ನೋಟು ರದ್ದು: ರಾಹುಲ್‌ಗೆ ಸಮನ್ಸ್‌

ಮಂಗಳವಾರ, ಏಪ್ರಿಲ್ 23, 2019
33 °C
ಅಹಮದಾಬಾದ್‌ ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಮಾನನಷ್ಟ ಮೊಕದ್ದಮೆ

ನೋಟು ರದ್ದು: ರಾಹುಲ್‌ಗೆ ಸಮನ್ಸ್‌

Published:
Updated:

ಅಹಮದಾಬಾದ್‌: ಎರಡು ಪ್ರತ್ಯೇಕ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿನ ಮೆಟ್ರೊಪಾಲಿಟನ್‌ ನ್ಯಾಯಾಲಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ವಕ್ತಾರ ರಣದೀಪ್‌ ಸುರ್ಜೇವಾಲಾ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ಅಹಮದಾಬಾದ್‌ ಜಿಲ್ಲಾ ಸಹಕಾರ ಬ್ಯಾಂಕ್‌ ಈ ಪ್ರಕರಣಗಳನ್ನು ದಾಖಲಿಸಿತ್ತು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಈ ಬ್ಯಾಂಕ್‌ನ ನಿರ್ದೇಶಕರಲ್ಲಿ ಒಬ್ಬರು.

ನೋಟು ರದ್ದತಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆಯಲಾದ ಮಾಹಿತಿ ಆಧರಿಸಿ ರಾಹುಲ್‌ ಗಾಂಧಿ ಮತ್ತು ರಣದೀಪ್‌ ಸುರ್ಜೇವಾಲ್‌ ನೀಡಿದ ಹೇಳಿಕೆಗಳ ವಿರುದ್ಧ ಬ್ಯಾಂಕ್‌ ಅಧ್ಯಕ್ಷ ಅಜಯ್‌ ಪಟೇಲ್‌ ಅವರು ಮೊಕದ್ದಮೆ ದಾಖಲಿಸಿದ್ದರು.

ಮೇ 27ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎಸ್‌.ಕೆ. ಗಾಧ್ವಿ ಇಬ್ಬರಿಗೂ ಸಮನ್ಸ್‌ ಜಾರಿಗೊಳಿಸಿದ್ದಾರೆ.

2016ರ ನವೆಂಬರ್‌ 8ರಂದು ನೋಟು ರದ್ದುಗೊಳಿಸಲಾಯಿತು. ಬಳಿಕ, ಕೇವಲ ಐದೇ ದಿನಗಳಲ್ಲಿ ಈ ಬ್ಯಾಂಕ್‌ ₹745.58 ಕೋಟಿಯಷ್ಟು ರದ್ದುಗೊಳಿಸಿದ ನೋಟುಗಳನ್ನು ಬದಲಾವಣೆ ಮಾಡಿತು ಎಂದು ಕಳೆದ ವರ್ಷ ಜೂನ್‌ 22ರಂದು ರಣದೀಪ್‌ ಸುರ್ಜೇವಾಲ್‌ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ದೊರೆತ ಮಾಹಿತಿ ಬಗ್ಗೆ ತನಿಖೆ ನಡೆಯಬೇಕು ಮತ್ತು ನೋಟು ರದ್ದತಿ ಹೆಸರಿನಲ್ಲಿ ಕಪ್ಪು ಹಣವನ್ನು ಸಕ್ರಮಗೊಳಿಸುವ ಪ್ರಯತ್ನ ಇದಾಗಿತ್ತು.  ಬ್ಯಾಂಕ್‌ ಅಧ್ಯಕ್ಷ ಅಜಯ್‌ ಪಟೇಲ್‌ ಅಮಿತ್‌ ಶಾ ಆಪ್ತರು ಎಂದು ಅವರು ದೂರಿದ್ದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಹ ಟ್ವಿಟರ್‌ ಮೂಲಕ ಬಿಜೆಪಿಯನ್ನು ಟೀಕಿಸಿದ್ದರು.

‘ನೋಟು ಬದಲಾವಣೆ ಸ್ಪರ್ಧೆಯಲ್ಲಿ ಅಮಿತ್‌ ಶಾ ಅವರ ಬ್ಯಾಂಕ್‌ ಮೊದಲ ಸ್ಥಾನ ಪಡೆದಿದೆ. ಐದು ದಿನಗಳಲ್ಲಿ ₹750 ಕೋಟಿಯಷ್ಟು ಹಣ ಬದಲಾವಣೆ ಮಾಡಲಾಗಿದೆ. ನೋಟು ರದ್ದತಿಯಿಂದ ಲಕ್ಷಾಂತರ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !