರುವ ಜನರೆಷ್ಟೋ ಮಂದಿ. ನಮ್ಮ ಹಿರಿಯರು ತಿಂದಷ್ಟು ಖಾರವನ್ನು ತಿನ್ನಲು ಸಾಧ್ಯವಾಗುತ್ತಿಲ್ಲವಲ್ಲಾ ಎಂದು ಕೊರಗುತ್ತಿರುವವರು ಅದೆಷ್ಟೋ ನಗರವಾಸಿಗಳು. ಆದರೆ ಉತ್ತರ ಕರ್ನಾಟಕದ ಜನರು ಹಸಿಮೆಣಸಿನಕಾಯಿಯನ್ನು ಹಸಿಯಾಗಿ ತಿನ್ನಲು ಶಕ್ತರಾದರೆ, ನಗರವಾಸಿಗಳು ಮೆಣಸಿನಕಾಯಿ ಹೆಸರು ಹೇಳಲೂ ಹೆದರುವವರಿದ್ದಾರೆ!

ಇದನ್ನು ಗಮನಿಸಿದ ನಾವು ಅಧ್ಯಯನ ನಡೆಸಿದಾಗ ಸ್ಪೈಸ್ ಇಂಡಿಯಾ(spice India)ದ ಸಂಶೋಧನೆಯಂತೆ ಹಸಿಮೆಣಸಿನಕಾಯಿಗೆ ಮೈ ಬೆವರಿಸುವ ಸಾಮರ್ಥ್ಯ ಹೆಚ್ಚಿರುವುದರಿಂದ ಅತಿ ಹೆಚ್ಚು ಬಿಸಿಲಿರುವ ಪ್ರದೇಶಗಳಲ್ಲಿ ಮಸಾಲೆ ಹಾಗೂ ಖಾರದ ಉಪಯೋಗ ಹೆಚ್ಚಿರುತ್ತದೆ. ಅಲ್ಲದೆ ಬಿಸಿಲಿರುವ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿಗೆ ಖಾರ ಜಾಸ್ತಿ ಇದ್ದರೆ, ಉಷ್ಣಾಂಶ ಕಡಿಮೆ ಇರುವ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿಗೆ ಖಾರ ಕಡಿಮೆ ಇರುತ್ತದೆ. ಏಕೆಂದರೆ ಖಾರಕ್ಕೆ ಬೆವರಿಸುವ ಸ್ವಭಾವ ಇರುತ್ತದೆ. ಅದಕ್ಕೆ ವಾತಾವರಣದ ಸಹಕಾರ ಸಿಕ್ಕರೆ ದೇಹವನ್ನು ತಂಪಾಗಿಡುತ್ತದೆ; ಇಲ್ಲದಿದ್ದರೆ ದೇಹದ ಆಂತರಿಕ ಉಷ್ಣತೆಯನ್ನು ಹೆಚ್ಚಿಸುತ್ತದೆ ಹಾಗೂ ವ್ಯಾಧಿಕಾರಕವಾಗುತ್ತದೆ. ಖಾರ ಬಳಸಲು ಇಷ್ಟಪಡುವ ಇಂದಿನ ಜನತೆ ಮೈ ಬೆವರುವುದನ್ನು ಇಚ್ಛಿಸುವುದಿಲ್ಲ. ಫ್ಯಾನು, ಏಸಿ, ಕೂಲರ್ – ಎಂದು ದೇಹವನ್ನು ಬೆವರಲು ಬಿಡುವುದೇ ಇಲ್ಲ. ಇದೂ ಅಮ್ಲಪಿತ್ತ ಹೆಚ್ಚಾಗಲು ಒಂದು ಕಾರಣವಾಗಿದೆ.

ಬೆವರು ಕೇವಲ ನೀರಲ್ಲ. ಮೂತ್ರದಲ್ಲಿರುವಂತೆಯೇ ಬೆವರಿನಲ್ಲೂ ಯೂರಿಯಾ, ಲವಣಾಂಶಗಳು ಇರುತ್ತವೆ. ಇದನ್ನು ಆಯುರ್ವೇದದಲ್ಲಿ ಮೇದಸ್ಸಿನ ಮಲ, ಎಂದರೆ ಮೆದಸ್ಸು ಪಾಕವಾಗುವಾಗ ಆ ಪ್ರಕ್ರಿಯೆಯಿಂದಾಗಿ ಉತ್ಪನ್ನವಾಗುವ ವಸ್ತು. ಇಂದಿನ ವಿಜ್ಞಾನವೂ ಮೇದಸ್ಸಿನಲ್ಲಿರುವ ನೀರಿನಂಶವು ಬೆವರು, ಮೂತ್ರ ಮತ್ತು ಉಸಿರಾಡುವಾಗ ಪುಪ್ಪುಸದ ಮೂಲಕ ಆವಿಯಾಗಿ ಹೊಗುತ್ತದೆ ಎಂದು ಒಪ್ಪುತ್ತದೆ. ವ್ಯಾಯಾಮ ಮಾಡುವ ಮೂಲಕ, ಬಿಸಿಲಿನಲ್ಲಿ ಕೆಲಸ ಮಾಡುವ ಮೂಲಕ, ಮೈ ಮುರಿದು ದುಡಿಯುವ ಮೂಲಕ, ನಾವು ನಮ್ಮ ದೇಹದ ಮಲವನ್ನು ಹೊರಹಾಕಲೇಬೇಕು. ಮಲಬದ್ಧತೆ ಯಾವ ರೀತಿ ವ್ಯಾಧಿಕಾರಕವೋ ಹಾಗೆಯೇ ಬೆವರದಿರುವಂತೆ ತಡೆಯುವುದೂ ವ್ಯಾಧಿಕಾರಕವೇ. ಬೆವರುವುದರಿಂದ ಮೇದಸ್ಸಿನ ಪಾಕಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ, ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಸುಲಭವಾಗುತ್ತದೆ.

ಹಿಂದೆ ಅನೇಕ ಮನೆಗಳಲ್ಲಿ ಗರ್ಭಗೃಹ ಎಂದಿರುತ್ತಿತ್ತು. ಚಳಿಗಾಲದಲ್ಲಿ ಅಲ್ಲಿ ಕುಳಿತು ದೇಹವನ್ನು ಬೆಚ್ಚಗಿರುವಂತೆ ಕಾಪಾಡುತ್ತಿದ್ದರು; ಇಲ್ಲವೇ ಮನೆಯಲ್ಲಿ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದರು. ಇದರಿಂದ ಚರ್ಮದಲ್ಲಿರುವ ರೋಮಕೂಪಗಳು ಮತ್ತು ಬೆವರಿನರಂಧ್ರಗಳು ವಿಕಾಸಗೊಂಡು, ಮೃದುವಾಗಿ ಚರ್ಮವು ಒಣಗದಂತೆ ಕಾಪಾಡುತ್ತಿದ್ದವು. ಹಾಗಾಗಿ ಯಾವುದೇ ಕೃತಕ ಲೇಪನಗಳಿಲ್ಲದಿದ್ದರೂ, ನಮ್ಮ ಹಿರಿಯರಿಗೆ ಕಾಂತಿಯುತ ತ್ವಚೆ ಇರುತ್ತಿತ್ತು. ಏಕೆಂದರೆ, ಅವರು ಬೆವರುತ್ತಿದ್ದರು; ಬೆವರುವಂತೆ ದುಡಿಯುತ್ತಿದ್ದರು. ಎರಡೂ ಇಲ್ಲದೆ ತಂಪಾದ ವಾತಾವರಣದಲ್ಲಿರಲು ಬಯಸುವ ಇಂದಿನ ಜನಾಂಗ ತ್ವಚೆಯ ತೇವಾಂಶವನ್ನು ಕಾಪಾಡಲು, ಅನೇಕ ಕೃತಕ ರಾಸಾಯನಿಕಗಳ ಮೊರೆ ಹೋಗುವಂತಾಗಿದೆ.

ಆದರೆ ಬೊಗಸೆಯಲ್ಲಿ ಅತಿಯಾಗಿ ಬೆವರುವುದೂ ಚರ್ಮವನ್ನು ಕಪ್ಪಾಗಿಸುತ್ತದೆ, ಒಣಗಿಸುತ್ತದೆ. ಅಲ್ಲದೆ ಅಂತರ್ಭಾಗವನ್ನೂ ಒಣಗಿಸಿ ವಿಪರೀತ ಬಾಯಾರಿಕೆ, ಕಣ್ಣುರಿ – ಇತ್ಯಾದಿ ಲಕ್ಷಣಗಳನ್ನು ಉತ್ಪತ್ತಿ ಮಾಡುತ್ತದೆ. ಇದಕ್ಕಾಗಿ ತಂಪಾಗಿರಬೇಕೆಂದು, ಅತಿ ಶೀತವಾದ ನೀರು, ಪಾನಕಗಳ ಸೇವನೆ, ದೇಹದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ಬದಲಾಗಿ ನೀರನ್ನು ಕುದಿಸಿ ಅದಕ್ಕೆ ಲಾವಂಚ, ಶ್ರೀಗಂಧದ ಪುಡಿ, ಮಡಿವಾಳ – ಇತ್ಯಾದಿಗಳನ್ನು ಹಾಕಿ, ಮಡಿಕೆಯಲ್ಲಿ ಶೇಖರಿಸಿಟ್ಟು ಆ ನೀರನ್ನು ಸೇವಿಸುವುದರಿಂದ ದೇಹದ ಉಷ್ಣಾಂಶವು ಹಿತವಾಗಿರುವಂತೆ ಕಾಪಾಡಿಕೊಳ್ಳಬಹುದು. ಈ ಕಾಲದಲ್ಲಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದಲೂ, ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಇದೆಲ್ಲದರ ಜೊತೆಗೆ ಮನೆಯ ಸುತ್ತಲೂ ಗಿಡಗಳನ್ನು ಬೆಳೆಸುವುದರಿಂದ ಮನೆಯ ವಾತಾವರಣವನ್ನು ತಂಪಾಗಿರಿಸಬಹುದು. ಚಾವಣಿಯ ಮೇಲೆ ಲಾವಂಚದ ಚಾಪೆಗಳನ್ನು ಒದ್ದೆ ಮಾಡಿ ಹರಡುವ ಮೂಲಕ ಅಥವಾ ಬೆಂಡು (themacol sheet)ಗಳನ್ನು ಚಾವಣಿಯ ಮೇಲೆ ಹರಡಿ ಅದಕ್ಕೆ ಆಗಾಗ ನೀರು ಚಿಮುಕಿಸುವುದರಿಂದ ಮನೆಯನ್ನು ತಂಪಾಗಿರಿಸಬಹುದು. ಇವೆಲ್ಲವೂ ವಾತಾವರಣದಲ್ಲಿ ‌‌‌‌‌‌‌‌‌‌‌ರೂಕ್ಷತೆಯನ್ನು (ಶಾಖ) ಕಡಿಮೆ ಮಾಡಿ, ದೇಹದಲ್ಲಿರುವ ಜಲೀಯಾಂಶವು ದೇಹದಿಂದ ಹೊರಹೋಗದಂತೆ ನೋಡಿಕೊಳ್ಳುತ್ತವೆ. ಇದರಿಂದ ಜಲೀಯಾಂಶದ ಕೊರತೆಯನ್ನು ತಡೆಗಟ್ಟಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆದರೆ ಮಾನಸಿಕ ವಿಕೃತಿಗಳೂ ಸಹ ಬೆವರನ್ನು ಉತ್ಪತ್ತಿ ಮಾಡುತ್ತವೆ. ಸಿಟ್ಟು, ಭಯ, ಅತೀವ ದ್ವೇಷ. ಅತೀವ ದುಃಖ ಇವುಗಳಿಂದ ಉತ್ಪನ್ನವಾಗುವ ಬೆವರು ದೇಹದ ಹಾರ್ಮೋನುಗಳ ವ್ಯತ್ಯಾಸ, ಕಿಣ್ವಗಳ ವ್ಯತ್ಯಾಸ, ಜೀರ್ಣಕ್ರಿಯೆಯ ವ್ಯತ್ಯಾಸಕ್ಕೆ ಕಾರಣವಾಗುತ್ತದೆ; ಹೃದಯಸಂಬಂಧಿ ರೊಗಗಳಿಗೂ ಕಾರಣವಾಗುತ್ತದೆ. ಆದ್ದರಿಂದ ಈ ಮನೋವೈಷಮ್ಯಗಳು ನಮ್ಮನ್ನು ಕಾಡದಂತೆ ಎಚ್ಚರಿಕೆಯಿಂದಿರಬೇಕು.

ಕೃತಕವಾಗಿ ಬೆವರಿಸುವುದೂ ಅನೇಕ ರೋಗಗಳ ನಿವೃತ್ತಿಗೆ ಕಾರಣವಾಗುತ್ತದೆ. ಆಯುರ್ವೇದದಲ್ಲಿ ಕೃತಕವಾಗಿ ಬೆವರಿಸುವ 13 ವಿಧಾನಗಳನ್ನು ಹೇಳಿದ್ದಾರೆ. ಇವುಗಳನ್ನು ಏಕಾಂಗ ಸ್ವೇದನ, ಸರ್ವಾಂಗ ಸ್ವೇದನ ಎಂದೂ, ಅಗ್ನಿಸ್ವೇದ, ಅನಗ್ನಿ ಸ್ವೇದ ಎಂದೂ ಅನೇಕ ವಿಧವಾಗಿ ವಿಂಗಡಿಸಿದ್ದಾರೆ. ಗೆಟುನೋವು, ಕಾಲು ಊತ, ನೆಗಡಿ, ದಮ್ಮು, ಸೊಂಟನೋವು, ಪಕ್ಷಾಘಾತ – ಮುಂತಾದ ರೋಗಗಳಲ್ಲಿ ಚಿಕಿತ್ಸೆಯಾಗಿಯೂ ಬೆವರಿಸುವ ಪ್ರಕ್ರಿಯೆಯನ್ನು ಉಪಯೋಗಿಸುತ್ತಾರೆ. ಆದರೆ ಪಿತ್ತ ಹೆಚ್ಚಾಗಿರುವವರಲ್ಲಿ, ಮಧುಮೇಹ ರೋಗಿಗಳಿಗೆ, ಉರಿಯೂತದ ಲಕ್ಷಣಗಳಿರುವಾಗ, ಮದ್ಯಪಾನದ ಅಭ್ಯಾಸ ಇರುವವರಿಗೆ, ಜಲೋದರದ ರೋಗಿಗಳಿಗೆ, ಕಾಮಾಲೆಯವರಿಗೆ, ರಕ್ತಸಂಬಂಧಿ ರೋಗಿಗಳಿಗೆ ಈ ಬೆವರಿಸುವ ಚಿಕಿತ್ಸೆಗಳನ್ನು ಮಾಡಬಾರದು. ಆದ್ದರಿಂದ ಯಾರೂ ಯಾವತ್ತೂ ಸ್ವಯಂ ವೈದ್ಯವನ್ನು ಮಾಡಿಕೊಳ್ಳುವುದು ಒಳ್ಳೆಯದಲ್ಲ. ಚಿಕಿತ್ಸಾತ್ಮಕ ಪ್ರಕ್ರಿಯೆಗಳಿಗೆ ವೈದ್ಯರ ಸಲಹೆ ಪಡೆದೇ ಮುಂದುವರೆಯಬೇಕು.

ಅತಿಯಾಗಿ ಬೆವರುವುದೂ ಒಂದು ರೋಗವೇ. ಅತಿಯಾಗಿ ಚಳಿಗಾಲದಲ್ಲಿಯೂ ಬೆವರುವ ಸ್ವಭಾವದವರು ಹಣ್ಣು–ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಮಧುರವಾದ, ಪೌಷ್ಟಿಕವಾದ ಆಹಾರಗಳ ಸೇವನೆಯಿಂದ ಬೆವರುವಿಕೆಯನ್ನು ತಡೆಗಟ್ಟಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT